

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್) ಹಿಂಸೆ, ಬೆದರಿಕೆ ಹಾಗೂ ನಿರಂತರ ರಾಜಕೀಯ ಹಸ್ತಕ್ಷೇಪದಿಂದ ತೊಂದರೆ ಎದುರಿಸಿದೆ. ಇದರಿಂದಾಗಿ ಚುನಾವಣಾ ಅಧಿಕಾರಿಗಳು ತಮ್ಮ ಕಾನೂನುಬದ್ಧ ಕರ್ತವ್ಯಗಳನ್ನು ನಿರ್ವಹಿಸಲು ಅಸಮರ್ಥರಾಗಿದ್ದಾರೆ ಎಂದು ಭಾರತ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ಸನಾತನಿ ಸಂಗ್ಸದ್ ಮತ್ತಿತರರು ಹಾಗೂ ಭಾರತೀಯ ಚುನಾವಣಾ ಆಯೋಗ ನಡುವಣ ಪ್ರಕರಣ].
ಬೇರೆ ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಯಾವುದೇ ಅಡ್ಡಿ ಆತಂಕ ಇಲ್ಲದೆ ನಡೆದಿದ್ದರೂ ಪಶ್ಚಿಮ ಬಂಗಾಳದಲ್ಲಿ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಚುನಾವಣಾ ಅಧಿಕಾರಿಗಳ ವಿರುದ್ಧ ಅನೇಕ ಹಿಂಸಾಚಾರ, ಬೆದರಿಕೆ ಮತ್ತು ಅಡ್ಡಿಪಡಿಸುವ ಘಟನೆಗಳು ನಡೆದಿವೆ ಎಂದು ಆರೋಪಿಸಲಾಗಿದೆ.
ಪ್ರಸ್ತುತ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯಲ್ಲಿ 58 ಲಕ್ಷಕ್ಕಿಂತ ಹೆಚ್ಚು ಗೈರುಹಾಜರಿರುವ, ಮೃತ ಹಾಗೂ ಸ್ಥಳಾಂತರಗೊಂಡ ಮತದಾರರನ್ನು ಗುರುತಿಸಿರುವುದರಿಂದ, 2025ರ ಮತದಾರರ ಪಟ್ಟಿಸಂಶಯಾಸ್ಪದವಾಗಿದೆ. ಜೊತೆಗೆ ಸುಮಾರು 1.51 ಕೋಟಿ ನೋಟಿಸ್‌ಗಳನ್ನು ನೀಡಲಾಗುತ್ತಿದೆ. ಇದರಿಂದ 2025ರ ಮತದಾರರ ಪಟ್ಟಿಯ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದ್ದು, ಅದನ್ನು ಮುಂದಿನ ವಿಧಾನಸಭಾ ಚುನಾವಣೆಗೆ ಬಳಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.
ಚುನಾವಣಾಧಿಕಾರಿಗಳ ದೂರು ಆಧರಿಸಿ ಪ್ರಕರಣ ದಾಖಲಿಸಲು ಸ್ಥಳೀಯ ಪೊಲೀಸರು ಒಪ್ಪುತ್ತಿಲ್ಲ. ಕೆಲವೊಮ್ಮೆ ಜಿಲ್ಲಾ ಚುನಾವಣಾಧಿಕಾರಿಗಳ ಹಸ್ತಕ್ಷೇಪದ ಕಾರಣಕ್ಕಷ್ಟೇ ಎಫ್‌ಐಆರ್ ದಾಖಲಾಗಿದ್ದು ತಡವಾಗಿ ಬಂಧನ ಕಾರ್ಯ ನಡೆದಿದೆ. ಎಫ್‌ಐಆರ್ ದಾಖಲಿಸುವ ಹಾಗೂ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಇಸಿಐ ನೀಡಿದ ನಿರ್ದೇಶನಗಳನ್ನು ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಪಾಲಿಸಿಲ್ಲ ಎಂದು ಆರೋಪಿಸಲಾಗಿದೆ.
2025ರ ನವೆಂಬರ್ 24ರಂದು ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಹಾಕಲಾದ ಘೇರಾವ್ ಅತ್ಯಂತ ಗಂಭೀರ ಘಟನೆ. ಚುನಾವಣಾಧಿಕಾರಿಗಳ ವಿರುದ್ಧ ಬಹಿರಂಗ ಬೆದರಿಕೆಗಳು ಒಡ್ಡಲಾಗಿದೆ. ಜನವರಿ 14ರಂದು ಮುಖ್ಯಮಂತ್ರಿ ಚುನಾವಣಾಧಿಕಾರಿಗಳನ್ನು ಗುರಿಯಾಗಿಸಿಕೊಂಡ ಹೇಳಿಕೆ ನೀಡಿದ ನಂತರ, ಮುರ್ಷಿದಾಬಾದ್ ಜಿಲ್ಲೆಯ ಒಂಬತ್ತು ಮೈಕ್ರೋ ಆಬ್ಸರ್ವರ್‌ಗಳು ಭದ್ರತೆ ಕೊರತೆ ಮತ್ತು ಹಿಂಸೆಯನ್ನು ಉಲ್ಲೇಖಿಸಿ ಎಸ್‌ಐಆರ್ ಕರ್ತವ್ಯಗಳಿಂದ ಹಿಂದೆ ಸರಿದರು ಎಂದು ಆಯೋಗ ಹೇಳಿದೆ.
ಇಂತಹ ಕಠಿಣ ಪರಿಸ್ಥಿತಿಗಳ ನಡುವೆಯೂ, ಎಣಿಕೆ ಹಂತದಲ್ಲಿ ಶೇ.92.40 (7.08 ಕೋಟಿ) ಫಾರ್ಮ್‌ಗಳನ್ನು ಸಂಗ್ರಹಿಸಲಾಗಿದೆ. ಆದರೆ ಪ್ರಸ್ತುತ ನಡೆಯುತ್ತಿರುವ ನೋಟಿಸ್ ಹಂತವು ಮತದಾರರ ಅರ್ಹತೆ ಮತ್ತು ದೋಷ ಸರಿಪಡಿಸಲು ಅತ್ಯಂತ ಮುಖ್ಯವಾಗಿದ್ದು, ಅದು ಭಯವಿಲ್ಲದೆ ಪೂರ್ಣಗೊಳ್ಳಬೇಕು ಎಂದು ಆಯೋಗ ಒತ್ತಿಹೇಳಿದೆ. ಒಟ್ಟಾರೆ 2025ರ ಕರಡು ಮತದಾರರ ಪಟ್ಟಿಯ 2.09 ಕೋಟಿ ದಾಖಲಾತಿಗಳು ಪರಿಶೀಲನೆಯಲ್ಲಿವೆ ಎಂದು ಅದು ತಿಳಿಸಿದೆ.
ಈ ಎಲ್ಲಾ ಕಾರಣಗಳಿಂದ, 2025ರ ಮತದಾರರ ಪಟ್ಟಿಯನ್ನು ಬಳಸಿ ಮುಂದಿನ ವಿಧಾನಸಭಾ ಚುನಾವಣೆಯನ್ನು ನಡೆಸಿದರೆ ಚುನಾವಣೆಯ ವಿಶ್ವಾಸಾರ್ಹತೆ ಮತ್ತು ಆಯ್ಕೆಯಾದ ಸರ್ಕಾರದ ನ್ಯಾಯಸಮ್ಮತತೆ ಸಂಶಯಕ್ಕೀಡಾಗುತ್ತದೆ ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.