ಪಶ್ಚಿಮ ಬಂಗಾಳದಲ್ಲಿ ಜುಲೈ 8 ರಂದು ನಡೆದ ಪಂಚಾಯತ್ ಚುನಾವಣೆ ವೇಳೆ ಹಿಂಸಾಚಾರ ನಿಯಂತ್ರಿಸಲು ವಿಫಲವಾದದ್ದಕ್ಕೆ ಕಲ್ಕತ್ತಾ ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಹಿಂಸಾಚಾರದ ಆರೋಪವನ್ನು ಪರಸ್ಪರ ಒಬ್ಬರ ಮೇಲೋಬ್ಬರು ವರ್ಗಾಯಿಸಿದ ರೀತಿ ಬಗ್ಗೆ ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ನೇತೃತ್ವದ ಪೀಠ ಅಸಮಾಧಾನ ವ್ಯಕ್ತಪಡಿಸಿತು.
"ಒಬ್ಬರು ಇನ್ನೊಬ್ಬರನ್ನು ದೂಷಿಸುತ್ತಿದ್ದಾರೆ. ಆ ಇನ್ನೊಬ್ಬರು ಬೇರೊಬ್ಬರನ್ನು ದೂಷಿಸುತ್ತಿದ್ದಾರೆ. ಹೀಗಿರುವಾಗ ನಾವು ಎಷ್ಟು ಆದೇಶಗಳನ್ನು ರವಾನಿಸಿ ಏನು ಪ್ರಯೋಜನ?" ಎಂದು ಮುಖ್ಯ ನ್ಯಾಯಮೂರ್ತಿಗಳು ಕೇಳಿದರು.
ರಾಜ್ಯ ಚುನಾವಣಾ ಆಯೋಗವನ್ನು ಉದ್ದೇಶಿಸಿ "ನಿಮಗೆ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ? ನಿಮಗೆ ತಿಳಿದಿದೆಯೇ, ನಮ್ಮ (ಹೈಕೋರ್ಟ್) ರಿಜಿಸ್ಟ್ರಾರ್ ಅವರು ಹಿಂಸಾಚಾರವನ್ನು ಎತ್ತಿ ತೋರಿಸುವ 44ಕ್ಕೂ ಹೆಚ್ಚು ಇಮೇಲ್‌ಗಳನ್ನು ಸ್ವೀಕರಿಸಿದ್ದಾರೆ" ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ ಚುನಾವಣೆ ವೇಳೆ ದೊಡ್ಡ ಪ್ರಮಾಣದ ಹಿಂಸಾಚಾರ ನಡೆದಿದೆ ಎಂಬ ಆತಂಕದ ಬಗ್ಗೆ ವರದಿ ಸಲ್ಲಿಸುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು.
ನಾಮಪತ್ರ ಹಿಂಪಡೆಯುವ ಸಂದರ್ಭದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಇಂದು ವರದಿ ಸಲ್ಲಿಸಿದ್ದು, ಹಿಂಪಡೆಯುವ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ವಿವರಿಸಿತು. ನ್ಯಾಯಾಲಯ ಅದನ್ನು ದಾಖಲೆಯಲ್ಲಿ ಸ್ವೀಕರಿಸಿತು.