ಜನರು ಕಾನೂನನ್ನು ಅರ್ಥ ಮಾಡಿಕೊಳ್ಳುವಂತಾಗಲು ಅದನ್ನು ಸರಳವಾಗಿ ಅನುವಾದಿಸುವುದು ಮಹತ್ವದ ಸಂಗತಿ: ಸಿಜೆಐ ಚಂದ್ರಚೂಡ್

ನ್ಯಾಯಾಲಯದ ಚರ್ಚೆ ಮತ್ತು ಸಂವಾದ ಜನರಿಗೆ ಅರ್ಥವಾಗದೆ ಹೋದರೆ ಅದು ನ್ಯಾಯಾಂಗ ಮತ್ತು ವ್ಯಾಜ್ಯಗಳ ನಡುವಿನ ಸಂಪರ್ಕ ಕಡಿತಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ ಅವರು.
CJI DY Chandrachud
CJI DY Chandrachud
Published on

ಜನ ಸಾಮಾನ್ಯರು ಪ್ರಭಾವಿತರಾಗುವ ಕಾನೂನು ಮತ್ತು ಕಾಯಿದೆಯ ಭಾಷೆಯನ್ನು  ಅವರು ಅರ್ಥ ಮಾಡಿಕೊಳ್ಳುವಂತಾಗಲು ಅವುಗಳನ್ನು ಸರಳವಾಗಿ ಅನುವಾದಿಸುವುದು ಮಹತ್ವದ ಸಂಗತಿ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ತಿಳಿಸಿದರು.

ಉತ್ತರ ಪ್ರದೇಶದ  ಲಖನೌನಲ್ಲಿ ಶನಿವಾರ ಆಯೋಜಿಸಲಾಗಿದ್ದ ಡಾ. ರಾಮ್ ಮನೋಹರ್ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ 3ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಕ್ರಮ್ ನಾಥ್, ಅಲಾಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರುಣ್ ಬನ್ಸಾಲಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.

ಸಿಜೆಐ ಭಾಷಣದ ಪ್ರಮುಖಾಂಶಗಳು

  • ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಕಾನೂನು ಬೋಧನೆ ಮಾಡುವಾಗ ದೇಶೀಯ ಭಾಷೆಗಳನ್ನು ಅವರಿಂದ ಮುಚ್ಚಿಡಬಾರದು.

  • ಇಂಗ್ಲಿಷ್‌ನಲ್ಲಿ ಕಲಿಸಿದಂತೆ ಕಾನೂನಿನ ತತ್ವಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ವಿವರಿಸಲು ಅಸಮರ್ಥರಾಗಿದ್ದೇವೆ.

  • ಜನ ಸಾಮಾನ್ಯರಿಗೆ ಕಾನೂನಿನ ತತ್ವ ವಿವರಿಸಲಾಗದಿದ್ದರೆ ಅದು ಕಾನೂನು ವೃತ್ತಿ ಮತ್ತು ಶಿಕ್ಷಣದ ನ್ಯೂನತೆಯನ್ನು ಹೇಳುತ್ತದೆ.

  • ನ್ಯಾಯಾಲಯದ ಚರ್ಚೆ ಮತ್ತು ಸಂವಾದ ಜನರಿಗೆ ಅರ್ಥವಾಗದೆ ಹೋದರೆ ಅದು ನ್ಯಾಯಾಂಗ ಮತ್ತು ವ್ಯಾಜ್ಯಗಳ ನಡುವಿನ ಸಂಪರ್ಕ ಕಡಿತಗೊಳ್ಳಲು ಕಾರಣವಾಗುತ್ತದೆ.

  • ಇದನ್ನು ತಪ್ಪಿಸುವುದಕ್ಕಾಗಿ, ಸುಪ್ರೀಂ ಕೋರ್ಟ್ ತನ್ನ ತೀರ್ಪುಗಳನ್ನು ಇಂಗ್ಲಿಷ್‌ನಿಂದ ಸ್ಥಳೀಯ ಭಾಷೆಗಳಿಗೆ ಭಾಷಾಂತರಿಸಲು ಪ್ರಾರಂಭಿಸಿದೆ.

  • ಶಿಕ್ಷೆಗೆ ಗುರಿಯಾದ ವ್ಯಕ್ತಿಗೆ ವಕೀಲರನ್ನು ನೇಮಿಸಿಕೊಳ್ಳುವಷ್ಟು ಹಣ ಇಲ್ಲದಿದ್ದರೆ ಉಚಿತ ಕಾನೂನು ನೆರವು ನೀಡಬೇಕು ಎನ್ನುತ್ತದೆ ನಮ್ಮ ಸಂವಿಧಾನ. ಆದರೆ ಇಂತಹ ಯೋಜನೆಗಳ ಹೊರತಾಗಿಯೂ ಆ ವ್ಯಕ್ತಿಗೆ ಆತನಿಗೆ ಇರುವ ಹಕ್ಕುಗಳ ಬಗ್ಗೆ ಸರಳವಾಗಿ ಹೇಳಲು ಸಾಧ್ಯವಾಗದೆ ಹೋದರೆ ಅಂತಹ ಯೋಜನೆಗಳು ಅಪೂರ್ಣವಾಗುತ್ತವೆ ಎಂದೇ ಅರ್ಥ.

  • ಇಂಗ್ಲಿಷ್ ಸಾಕ್ಷರತೆಯ ಕೊರತೆಯಿಂದಾಗಿ ಸಾಮಾನ್ಯ ಜನರು ತಮ್ಮ ಮೂಲಭೂತ ಹಕ್ಕುಗಳು ಮತ್ತು ಕಾನೂನಿನ ಇತರ ನಿಬಂಧನೆಗಳನ್ನು ಅರ್ಥಮಾಡಿಕೊಳ್ಳಲು ಅಡ್ಡಿ ಉಂಟಾಗಿದೆ. 

  • ಆದ್ದರಿಂದ ಅವರು ವಿದ್ಯಾರ್ಥಿಗಳಿಗೆ ಸ್ಥಳೀಯ ಸಂದರ್ಭಗಳು ಮತ್ತು ಸ್ಥಳೀಯ ಕಾನೂನು ನಿಯಮಗಳನ್ನು ಅವರಿಗೆ ಪರಿಚಿತವಾಗಿರುವ ರೀತಿಯಲ್ಲಿ ಕಲಿಸುವಂತಾಗಬೇಕು.

  • ನ್ಯಾಯ ದೊರೆಯುವಿಕೆ ಹೆಚ್ಚುವಂತಾಗಲು  ಮತ್ತು ನ್ಯಾಯಾಲಯದ  ಅಂಗಳಕ್ಕೆ ಮೊಕದ್ದಮೆಗಳನ್ನು ತರಲು ತಂತ್ರಜ್ಞಾನದ ಬಳಕೆ ಅಗತ್ಯ.

Kannada Bar & Bench
kannada.barandbench.com