ಪೋಕ್ಸೊ ಪ್ರಕರಣದಲ್ಲಿ ತಮ್ಮ ವಿರುದ್ಧ ಬಂಧನ ವಾರೆಂಟ್ ಹೊರಡಿಸಲು ಸಿಐಡಿ ಪೊಲೀಸರು ವಿಚಾರಣಾಧೀನ ನ್ಯಾಯಾಲಯದಲ್ಲಿ ಅನುಮತಿ ಕೋರಿ ಅರ್ಜಿ ಸಲ್ಲಿಸಿರುವ ವಿಚಾರ ಹೊರಬೀಳುತ್ತಲೇ ಬಿಜೆಪಿಯ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ನಿರೀಕ್ಷಣಾ ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ನಡುವೆ ವಿಚಾರಣಾಧೀನ ನ್ಯಾಯಾಲಯವು ಬಿಎಸ್‌ವೈ ವಿರುದ್ಧ ಬಂಧನ ವಾರೆಂಟ್ ಹೊರಡಿಸಲು ಸಿಐಡಿಗೆ ಅನುಮತಿಸಿದೆ. ಇತ್ತ, ಬಿಎಸ್‌ವೈ ಅವರ ನಿರೀಕ್ಷಣಾ ಜಾಮೀನು ಅರ್ಜಿಯು ನಾಳೆ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ತಮ್ಮ ವಿರುದ್ಧದ ಪ್ರಕರಣವು ಸುಳ್ಳಿನಿಂದ ಕೂಡಿದೆ. ವಿಚಾರಣೆಗೆ ಹಾಜರಾಗಲು ಸಿಐಡಿಗೆ ಜೂನ್ 17ರವರೆಗೆ ಸಮಯ ಕೇಳಲಾಗಿದೆ ಎಂಬ ಹಲವು ಅಂಶಗಳನ್ನು ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ವಿವರಿಸಲಾಗಿದೆ. ನಿರೀಕ್ಷಣಾ ಜಾಮೀನನ್ನು ಬಿಎಸ್‌ವೈ ಅವರಿಗೆ ಹೈಕೋರ್ಟ್ ಏಕೆ ನೀಡಬೇಕು ಎಂಬುದಕ್ಕೆ ಅವರ ವಕೀಲರು ಈ ಕೆಳಗಿನ ಒಂಬತ್ತು ಕಾರಣಗಳನ್ನು ಅರ್ಜಿಯಲ್ಲಿ ದಾಖಲಿಸಿದ್ದಾರೆ:
ಬಿಎಸ್‌ವೈ ವಿರುದ್ಧದ ಪ್ರಕರಣದಲ್ಲಿ ಅನ್ವಯಿಸಿರುವ ಸೆಕ್ಷನ್‌ಗಳಿಗೆ ಪೂರಕವಾದ ಯಾವುದೇ ಅಂಶಗಳು ದೂರಿನಲ್ಲಿ ಇಲ್ಲ. ಇಡೀ ಹೇಳಿಕೆಯನ್ನು ಪರಿಗಣಿಸಿದರೆ ಅದು ಸಂಜ್ಞೇ ಅಪರಾಧದ ಅಗತ್ಯತೆ ಪೂರೈಸುವುದಿಲ್ಲ. ಹೀಗಾಗಿ, ಎಫ್‌ಐಆರ್ ದಾಖಲಿಸುವ ಸಂದರ್ಭವೇ ನಿರ್ಮಾಣವಾಗುವುದಿಲ್ಲ.
ಪೋಕ್ಸೊ ಕಾಯಿದೆ ಸೆಕ್ಷನ್ 8ರ ಅಡಿ ಪ್ರಕರಣ ದಾಖಲಿಸಲು ಮೂಲ ಅಗತ್ಯತೆಯು ದೂರುದಾರೆಯ ಹೇಳಿಕೆ ಅಥವಾ ಮೇಲ್ನೋಟಕ್ಕೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದನ್ನು ಸಾಬೀತುಪಡಿಸು ದಾಖಲೆ ಇರಬೇಕು. ಇದು ಇಲ್ಲದೇ ಇದ್ದರೆ ಸೆಕ್ಷನ್ 8 ಅನ್ವಯಿಸಲ್ಲ.
ಬಿಎಸ್‌ವೈ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದಕ್ಕೆ ಪೂರಕವಾದ ದಾಖಲೆಗಳು ಒತ್ತಟ್ಟಿಗಿರಲಿ, ಅವರ ವಿರುದ್ಧ ದೂರಿನಲ್ಲಿ ಯಾವುದೇ ಉಲ್ಲೇಖವಿಲ್ಲ.
ದೂರುದಾರೆಯು ಸರ್ಕಾರಿ ಅಧಿಕಾರಿಗಳ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಚಾಳಿ ಹೊಂದಿದ್ದು, ಆಕೆಯು ತನ್ನದೇ ಕುಟುಂಬ ಸದಸ್ಯರನ್ನೂ ಬಿಟ್ಟಿಲ್ಲ. ದೂರುದಾರೆಯು ಬೇರೆಬೇರೆಯವರ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ವಂಚನೆ ಇತ್ಯಾದಿ ಆರೋಪ ಮಾಡಿ ಸುಮಾರು 53 ಪ್ರಕರಣ ದಾಖಲಿಸಿದ್ದಾರೆ. ಪ್ರಸಕ್ತ ಪ್ರಕರಣದಲ್ಲಿ ದೂರುದಾರೆಯು ತನ್ನ ಪುತ್ರಿಯನ್ನು ಬಳಕೆ ಮಾಡಿಕೊಂಡು ಸುಳ್ಳು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ನಡೆದಿದೆ ಎನ್ನಲಾದ ದಿನದಂದು ಬಿಎಸ್‌ವೈ ಅವರ ಮನೆಯಲ್ಲಿ ಉಪಸ್ಥಿತರಿದ್ದ ಸಿಬ್ಬಂದಿ ಮತ್ತು ಭೇಟಿ ಮಾಡಲು ಬಂದಿದ್ದವರು ದೂರುದಾರೆ ಹೇಳಿರುವಂತೆ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಸಿಐಡಿ ಮುಂದೆ ಹೇಳಿಕೆ ನೀಡಿದ್ದಾರೆ. ಬಿಎಸ್‌ವೈ ಅವರಿಗೆ ಕಿರುಕುಳ ನೀಡುವ ಉದ್ದೇಶದಿಂದ ದೂರು ನೀಡಲಾಗಿದೆ.
2024ರ ಫೆಬ್ರವರಿ 2ರಂದು ಪ್ರಕರಣ ನಡೆದಿದೆ ಎಂದು ದೂರಿನಲ್ಲಿ ಹೇಳಲಾಗಿದ್ದು, ಮಾರ್ಚ್ 14ರಂದು ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್ ದಾಖಲಾಗುವುದಕ್ಕೂ ಮುನ್ನ ದೂರುದಾರೆಯು ಎರಡು ಬಾರಿ ತನ್ನ ಮನೆಗೆ ಭೇಟಿ ನೀಡಿದ್ದಾರೆ. ದೂರಿನಲ್ಲಿ ಹೇಳಿರುವಂತೆ ಆಕೆ ಎಂದೂ ಈ ವಿಚಾರ ಎತ್ತಿಲ್ಲ. ದೂರುದಾರೆಯು ವಿದ್ಯಾವಂತೆಯಾಗಿದ್ದು, ಕಾನೂನಿನ ಬಗ್ಗೆ ಅರಿವಿದ್ದರೂ ತಡವಾಗಿ ಅಂದರೆ ಒಂದೂವರೆ ತಿಂಗಳ ಬಳಿಕ ದೂರು ನೀಡಿದ್ದಾರೆ.
ಬಿಎಸ್‌ವೈ ಸೂಚನೆಯಂತೆ ದೂರುದಾರೆಯು ತಾವು ದಾಖಲಿಸಿರುವ ಪ್ರಕರಣಗಳ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಹೋಗಿ ನೆರವು ಕೋರಿದ್ದಾರೆ. ಆದರೆ, ಬಿಎಸ್‌ವೈ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಆಯುಕ್ತರ ಮುಂದೆ ಉಸಿರೆತ್ತಿಲ್ಲ. ಬಿಎಸ್‌ವೈಗೆ ಕಿರುಕುಳ ನೀಡಲು ಮತ್ತು ಅವರ ಮಾನಹಾನಿ ಮಾಡುವ ಉದ್ದೇಶದಿಂದ ದೂರು ನೀಡಲಾಗಿದೆ ಎಂಬುದಕ್ಕೆ ಇದೊಂದೇ ಸಾಕ್ಷ್ಯ ಸಾಕಾಗಿದೆ.
ವ್ಯಕ್ತಿಯ ವಿರುದ್ದದ ಆರೋಪಿತ ಅಪರಾಧವು ಏಳು ವರ್ಷಗಳಿಗಿಂತ ಕಡಿಮೆ ಇದ್ದರೆ ವಿಚಾರಣೆಯ ಸಂದರ್ಭದಲ್ಲಿ ಆರೋಪಿತರನ್ನು ಬಂಧಿಸಬಾರದು ಎಂದು ಸುಪ್ರೀಂ ಕೋರ್ಟ್ ಹಲವು ಬಾರಿ ಹೇಳಿದೆ. ಈ ಮಧ್ಯೆ, ಸಿಐಡಿ ಪೊಲೀಸರು ಬಿಎಸ್‌ವೈ ವಿರುದ್ಧ ಬಂಧನ ವಾರೆಂಟ್ ಹೊರಡಿಸಲು ವಿಚಾರಣಾಧೀನ ನ್ಯಾಯಾಲಯದ ಅನುಮತಿ ಕೋರಿದ್ದಾರೆ. ಬಿಎಸ್‌ವೈ ವಿರುದ್ಧ ಬಂಧನ ವಾರೆಂಟ್ ಪಡೆಯಲು ಸಿಐಡಿ ಪೊಲೀಸರು ಮುಂದಾಗುವ ಮೂಲಕ ವಿಚಾರಣೆಯಲ್ಲಿ ಭಾಗಿಯಾಗಲು ಬಿಎಸ್‌ವೈ ಜೂನ್ 17ರವರೆಗೆ ಸಮಯಾವಕಾಶ ಕೋರಿದ್ದಾರೆ ಎಂಬ ಅಂಶವನ್ನು ಬಿಚ್ಚಿಟ್ಟಿದ್ದಾರೆ. ಆ ಮೂಲಕ ಸಿಐಡಿ ದುರುದ್ದೇಶದ ನಿಲುವು ತಳೆದಿದೆ.
ಬಿಎಸ್‌ವೈ ಅವರಿಗೆ 81 ವರ್ಷ ವಯಸ್ಸಾಗಿದ್ದು, ಅವರು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಆಗಾಗ್ಗೆ ವೈದ್ಯಕೀಯ ಪರೀಕ್ಷೆ ಮತ್ತು ವೈದ್ಯರ ಸಲಹೆ-ಸೂಚನೆ ಅಗತ್ಯವಿರುವುದರಿಂದ ಅವರನ್ನು ಕಸ್ಟಡಿಯಲ್ಲಿ ಇಡುವ ಅಗತ್ಯವಿಲ್ಲ.
ಈ ಮೇಲಿನ ಅಂಶಗಳನ್ನು ಉಲ್ಲೇಖಿಸುವ ಮೂಲಕ ಬಿಎಸ್‌ವೈ ನಿರೀಕ್ಷಣಾ ಜಾಮೀನಿಗೆ ಅರ್ಹರು ಎಂದು ವಾದಿಸಲಾಗಿದೆ.
ವಕೀಲ ಸಂದೀಪ್ ಪಾಟೀಲ್ ಅವರು ವಕಾಲತ್ತು ಹಾಕಿದ್ದಾರೆ. ಹಿರಿಯ ವಕೀಲ ಸಿ ವಿ ನಾಗೇಶ್ ಅವರು ಬಿಎಸ್‌ವೈ ಪರವಾಗಿ ಹೈಕೋರ್ಟ್‌ನಲ್ಲಿ ವಾದಿಸಲಿದ್ದಾರೆ.