

“ಧರ್ಮದ ಹೆಸರಲ್ಲಿ ಸರ್ಕಾರಿ ಜಾಗ ಅತಿಕ್ರಮಣ ಮಾಡಲು ದೇವರ ಹೆಸರಿನಲ್ಲಿ ರಿಯಲ್ ಎಸ್ಟೇಟ್ ನಡೆಸಲು ಅವಕಾಶ ನೀಡಲಾಗದು. ರಾಮ-ರಹೀಮ್ ಒಟ್ಟಿಗೆ ಬಂದಿರುವುದನ್ನು ನೋಡಿದರೆ ಏನೋ ಸಂಶಯವಿದೆ” ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಅತ್ಯಂತ ಕಟುವಾಗಿ ನುಡಿದಿದೆ.
ಕೋಲಾರ ಜಿಲ್ಲೆ ವೇಮಗಲ್ ಹೋಬಳಿಯ ಸರ್ಕಾರಿ ಶಾಲೆಯ ಕಾಂಪೌಂಡ್ ಹಾಗೂ ಕ್ಯಾಲನೂರು ಗ್ರಾಮದ ರಸ್ತೆಯ ಮಧ್ಯೆ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿರುವ ಮಳಿಗೆಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಜಾರಿಗೊಳಿಸಿರುವ ನೋಟಿಸ್ ಪ್ರಶ್ನಿಸಿ ವಿರಾಟ್ ಹಿಂದೂ ಸೇನಾ ಚಾರಿಟಬಲ್ ಟ್ರಸ್ಟ್ (ರಿ) ಹಾಗೂ ಜಾಮೀಯಾ ಮಸೀದಿ ಟ್ರಸ್ಟ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು “ಗ್ರಾಮಸ್ಥರ ಒಕ್ಕೊರಲ ತೀರ್ಮಾನದಂತೆ ಕಟ್ಟಡ ನಿರ್ಮಿಸಲಾಗಿದ್ದು, ಅದಕ್ಕೆ ಗ್ರಾಮದ ಪ್ರತಿಯೊಬ್ಬರೂ ವಂತಿಗೆ ನೀಡಿದ್ದಾರೆ. ನಾಳೆ ಕಟ್ಟಡ ತೆರವು ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಆತುರದ ಕ್ರಮಕೈಗೊಳ್ಳದಂತೆ ನಿರ್ದೇಶಿಸಬೇಕು” ಎಂದು ಮನವಿ ಮಾಡಿದರು.
ಆಗ ಪೀಠವು “ದೇವರ ಹೆಸರಿನಲ್ಲಿ ಯಾವುದನ್ನೂ ಆಕ್ರಮಿಸಿಕೊಳ್ಳಕೂಡದು. ದೇವರು ಒತ್ತುವರಿದಾರನಾಗಲು ಬಯಸಲ್ಲ. ಆಸ್ತಿಯು ವಿರಾಟ್ ಹಿಂದೂ ಸೇನಾ ಚಾರಿಟಬಲ್ ಟ್ರಸ್ಟ್ ಹಾಗೂ ಜಾಮೀಯಾ ಮಸೀದಿ ಟ್ರಸ್ಟ್‌ಗೆ ಸೇರಿದೆ ಎಂಬುದಕ್ಕೆ ಒಂದು ದಾಖಲೆ ತೋರಿಸಿ. ದೇವಸ್ಥಾನ ಮತ್ತು ಮಸೀದಿಯನ್ನು ಸಾರ್ವಜನಿಕ ಜಾಗದಲ್ಲಿ ನಿರ್ಮಿಸಲಾಗದು. ಸರ್ಕಾರದ ಆಸ್ತಿಯನ್ನು ಹೇಗೆ ಕಬ್ಜ ಮಾಡಲಾಗುತ್ತದೆ?” ಎಂದು ಕಿಡಿಕಾರಿತು.
ಮುಂದುವರಿದು, “ಅರ್ಜಿದಾರರು ವಿರಾಟ್ ಹಿಂದೂ ಸೇನಾ ಚಾರಿಟಬಲ್ ಟ್ರಸ್ಟ್. ಸರ್ಕಾರಿ ಜಾಗದಲ್ಲಿ ಕಟ್ಟಡ, ಅಂಗಡಿ ನಿರ್ಮಿಸಿದ್ದಾರೆ, ಏನಿದು ರಿಯಲ್ ಎಸ್ಟೇಟ್ ಉದ್ಯಮ? ಇಲ್ಲಿ ಸಂಶಯಕ್ಕೆ ಎಡೆಮಾಡಿಕೊಡುತ್ತಿರುವುದು ರಾಮ್-ರಹೀಮ್ ಎಂದಿಗೂ ಒಟ್ಟಿಗೆ ಬರಲ್ಲ ಎಂಬುದಾಗಿದೆ” ಎಂದಿತು.
ಸರ್ಕಾರದ ವಕೀಲರನ್ನು ಕುರಿತು “ಅರ್ಜಿದಾರರ ನೈಜತೆಯನ್ನು ಪತ್ತೆ ಮಾಡಿ. ಇಲ್ಲಿ ಸತ್ಯವಿದ್ದರೆ ಪರಿಗಣಿಸಲು ಸರ್ಕಾರಕ್ಕೆ ಬಿಡಲಾಗುವುದು. ಅದರಲ್ಲಿ ಪ್ರಾಮಾಣಿಕತೆ ಕಾಣದಿದ್ದರೆ ರಕ್ಷಣೆ ನೀಡುವುದಿಲ್ಲ. ದೇವರ ಹೆಸರಿನಲ್ಲಿ ಯಾರೂ ಸರ್ಕಾರದ ಆಸ್ತಿಯನ್ನು ಕಬ್ಜ ಮಾಡಲಾಗದು. ಅಂಗಡಿ, ಮಳಿಗೆ ನಿರ್ಮಿಸುವವರೆಗೆ ಸರ್ಕಾರ ಹೇಗೆ ಸುಮ್ಮನಿತ್ತು? ಇದು ಚಾರಿಟಬಲ್ ಟ್ರಸ್ಟ್ ಆಗಿದ್ದರೆ ಅವರಿಗೆ ಅಂಗಡಿ-ಮಳಿಗೆ ಮಾಡಿ ಬಾಡಿಗೆಗೆ ನೀಡುವುದು ಏನಿದೆ? ಒಂದೊಮ್ಮೆ ಅವರಿಗೆ ಸರ್ಕಾರ ಭೂಮಿ ಮಂಜೂರು ಮಾಡಿದರೂ ಅದಕ್ಕೆ ಅವಕಾಶವಿಲ್ಲ” ಎಂದು ನ್ಯಾಯಾಲಯ ಹೇಳಿತು.
ಅರ್ಜಿದಾರರ ಪರ ವಕೀಲರು “ಭೂಮಿ ಹಂಚಿಕೆ ನಿಯಮ 21ರ ಅಡಿ ಸರ್ಕಾರದ ಭೂಮಿ ಹಂಚಿಕೆಗೆ ನಾವು ಅರ್ಹರಾಗಿದ್ದೇವೆ. ಇದರ ಸಂಬಂಧಿತ ಮನವಿಯು ಜಿಲ್ಲಾಧಿಕಾರಿಯ ಮುಂದೆ ಇದ್ದು, ಕಳೆದ ಹತ್ತು ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದೇವೆ. 2015ರಲ್ಲಿ ಸರ್ಕಾರ ಆಕ್ಷೇಪಣೆ ಆಹ್ವಾನಿಸಿದ್ದು, ಯಾರು ಆಕ್ಷೇಪ ಎತ್ತಿಲ್ಲ. ಗ್ರಾಮದ ಪ್ರತಿಯೊಬ್ಬರಿಂದ ಚಂದ ಎತ್ತಿ ಕಟ್ಟಡ ನಿರ್ಮಿಸಲಾಗಿದೆ. ಪ್ರಕರಣವನ್ನು ತಹಶೀಲ್ದಾರ್‌ಗೆ ತನಿಖೆಗೆ ಆದೇಶಿಸಲಾಗಿದೆ” ಎಂದರು.
ಇದನ್ನು ಆಲಿಸಿದ ಪೀಠವು “ನಾಳೆಯವರೆಗೆ ಏನೂ ಆಗುವುದಿಲ್ಲ. ಅರ್ಜಿದಾರರ ನೈಜತೆ ಪತ್ತೆ ಮಾಡಿ” ಎಂದು ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.