ವಾಟ್ಸಾಪ್‌ ಐರೋಪ್ಯ ನಿಯಮಗಳನ್ನು ಅನುಸರಿಸುವುದಾದರೆ ಭಾರತದ ಐಟಿ ನಿಯಮಗಳನ್ನೇಕೆ ಅನುಸರಿಸಬಾರದು? ಅರ್ಜಿದಾರರ ಪ್ರಶ್ನೆ

ಐಟಿ ನಿಯಮಗಳನ್ನು ಪಾಲಿಸುವುದನ್ನು ಖಾತರಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿಬೇಕು. ಒಂದೊಮ್ಮೆ ಅದು ಒಪ್ಪದಿದ್ದರೆ ವಾಟ್ಸಪ್‌ ಚಟುವಟಿಕೆಗಳನ್ನು ನಿಷೇಧಿಸಲು ಸೂಚಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
WhatsApp
WhatsApp
Published on

ಕೇಂದ್ರ ಸರ್ಕಾರ ಹೊರಡಿಸಿದ ಆದೇಶಗಳನ್ನು ಪಾಲಿಸದಿದ್ದರೆ ವಾಟ್ಸಾಪ್‌ ನಿಷೇಧ ಮಾಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೇರಳ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಲಾಗಿದೆ.

ಕೇಂದ್ರ ಸರ್ಕಾರದ ಐಟಿ ನಿಯಮಗಳನ್ನು ಪ್ರಶ್ನಿಸಿ ವಾಟ್ಸಾಪ್‌ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಕೇರಳದ ಸಾಫ್ಟ್‌ವೇರ್‌ ಎಂಜಿನಿಯರ್‌ ಒಮನ್‌ಕುಟ್ಟನ್‌ ಕೆ ಜಿ ಮನವಿ ಸಲ್ಲಿಸಿದ್ದಾರೆ.

ಎಂಡ್‌ ಟು ಎಂಡ್‌ ಎನ್ಕ್ರಿಪ್ಷನ್‌ ಇರುವುದರಿಂದ ಸಂದೇಶದ ಮೂಲ ಹುಡುಕುವುದು ಅಸಾಧ್ಯ. ಹೀಗಾಗಿ, ನೂತನ ಐಟಿ ನಿಯಮಗಳನ್ನು ಪಾಲಿಸುವ ಅಗತ್ಯವಿಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ವಾಟ್ಸಾಪ್‌ ತಿಳಿಸಿದೆ. ಹೊಸ ಐಟಿ ನಿಯಮಗಳು ಸಂವಿಧಾನದ 19 ಮತ್ತು 21ನೇ ವಿಧಿಯಡಿ ಖಾಸಗಿ ಹಕ್ಕು, ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ಗಳಾದ 69ಎ ಮತ್ತು 79 ಅನ್ನು ಉಲ್ಲಂಘಿಸುತ್ತವೆ ಎಂದು ಹೇಳಿದೆ.

ಕೆಲವು ಸಂದರ್ಭದಲ್ಲಿ ವಾಟ್ಸಾಪ್‌ ಬಳಕೆದಾರರು ರವಾನಿಸಿದ ಸಂದೇಶಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಅಲ್ಲದೇ, ಅವರ ಸಂಪರ್ಕ ಮತ್ತು ಇತರೆ ಮಾಹಿತಿಯ ಮೇಲೆ ನಿಯಂತ್ರಣ ಸಾಧಿಸುವುದಾಗಿ ಹೇಳಿಕೊಂಡಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

ಅಪ್ಲಿಕೇಶನ್‌ಗೆ ಭದ್ರತೆ ಇಲ್ಲ. ಅಪ್ಲಿಕೇಶನ್‌ ಮೂಲಕ ಕಳುಹಿಸಲಾದ ಕಡತವನ್ನು ಸಾಮಾನ್ಯ ವ್ಯಕ್ತಿ ಕೂಡ ತಿರುಚಬಹುದು ಎಂದು ಅರ್ಜಿದಾರರು ಆಪಾದಿಸಿದ್ದಾರೆ. ವಾಟ್ಸಾಪ್‌ ಅನ್ನು ದೇಶ ವಿರೋಧಿಗಳು ಮತ್ತು ಸಮಾಜ ಘಾತುಕರೂ ಬಳಸುತ್ತಿದ್ದಾರೆ. ದೇಶಾದ್ಯಂತ ವಾಟ್ಸಾಪ್‌ ಅನ್ನು ವ್ಯಾಪಕವಾಗಿ ಬಳಸುತ್ತಿದ್ದು, ನಕಲಿ ಸುದ್ದಿ ಮತ್ತು ಚಿತ್ರಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ ಎಂದಿದ್ದಾರೆ.

2018ರಲ್ಲಿ ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗ ವಾಟ್ಸಾಪ್‌ ಮೂಲಕ ಹಂಚಿಕೊಳ್ಳಲಾದ ನಕಲಿ ಸುದ್ದಿ ಮತ್ತು ಸಹಾಯವಾಣಿ ಸಂಖ್ಯೆಗಳು ಜನರಿಗೆ ಸಾಕಷ್ಟು ಗೊಂದಲ ಮತ್ತು ಸಮಸ್ಯೆ ಉಂಟು ಮಾಡಿವೆ ಎಂಬುದನ್ನು ಅವರು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದಾರೆ.

ವಾಟ್ಸಾಪ್‌ ಹೇಳುವಂತೆ ಎಂಡ್‌ ಟು ಎಂಡ್‌ ಎನ್ಕ್ರಿಪ್ಷನ್‌ ನೀತಿಯಿಂದಾಗಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವವರನ್ನು ಪತ್ತೆ ಹಚ್ಚಲಾಗದು ಎಂದು ಮನವಿಯಲ್ಲಿ ವಿವರಿಸಲಾಗಿದೆ. ನ್ಯಾಯಾಲಯದ ಸಮನ್ಸ್‌ ಮತ್ತು ಕಾನೂನು ನೋಟಿಸ್‌ಗಳನ್ನು ರವಾನಿಸಲು ವಾಟ್ಸಾಪ್‌ ಮತ್ತಿತರ ಸಂದೇಶ ರವಾನೆ ಸೇವೆಗಳ ಸತ್ಯಾಸತ್ಯತೆಯನ್ನು ಖಾತರಿಪಡಿಸಲಾಗುವುದಿಲ್ಲ ಎಂದು ಒಮನ್‌ಕುಟ್ಟನ್‌ ಹೇಳಿದ್ದಾರೆ.

ಐರೋಪ್ಯ ಪ್ರಾಂತ್ಯದಲ್ಲಿ ವಾಟ್ಸಾಪ್‌ಗೆ ಅಲ್ಲಿ ಪ್ರತ್ಯೇಕ ನೀತಿ ಜಾರಿಯಲ್ಲಿದ್ದು, ಅಲ್ಲಿನ ಕಾನೂನುಗಳನ್ನು ಅದು ಪಾಲಿಸುತ್ತಿದೆ. ಒಂದು ಕಡೆ ಅಲ್ಲಿನ ಕಾನೂನುಗಳನ್ನು ಪಾಲಿಸುತ್ತಿರಬೇಕಾದರೆ ನಮ್ಮ ರಾಷ್ಟ್ರದಲ್ಲಿ ಏಕೆ ಅದರಲ್ಲೂ ಐಟಿ ನಿಯಮಗಳನ್ನು ಪಾಲಿಸಬಾರದು ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ.

Also Read
ಐಟಿ ಮಧ್ಯಸ್ಥ ನಿಯಮ: ಮಾಹಿತಿ ಮೂಲ ಕಡ್ಡಾಯ ಪತ್ತೆ ಮಾಡುವಿಕೆ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ ವಾಟ್ಸಾಪ್‌

ಅರ್ಜಿದಾರರು ಪ್ರಮುಖ ವಾದಗಳು ಇಂತಿವೆ:

  • ದೇಶ ಮತ್ತು ಅದರ ನಾಗರಿಕರ ಭದ್ರತೆಗೆ ಬೆದರಿಕೆ ಒಡ್ಡುವ ಸಾಧ್ಯತೆ ಇರುವ ಕಾರ್ಪೊರೇಟ್‌ ಸಂಸ್ಥೆ ಮತ್ತು ಅದರ ಸಾಫ್ಟ್‌ವೇರ್‌ ಅಪ್ಲಿಕೇಶನ್‌ ಭಾರತದಲ್ಲಿ ಕಾರ್ಯಾಚರಣೆ ನಡೆಸಲು ಅವಕಾಶ ಮಾಡಿಕೊಡಬಹುದೇ?

  • ಯಾವುದೇ ಭದ್ರತೆ ಅಥವಾ ಮೂಲ ಪತ್ತೆ ಶೋಧಿಸಲಾಗದ, ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಮಟ್ಟಿಗೆ ಅದನ್ನು ದುರ್ಬಳಕೆ ಮಾಡಿಕೊಳ್ಳಬಹುದಾದ ಸಾಧ್ಯತೆ ಇರುವ ಅಪ್ಲಿಕೇಶನ್‌ ಅನ್ನು ಇಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬಹುದೇ?

  • ನಕಲಿ ವಾದಗಳ ಮೂಲಕ ಕಾನೂನು ಮೀರಿ ಅಥವಾ ಕಾನೂನು ಉಲ್ಲಂಘಿಸುವ ಕಾರ್ಪೊರೇಟ್‌ ಸಂಸ್ಥೆಗೆ ಅನುಮತಿಸಬಹುದೇ?

ದೇಶದ ಹಿತಾಸಕ್ತಿಯಿಂದ ಭಾರತ ಐಟಿ ನಿಯಮಗಳನ್ನು ಪಾಲಿಸುವುದನ್ನು ಖಾತರಿಪಡಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದಾರೆ. ಸರ್ಕಾರದ ನಿಯಮಗಳಿಗೆ ಸಹಕಾರ ನೀಡಿ ಕೆಲಸ ಮಾಡದಿದ್ದರೆ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಆದೇಶಿಸಬೇಕು ಎಂದು ಮನವಿ ಮಾಡಲಾಗಿದೆ.

Kannada Bar & Bench
kannada.barandbench.com