ಬೆಂಗಳೂರು ವಕೀಲರ ಸಂಘದ ಆಡಳಿತ ಸುಧಾರಣೆಗೆ ಉನ್ನತಾಧಿಕಾರ ಸಮಿತಿ ಮಾಡಿರುವ ಶಿಫಾರಸ್ಸುಗಳೇನು?

ಎಸ್‌ಸಿಬಿಎ ಮಾದರಿಯಲ್ಲಿ ವೆಬ್‌ಸೈಟ್‌ ರೂಪಿಸುವುದು, ಪದಾಧಿಕಾರಿಗಳ ಹುದ್ದೆಗೆ ಸ್ಪರ್ಧಿಸುವವರಿಗೆ ಅರ್ಹತೆ ನಿಗದಿ ಮಾಡುವುದು ಸೇರಿದಂತೆ ಹಲವು ಶಿಫಾರಸ್ಸುಗಳನ್ನು ಉನ್ನತಾಧಿಕಾರಿ ಸಮಿತಿಯು ಮಾಡಿದೆ.
Vakeelara Bhavana, AAB
Vakeelara Bhavana, AAB

ಬೆಂಗಳೂರು ವಕೀಲರ ಸಂಘದ (ಎಎಬಿ) ಚುನಾವಣೆ ನಡೆಸುವುದಕ್ಕಾಗಿ ಹಿರಿಯ ವಕೀಲ ಎನ್‌ ಎಸ್‌ ಸತ್ಯನಾರಾಯಣ ಗುಪ್ತ ನೇತೃತ್ವದಲ್ಲಿ ರಚಿಸಿದ್ದ ಉನ್ನತಾಧಿಕಾರಿ ಸಮಿತಿಯು (ಎಚ್‌ಪಿಸಿ) ಚುನಾವಣೆ ಸಂದರ್ಭದಲ್ಲಿ ಎದುರಿಸಿದ ಸವಾಲುಗಳ ಹಿನ್ನೆಲೆಯಲ್ಲಿ ಎಎಬಿ ಆಡಳಿತ ಸುಧಾರಣೆಗಾಗಿ ಎಂಟು ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ಕರ್ನಾಟಕ ಹೈಕೋರ್ಟ್‌ ಪರಿಗಣನೆಗಾಗಿ ಸೋಮವಾರ ಸಲ್ಲಿಸಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನು ಎಎಬಿ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ 2021ರ ಸೆಪ್ಟೆಂಬರ್‌ 4ರಂದು ಸಹಕಾರ ಇಲಾಖೆ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಎಎಬಿ ಅಂದಿನ ಅಧ್ಯಕ್ಷ ಎ ಪಿ ರಂಗನಾಥ್‌ ಸಲ್ಲಿಸಿದ್ದ ಮನವಿಯನ್ನು ಇತ್ಯರ್ಥಪಡಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಉನ್ನತಾಧಿಕಾರಿ ಸಮಿತಿಯ ಶಿಫಾರಸ್ಸುಗಳನ್ನು ಪರಿಶೀಲಿಸಿ, ಆ ಬಳಿಕ ನಿರ್ಧಾರ ಕೈಗೊಳ್ಳಬಹುದು ಎಂದು ಆದೇಶದಲ್ಲಿ ಸಲಹೆಯ ರೂಪದಲ್ಲಿ ಹೇಳಿತ್ತು.

ಎಎಬಿ ಆಡಳಿತ ಮಂಡಳಿಗೆ ಎಚ್‌ಪಿಸಿ ಮಾಡಿರುವ ಶಿಫಾರಸ್ಸುಗಳ ವಿವರ ಇಂತಿವೆ:

  1. ಸುಪ್ರೀಂ ಕೋರ್ಟ್‌ ವಕೀಲರ ಸಂಘದ (ಎಸ್‌ಸಿಬಿಎ) ಮಾದರಿಯಲ್ಲಿ ಎಎಬಿ ಆಡಳಿತ ಮಂಡಳಿಯು ತಕ್ಷಣ ವೆಬ್‌ಸೈಟ್‌ ರೂಪಿಸಬೇಕು. ಇಲ್ಲಿ ಎಎಬಿ ಬೈಲಾ, ಸದಸ್ಯತ್ವ ವಿವರ, ಮತದಾರರ ಪಟ್ಟಿ, ಮಿನಿಟ್ಸ್‌ ಆಫ್‌ ಮೀಟಿಂಗ್‌ ಮತ್ತಿತರರ ವಿವರಗಳನ್ನು ಹಾಕಬೇಕು. ತನ್ನ ಎಲ್ಲಾ ಸದಸ್ಯರ ಸಂಪರ್ಕ ವಿವರವನ್ನು ಒಳಗೊಂಡ ವೆಬ್‌ಸೈಟ್‌ ಅನ್ನು ನಿರಂತರವಾಗಿ ಅಪ್‌ಡೇಟ್‌ ಮಾಡಬೇಕು.

  2. ಎಎಬಿ ಸದಸ್ಯರ ದತ್ತಾಂಶವನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿ ಅದನ್ನು ವೆಬ್‌ ಹೋಸ್ಟ್‌ ಮಾಡುವ ಸಂಬಂಧ ತಕ್ಷಣ ಸೂಕ್ತ ಕ್ರಮಕೈಗೊಳ್ಳಬೇಕು.

  3. ಹೊಸ ಸದಸ್ಯತ್ವ ನೀಡುವುದಕ್ಕೂ ಮುನ್ನ ಸದಸ್ಯತ್ವ ಅರ್ಜಿ ಮತ್ತು ಅರ್ಜಿದಾರರನ್ನು ಸಂದರ್ಶನ ನಡೆಸಿ ಅದನ್ನು ಎಎಬಿ ಆಡಳಿತ ಮಂಡಳಿಗೆ ಶಿಫಾರಸ್ಸು ಮಾಡುವುದಕ್ಕಾಗಿ ಮೂವರು ವಕೀಲರ ಸ್ವತಂತ್ರ ಸದಸ್ಯತ್ವ ನೋಂದಣಿ ಸಮಿತಿ (ಇವರು ಆಡಳಿತ ಮಂಡಳಿ ಸದಸ್ಯರಾಗಿರಬಾರದು) ರಚಿಸಬೇಕು. ಈ ಸಮಿತಿಯಲ್ಲಿನ ವಕೀಲರು ಕನಿಷ್ಠ 20 ವರ್ಷ ವಕೀಲಿಕೆ ಮಾಡಿರಬೇಕು. ಸದಸ್ಯತ್ವ ನೋಂದಣಿ ಸಮಿತಿಯ ಶಿಫಾರಸ್ಸು ಅಂತಿಮವಾಗಿರಲಿದ್ದು, ಆಡಳಿತ ಮಂಡಳಿ ಅದಕ್ಕೆ ಬದ್ಧವಾಗಿರಬೇಕು.

  4. ಒಂದು ಘಟಕದಿಂದ ಮತ್ತೊಂದು ಘಟಕಕ್ಕೆ ಸದಸ್ಯತ್ವ ವರ್ಗಾವಣೆಗೆ ಸಂಬಂಧಿಸಿದಂತೆ ಆಡಳಿತ ಮಂಡಳಿಯು ತಕ್ಷಣ ಷರತ್ತುಗಳ ಅರ್ಜಿಯನ್ನು ಸಿದ್ಧಪಡಿಸಬೇಕು. ಇದಕ್ಕೆ ಸಂಹಿತೆ ಸೃಷ್ಟಿಸುವ ಮೂಲಕ ಅದನ್ನು ಡಿಲೀಟ್‌/ತಿದ್ದುಪಡಿ ಮಾಡುವುದಕ್ಕೆ ಕ್ರಮಕೈಗೊಳ್ಳಬೇಕು. ಒಂದು ಘಟಕದಿಂದ ಮತ್ತೊಂದು ಘಟಕಕ್ಕೆ ವರ್ಗಾವಣೆ ಪಡೆದುಕೊಂಡ ಸದಸ್ಯರ ಮಾಹಿತಿಯನ್ನು ಎಎಬಿ ಸೂಚನಾ ಫಲಕದಲ್ಲಿ ಹಾಕಬೇಕು ಮತ್ತು ಅದನ್ನು ವೆಬ್‌ ಹೋಸ್ಟ್‌ ಮಾಡಬೇಕು.

  5. ಮುಂದಿನ ಚುನಾವಣೆಯಲ್ಲಿ ಒಬ್ಬರಿಗೇ ಒಂದೇ ಮತ ಎಂಬುದನ್ನು ಖಾತರಿಪಡಿಸುವ ಸಂಬಂಧ ನೆರೆಹೊರೆಯ ಜಿಲ್ಲಾ/ತಾಲ್ಲೂಕು ಸಂಘಗಳ ಜೊತೆ ಸಂವಹನ ನಡೆಸಿ ಎಎಬಿಯು ದ್ವಿ ಸದಸ್ಯ ಪಡೆದಿರುವುದನ್ನು ರದ್ದುಪಡಿಸಬೇಕು.

  6. ಒಂದು ಸದಸ್ಯತ್ವ ಮತ್ತು ಒಂದು ಮತ ಎಂಬ ತತ್ವವನ್ನು ಖಾತರಿಪಡಿಸುವ ಸಂಬಂಧ ಹಾಗೂ ದ್ವಿಸದಸ್ಯತ್ವ ನಿಷೇಧಿಸುವುದಕ್ಕಾಗಿ ಬೈಲಾಗೆ ತಿದ್ದುಪಡಿ ಮಾಡಬೇಕು.

  7. ಎಎಬಿ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಹಾಗೂ ಆಡಳಿತ ಮಂಡಳಿಯ ವಿವಿಧ ಹುದ್ದೆಗಳಿಗೆ ಆಯ್ಕೆ ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ ಅರ್ಹತೆಗಳನ್ನು ನಿಗದಿಪಡಿಸಿ, ಬೈಲಾಗೆ ತಿದ್ದುಪಡಿ ಮಾಡಬೇಕು. ವಕೀಲಿಕೆ ವೃತ್ತಿಯ ಅನುಭವ, ವಾದ ಮಂಡಿಸಿರುವ ಪ್ರಕರಣಗಳ ಸಂಖ್ಯೆ ಇತ್ಯಾದಿಯನ್ನು ಅರ್ಹತೆಯನ್ನಾಗಿ ಪರಿಗಣಿಸಬಹುದು.

  8. ಪ್ರಕರಣದ ವಿಚಾರಣೆ, ಪ್ರಕರಣಗಳನ್ನು ಪಟ್ಟಿ ಮಾಡುವುದು ಮತ್ತು ನ್ಯಾಯದಾನ ವ್ಯವಸ್ಥೆಯ ಆಡಳಿತಕ್ಕೆ ಸಂಬಂಧಿಸಿದಂತೆ ಸಲಹೆ, ಸೂಚನೆ ಹಾಗೂ ಬಾರ್‌ ಮತ್ತು ಬೆಂಚ್‌ ನಡುವಿನ ಉತ್ತಮ ಸಮನ್ವಯಕ್ಕಾಗಿ ಐವರು ವಕೀಲರ ಸಲಹಾ ಸಮಿತಿ ರಚಿಸಬಹುದು. ಇದರಲ್ಲಿ ಅಡ್ವೊಕೇಟ್‌ ಜನರಲ್‌, ಇಬ್ಬರು ಹಿರಿಯ ವಕೀಲರು, ಉಳಿದ ಇಬ್ಬರಲ್ಲಿ ಒಬ್ಬ ಮಹಿಳಾ ವಕೀಲರಿಗೆ ಸ್ಥಾನ ಕಲ್ಪಿಸಬೇಕು. ಸಲಹಾ ಸಮಿತಿಯ ಕಾಲಾವಧಿಯನ್ನು ಮೇಲಿಂದ ಮೇಲೆ ನಿರ್ಧರಿಸಬಹುದು ಎಂದು ಶಿಫಾರಸ್ಸು ಮಾಡಲಾಗಿದೆ.

Also Read
ಉನ್ನತಾಧಿಕಾರ ಸಮಿತಿಯು ಆಡಳಿತ ಸುಧಾರಣೆಗೆ ಮಾಡಿರುವ ಶಿಫಾರಸ್ಸುಗಳನ್ನು ಎಎಬಿ ಪರಿಶೀಲಿಸಲಿ: ಹೈಕೋರ್ಟ್‌

ಹಿರಿಯ ವಕೀಲ ಎನ್‌ ಎಸ್‌ ಸತ್ಯನಾರಾಯಣ ಗುಪ್ತ ನೇತೃತ್ವದ ಉನ್ನತಾಧಿಕಾರ ಸಮಿತಿಯಲ್ಲಿ (ಎಚ್‌ಪಿಸಿ) ಒಟ್ಟು ಎಂಟು ವಕೀಲರು ಸದಸ್ಯರಾಗಿದ್ದರು. ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು ಮುಖ್ಯ ಚುನಾವಣಾಧಿಕಾರಿಯಾಗಿ ನೇಮಕಗೊಂಡಿದ್ದರು. ವಕೀಲರಾದ ಜಿ ಚಂದ್ರಶೇಖರಯ್ಯ, ಕೆ ಎನ್‌ ಪುಟ್ಟೇಗೌಡ, ಎ ಜಿ ಶಿವಣ್ಣ, ಟಿ ಎನ್‌ ಶಿವಾರೆಡ್ಡಿ, ಎಸ್‌ ಎನ್‌ ಪ್ರಶಾಂತ್‌ ಚಂದ್ರ, ಪರಿಶಿಷ್ಟ ಜಾತಿ ಮತ್ತು ಪಂಗಡ ವಿಭಾಗದಿಂದ ವಕೀಲ ಎಂ ಆರ್‌ ವೇಣುಗೋಪಾಲ್‌, ಮಹಿಳಾ ವಿಭಾಗದಲ್ಲಿ ವಕೀಲೆ ಅನು ಚೆಂಗಪ್ಪ ಎಚ್‌ಪಿಸಿ ಸದಸ್ಯರಾಗಿದ್ದರು.

Related Stories

No stories found.
Kannada Bar & Bench
kannada.barandbench.com