ವಿಚಾರಣೆ ಲೈವ್‌ ವೇಳೆ ಅಶ್ಲೀಲ ದೃಶ್ಯ: ಕರ್ನಾಟಕದಂಥ ಘಟನೆ ನಡೆಯದಿರಲು ವಿಕನ್ಸೋಲ್‌ ಬಳಕೆ ಉತ್ತಮ ಎಂದ ಕೇರಳ ಹೈಕೋರ್ಟ್‌

ವರ್ಚುವಲ್ ನ್ಯಾಯಾಲಯದ ವಿಚಾರಣೆ ವೇಳೆ ಡಿ. 4ರಂದು ಅಪರಿಚಿತ ವ್ಯಕ್ತಿಗಳು ಅಶ್ಲೀಲ ಚಿತ್ರ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಾಲಯ ಕಲಾಪ ಮತ್ತು ವಿಡಿಯೋ ಕಾನ್ಫರೆನ್ಸ್ ವಿಚಾರಣೆಗಳ ನೇರ ಪ್ರಸಾರವನ್ನು ಸ್ಥಗಿತಗೊಳಿಸಿತ್ತು.
ಕೇರಳ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿ ಎ ಮುಹಮ್ಮದ್ ಮುಸ್ತಾಕ್
ಕೇರಳ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿ ಎ ಮುಹಮ್ಮದ್ ಮುಸ್ತಾಕ್

ತಾನು ವಿಚಾರಣೆಗಳ ನೇರಪ್ರಸಾರಕ್ಕಾಗಿ ಬಳಸುತ್ತಿರುವ ʼವಿಕನ್ಸೋಲ್‌ ಕೋರ್ಟ್‌ʼ ವೇದಿಕೆಯು ಸೈಬರ್ ದಾಳಿಯಿಂದ ಭದ್ರತೆ ಒದಗಿಸುತ್ತದೆ ಎಂದು ಕೇರಳ ಹೈಕೋರ್ಟ್‌ ಗುರುವಾರ ತಿಳಿಸಿದೆ.

ಉಳಿದ ವೇದಿಕೆಗಳನ್ನು ಬಳಸಿ ವಿಚಾರಣೆ ಮತ್ತು ನೇರ ಪ್ರಸಾರ ಮಾಡಿದರೆ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದಂತಹ ಘಟನೆಗಳು ನಡೆಯಬಹುದು ಎಂದು ನ್ಯಾಯಮೂರ್ತಿ ಎ ಮುಹಮ್ಮದ್ ಮುಷ್ತಾಕ್ ಅಭಿಪ್ರಾಯಪಟ್ಟಿದ್ದಾರೆ. ನ್ಯಾ. ಶೋಭಾ ಅಣ್ಣಮ್ಮ ಈಪನ್ ಅವರನ್ನು ಒಳಗೊಂಡ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಲಾಗಿದೆ.

ಕರ್ನಾಟಕ ಹೈಕೋರ್ಟ್‌ನಲ್ಲಿ ಡಿ. 4ರಂದು ವರ್ಚುವಲ್ ವಿಚಾರಣೆ ವೇಳೆ ಅಪರಿಚಿತ ವ್ಯಕ್ತಿಗಳು ಅಶ್ಲೀಲ ಚಿತ್ರ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಕಲಾಪ ಮತ್ತು ವಿಡಿಯೋ ಕಾನ್ಫರೆನ್ಸ್ ವಿಚಾರಣೆಗಳನ್ನು ಸ್ಥಗಿತಗೊಳಿಸಿತ್ತು.

ಐಪಿ ವಿಳಾಸ ನಿರ್ದಿಷ್ಟವಾಗಿ ವೈಟ್‌ಲಿಸ್ಟ್‌ ಮಾಡದ ಹೊರತು ಭಾರತದ ಹೊರಗಿನ ಐಪಿ ವಿಳಾಸ ಹೊಂದಿರುವ ಬಳಕೆದಾರರ ಪ್ರವೇಶವನ್ನು ವಿಕನ್ಸೋಲ್ ತಡೆಯುತ್ತದೆ ಎಂದು ನ್ಯಾಯಮೂರ್ತಿ ಮುಷ್ತಾಕ್‌ ಗಮನಸೆಳೆದರು.

"ವಿಕನ್ಸೋಲ್‌ ಬಳಸಲು ನಾವು ಬಯಸುತ್ತೇವೆ. ಅವರು (ವಕೀಲರು) ನೋಂದಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಕರ್ನಾಟಕ ಹೈಕೋರ್ಟ್ ನಲ್ಲಿ ನಡೆದಂತೆಯೇ ಇಲ್ಲಿಯೂ ನಡೆಯಬಹುದು. ವಿಕನ್ಸೋಲ್‌ನಲ್ಲಿ ಇದು ಸಾಧ್ಯವಾಗದು. ವೈಟ್ ಲಿಸ್ಟ್ ಮಾಡದ ಹೊರತು ಅದನ್ನು (ವಿಕನ್ಸೋಲ್) ಭಾರತದ ಹೊರಗಿನ ಐಪಿ ವಿಳಾಸದಿಂದ ಬಳಸಲು ಸಾಧ್ಯವಿಲ್ಲ. ಭಾರತದ ಹೊರಗಿನ ಐಪಿ ವಿಳಾಸದಿಂದ ಕೇರಳ ಹೈಕೋರ್ಟ್ ಜಾಲತಾಣವನ್ನು ಬಳಸುವುದನ್ನು ಅದು ತಡೆಯುತ್ತದೆ" ಎಂದು ನ್ಯಾಯಾಲಯ ನುಡಿಯಿತು.

ಸೈಬರ್ ಭದ್ರತೆಯ ವಿಚಾರದಲ್ಲಿ ವಿಕನ್ಸೋಲ್ ಉತ್ತಮ ರಕ್ಷಣೆ ನೀಡುತ್ತದೆ ಎಂದು ನ್ಯಾ. ಮುಸ್ತಾಕ್ ಅಭಿಪ್ರಾಯಪಟ್ಟರು.

VConsol ಕೋರ್ಟ್ ಲಾಗ್-ಇನ್ ಪುಟ
VConsol ಕೋರ್ಟ್ ಲಾಗ್-ಇನ್ ಪುಟ

ವಿಕನ್ಸೋಲ್‌ನಲ್ಲಿ ವರ್ಚುವಲ್ ವಿಚಾರಣೆಯಲ್ಲಿ ಭಾಗಿಯಾಗುವ ವಕೀಲರು ಮೊದಲು ನೋಂದಾಯಿಸಿಕೊಳ್ಳಬೇಕಾಗುತ್ತದೆ ಮತ್ತು ʼವಿಕನ್ಸೋಲ್ ಕೋರ್ಟ್‌ʼನಲ್ಲಿ ಖಾತೆ ಹೊಂದಿರಬೇಕಾಗುತ್ತದೆ.

ಕೋವಿಡ್‌ ಎರಡನೇ ಅಲೆ ನಂತರ ಕೇರಳ ಹೈಕೋರ್ಟ್ ಜೂನ್ 2021ರಲ್ಲಿ ವರ್ಚುವಲ್ ವಿಚಾರಣೆ ನಡೆಸಲು ವಿಕನ್ಸೋಲ್ ಬಳಕೆ ಆರಂಭಿಸಿತ್ತು.

Related Stories

No stories found.
Kannada Bar & Bench
kannada.barandbench.com