ನಾವು ದೇಶ ನಡೆಸಲಾಗದು: ಕೇರಳದ ಸ್ಥಳೀಯ ಸಮಸ್ಯೆ ವಿಚಾರಣೆ ಕುರಿತಂತೆ ಸುಪ್ರೀಂ ಸಿಡಿಮಿಡಿ

ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಮಧ್ಯಪ್ರವೇಶ ಕೋರಿರುವ ಅರ್ಜಿಗಳು ತಲೆ ಎತ್ತುತ್ತಿರುವುದಕ್ಕೆ ಸಿಜೆಐ ಅಸಮಾಧಾನ ವ್ಯಕ್ತಪಡಿಸಿದರು.
CJI DY Chandrachud and Supreme Court
CJI DY Chandrachud and Supreme Court

ದೇಶದಲ್ಲಿ ಗಮನಹರಿಸಬೇಕಾದ ಸಾವಿರ ಸಮಸ್ಯೆಗಳಿದ್ದರೂ ಆ ಎಲ್ಲವನ್ನೂ ಆಲಿಸುವ ಮೂಲಕ ತಾನು ನಿಷ್ಕ್ರಿಯವಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಕಿಡಿಕಾರಿದೆ.

ಕೇರಳದಲ್ಲಿ ಬಂಧಿತ ಆನೆಗಳ ಸ್ಥಿತಿಗತಿಗೆ ಸಂಬಂಧಿಸಿದ ಮಧ್ಯಪ್ರವೇಶ ಕೋರಿದ ಅರ್ಜಿಯ (ಐಎ) ಪ್ರಸ್ತಾಪದ ಸಂದರ್ಭದಲ್ಲಿ  ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಮಧ್ಯಪ್ರವೇಶ ಕೋರಿರುವ ಅರ್ಜಿಗಳು (ಐ ಎ) ತಲೆ ಎತ್ತುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು ದೇಶದಲ್ಲಿ ಸುಪ್ರೀಂ ಕೋರ್ಟ್‌ ಪಾತ್ರ ಏನೆಂದು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದರು.  

Also Read
ಮಣಿಪುರ ಹಿಂಸಾಚಾರ: ಸಂತ್ರಸ್ತರ ಪರಿಹಾರ ಹೆಚ್ಚಳ, ಗುರುತುಪತ್ರ ಮರು ಒದಗಿಸಲು ಸುಪ್ರೀಂಗೆ ಮಹಿಳಾ ಸಮಿತಿ ಒತ್ತಾಯ

“ಪ್ರಕರಣ ಸ್ಥಳೀಯ ಸಮಸ್ಯೆಗೆ ಸಂಬಂಧಿಸಿದ್ದಾಗಿದೆ. ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಸ್ಥಳೀಯ ಪರಿಸ್ಥಿತಿಗಳು ಅರ್ಥವಾಗುತ್ತವೆ. ಒಂದು ವೇಳೆ ಹೈಕೋರ್ಟ್‌ ತಪ್ಪೆಸಗಿದಾಗ ಅದನ್ನು ನಾವು (ಸುಪ್ರೀಂ ಕೋರ್ಟ್‌) ಪರಿಶೀಲಿಸಬಹುದು" ಎಂದು ನ್ಯಾಯಮೂರ್ತಿಗಳು ಹೇಳಿದರು. ಈ ನಡುವೆಯೂ ಅರ್ಜಿದಾರರು ಮನವಿಯನ್ನು ಆಲಿಸುವಂತೆ ಕೋರಿದಾಗ, "ಈ ರೀತಿ ದೇಶ ನಡೆಸಲು ಸಾಧ್ಯವೇ?” ಎಂದು ಸಿಜೆಐ ಅವರು ಪ್ರಶ್ನಿಸಿದರು.

ಪ್ರಕರಣವನ್ನು ಹಿರಿಯ ವಕೀಲ ಸಿ ಯು ಸಿಂಗ್‌ ಪ್ರಸ್ತಾಪಿಸಿದ ವೇಳೆ ಇದನ್ನು ಕೇರಳ ಹೈಕೋರ್ಟ್‌ನಲ್ಲೇ ಏಕೆ ಪ್ರಸ್ತಾಪಿಸಬಾರದು ಎಂದು ಸಿಜೆಐ ಕೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ವಿಸ್ತೃತ ಪೀಠದೆದುರು ಪ್ರಕರಣವೊಂದು ಬಾಕಿ ಇದೆ ಎಂದು ಸಿಂಗ್‌ ನುಡಿದರು.

ಆದರೂ ಪಟ್ಟುಬಿಡದ ಸಿಜೆಐ ಅನುಭವಿ ನ್ಯಾಯಮೂರ್ತಿಗಳಿರುವ ಹೈಕೋರ್ಟ್‌ನಲ್ಲೇ ಏಕೆ ಪ್ರಶ್ನಿಸಬಾರದು. ಸರ್ವೋಚ್ಚ ನ್ಯಾಯಾಲಯ ನಿಷ್ಕ್ರಿಯಗೊಳ್ಳುವ ರೀತಿಯಲ್ಲಿ ಎಲ್ಲವನ್ನೂ ಆಲಿಸುತ್ತಾ ಕೂರಲು ಸಾಧ್ಯವಿಲ್ಲ ಎಂದರು.

ಈ ವೇಳೆ ಅರ್ಜಿದಾರರು 2018 ರಿಂದ 2022ರವರೆಗೆ ಸೆರೆಹಿಡಿಯಲಾದ 135 ಆನೆಗಳು ಸಾವನ್ನಪ್ಪಿವೆ ಎಂದು ವಿವರಿಸಲು ಪ್ರಯತ್ನಿಸಿದರು. ಆದಾಗ್ಯೂ, ಪ್ರಕರಣವನ್ನು ಸ್ಥಳೀಯ ಹೈಕೋರ್ಟ್‌ ಆಲಿಸಲು ಸಮರ್ಥವೆನ್ನುವ ಅಭಿಪ್ರಾಯವನ್ನು ಸಿಜೆಐ ವ್ಯಕ್ತಪಡಿಸಿದರು.

ಅಂತಿಮವಾಗಿ ಪೀಠವು ಸೆರೆಯಲ್ಲಿರುವ ಆನೆಗಳ ಸಮಸ್ಯೆಗೆ ಸಂಬಂಧಿಸಿದ ಪ್ರಧಾನ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಮಧ್ಯ ಪ್ರವೇಶ ಕೋರಿರುವ ಪ್ರಸ್ತುತ ಅರ್ಜಿದಾರರ ವಾದ ಆಲಿಸಲು ಒಪ್ಪಿಕೊಂಡಿತು. ಡಿಸೆಂಬರ್‌ ಮೊದಲ ವಾರದಲ್ಲಿ ಪ್ರಧಾನ ಪ್ರಕರಣದ ವಿಚಾರಣೆ ನಡೆಯಲಿದೆ.

Related Stories

No stories found.
Kannada Bar & Bench
kannada.barandbench.com