

ಬೆಂಗಳೂರಿನ ಹರೇಕೃಷ್ಣ ದೇವಸ್ಥಾನದ ಮಾಲೀಕತ್ವ ಕುರಿತು ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ಮುಂಬೈ ಮತ್ತು ಇಸ್ಕಾನ್ ಬೆಂಗಳೂರು ನಡುವಿನ ಕಾನೂನು ಸಮರದ ಬಗ್ಗೆ ಸುಪ್ರೀಂ ಕೋರ್ಟ್ ಈಚೆಗೆ ಅಸಮಾಧಾನ ವ್ಯಕ್ತಪಡಿಸಿದೆ [ಇಸ್ಕಾನ್ ಮುಂಬೈ vs ಇಸ್ಕಾನ್ ಬೆಂಗಳೂರು ಇನ್ನಿತರರ ನಡುವಣ ಪ್ರಕರಣ].
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್, ಸತೀಶ್ ಚಂದ್ರ ಶರ್ಮಾ ಮತ್ತು ಪಿ.ಕೆ. ಮಿಶ್ರಾ ಅವರನ್ನೊಳಗೊಂಡ ಪೀಠ “ಶ್ರೀ ಕೃಷ್ಣ ಇದೆಲ್ಲದರ ಬಗ್ಗೆ ಏನು ಯೋಚಿಸುತ್ತಿರಬಹುದು?” ಎಂದು ತರಾಟೆಗೆ ತೆಗೆದುಕೊಂಡಿತು.
ಕರ್ನಾಟಕ ಸಹಕಾರ ಸಂಘಗಳ ನೋಂದಣಿ ಕಾಯ್ದೆಯಡಿ ಇಸ್ಕಾನ್ ಬೆಂಗಳೂರು ಸ್ವತಂತ್ರ ಕಾನೂನಾತ್ಮಕ ಅಸ್ತಿತ್ವ ಹೊಂದಿದ್ದು, ಬೆಂಗಳೂರಿನಲ್ಲಿರುವ ಐತಿಹಾಸಿಕ ಹರೇ ಕೃಷ್ಣ ದೇವಸ್ಥಾನ ಮತ್ತು ಶೈಕ್ಷಣಿಕ ಸಂಕೀರ್ಣದ ಮಾಲೀಕತ್ವ ಹೊಂದಿದೆ. ಅದು ಇಸ್ಕಾನ್ ಮುಂಬೈನ ಶಾಖೆಯಲ್ಲ ಎಂದು ಸುಪ್ರೀಂ ಕೋರ್ಟ್ ಮೇ 2025ರಲ್ಲಿ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಮುಂಬೈಇಸ್ಕಾನ್ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿತ್ತು.
ಬೆಂಗಳೂರಿನಲ್ಲಿರುವ ಹರೇ ಕೃಷ್ಣ ದೇವಸ್ಥಾನದ ಮೇಲೆ ಇಸ್ಕಾನ್ ಬೆಂಗಳೂರಿನ ಸ್ವತಂತ್ರ ಸ್ಥಾನಮಾನ ಮತ್ತು ಮಾಲೀಕತ್ವಕ್ಕೆ ಮನ್ನಣೆ ನೀಡಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಸುಪ್ರೀಂ ಕೋರ್ಟ್ ಆಗ ಎತ್ತಿ ಹಿಡಿತ್ತು. ಅಂತೆಯೇ ಇಸ್ಕಾನ್ ಮುಂಬೈ ಪರವಾಗಿ ಕರ್ನಾಟಕ ಹೈಕೋರ್ಟ್ 2011ರಲ್ಲಿ ನೀಡಿದ್ದ ತೀರ್ಪನ್ನು ರದ್ದುಗೊಳಿಸಿತ್ತು.
ಮೇ 16 ರ ತೀರ್ಪಿನ ಮರುಪರಿಶೀಲನೆ ಕೋರಿ ಮುಂಬೈ ಇಸ್ಕಾನ್ ಸುಪ್ರೀಂ ಕೋರ್ಟ್ ಸುಪ್ರೀಂ ಕೋರ್ಟ್ ಮೊರೆ ಹೋಯಿತು. ನವೆಂಬರ್ 8 ರಂದು ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಜಿ. ಮಸಿಹ್ ಅವರಿದ್ದ ಪೀಠ ಭಿನ್ನ ತೀರ್ಪು ನೀಡಿತ್ತು.
ನ್ಯಾ. ಮಸೀಹ್ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದರೆ ನ್ಯಾ. ಮಹೇಶ್ವರಿ ಅವರು ಅದನ್ನು ಪುರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ನಂತರ ಸಿಜೆಐ ಅಂಗಳ ತಲುಪಿತ್ತು. ಅವರು ತ್ರಿಸದಸ್ಯ ಪೀಠ ರಚಿಸಿದ್ದರು.
ಡಿಸೆಂಬರ್ 3 ರಂದು ನಡೆದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಇಸ್ಕಾನ್ ಮುಂಬೈ ಪರ ವಾದ ಮಂಡಿಸಿದ ವಕೀಲರು ಇಸ್ಕಾನ್ ಮುಂಬೈ ವಾಸ್ತವವಾಗಿ ಮಾತೃ ಸಂಘವಾಗಿದ್ದು, ಇಸ್ಕಾನ್ ಬೆಂಗಳೂರು ಕೇವಲ ಅದರ ಅಂಗಸಂಸ್ಥೆಯಾಗಿದೆ. ಹೀಗಾಗಿ ವಿವಾದಿತ ದೇವಾಲಯದ ಮಾಲೀಕತ್ವವನ್ನು ಅದು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
"ನಾವು ಅದರ ಮೂಲ ಪ್ರಕರಣ ಮತ್ತು ಪರಿಶೀಲನೆಯ ವ್ಯಾಪ್ತಿಯ ಆಧಾರದ ಮೇಲೆ ಆಲಿಸುತ್ತೇವೆ" ಎಂದು ಪೀಠ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತು.
ಇಸ್ಕಾನ್ ಬೆಂಗಳೂರಿನ ಪರವಾಗಿ ಹಾಜರಾದ ವಕೀಲರು "ಮಧ್ಯಸ್ಥಿಕೆ ಪ್ರಯತ್ನಗಳು ನಡೆದಿವೆ, ಇಸ್ಕಾನ್ ಬೆಂಗಳೂರು ತನ್ನದೇ ಆದ ಕೊಡುಗೆಗಳನ್ನು ನೀಡಿದ್ದೇವೆ. ಬೆಂಗಳೂರು ಸೊಸೈಟಿ ಅಕ್ಷಯ ಪಾತ್ರ ಯೋಜನೆಯನ್ನು ಪ್ರಾರಂಭಿಸಿದೆ. ಎರಡು ಶತಕೋಟಿ ಭೋಜನ ನೀಡಲಾಗುತ್ತಿದೆ" ಎಂದು ಅವರು ಹೇಳಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮುಂಬೈ ಇಸ್ಕಾನ್ ಪರ ವಕೀಲ ಕಪಿಲ್ ಸಿಬಲ್ ಅವರು ಬೆಂಗಳೂರಿನ ಇಸ್ಕಾನ್ ನಮಗೆ ಸೇರಿದ್ದನ್ನು ಪಡೆದಿದೆ ಎಂದು ದೂರಿದರು.
"ಸ್ಪಷ್ಟವಾಗಿಯೂ ಎರಡೂ ಕಡೆಯವರು ಯಾವುದೂ ತಮಗೆ ಸೇರಿದ್ದಲ್ಲ (ಆದರೆ ಶ್ರೀಕೃಷ್ಣನಿಗೆ ಸೇರಿದ್ದು) ಎಂದು ಭಾವಿಸಬೇಕು" ಎಂದು ವಿಚಾರಣೆಯ ಕೊನೆಗೆ ಪೀಠ ಮಾರ್ಮಿಕವಾಗಿ ನುಡಿಯಿತು.