ದೊಡ್ಡ ಪ್ರಮಾಣದಲ್ಲಿ ಅಧಿಕಾರಿಗಳ ವರ್ಗ ಮಾಡಿದಾಗ ಪ್ರತಿಯೊಬ್ಬರ ವರ್ಗಾವಣೆಗೂ ಪ್ರತ್ಯೇಕ ಕಾರಣ ಕಡ್ಡಾಯವಲ್ಲ: ಹೈಕೋರ್ಟ್‌

ಸರ್ಕಾರದಲ್ಲಿ ವರ್ಗಾವಣೆ ಮಾಡಬಹುದಾದ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರ ತಾನು ಬಯಸಿದ ಹುದ್ದೆಯಲ್ಲಿ ದೀರ್ಘಕಾಲ ಉಳಿದುಕೊಳ್ಳುವ ಹಕ್ಕು ಹೊಂದಿರುವುದಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.
Justice K Somashekar and Justice Rajesh Rai K
Justice K Somashekar and Justice Rajesh Rai K

ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಮಾಡಿದ ಸಂದರ್ಭದಲ್ಲಿ ಪ್ರತಿಯೊಬ್ಬರ ವರ್ಗಾವಣೆಗೂ ಪ್ರತ್ಯೇಕ ಕಾರಣ ನೀಡುವುದು ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ತಿಳಿಸಿದೆ.

ತಮ್ಮನ್ನು ವರ್ಗಾವಣೆ ಮಾಡಿದ್ದ ಸರ್ಕಾರದ ಕ್ರಮ ಎತ್ತಿ ಹಿಡಿದಿದ್ದ ಕರ್ನಾಟಕ ಆಡಳಿತಾತ್ಮ ನ್ಯಾಯಾಧಿಕರಣ (ಕೆಎಟಿ) ಕ್ರಮ ಪ್ರಶ್ನಿಸಿ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿದ್ದ ಎಚ್ ಎಸ್ ವೀಣಾ ಮತ್ತಿತರರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ಕೆ ರಾಜೇಶ್ ರೈ ಅವರ ನೇತೃತ್ವದ ವಿಭಾಗೀಯ ಪೀಠವು ವಜಾಗೊಳಿಸಿದೆ.

ಸರ್ಕಾರದಲ್ಲಿ ವರ್ಗಾವಣೆ ಮಾಡಬಹುದಾದ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರ ತಾನು ಬಯಸಿದ ಹುದ್ದೆಯಲ್ಲಿ ದೀರ್ಘಕಾಲ ಉಳಿದುಕೊಳ್ಳುವ ಹಕ್ಕು ಹೊಂದಿರುವುದಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

ಸರ್ಕಾರದ ನೌಕರರನ್ನು ನಿಗದಿತ ಅವಧಿಗಿಂತಲು ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ಮುಂದುವರಿಸಲು ಅವಕಾಶ ನೀಡಿದಲ್ಲಿ ಅವರು ಸ್ಥಳೀಯವಾಗಿ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಹಾಗೂ ಪಟ್ಟಭದ್ರ ಹಿತಾಸಕ್ತಿಗೆ ಒತ್ತು ನೀಡುವ ಸಾಧ್ಯತೆ ಇರಲಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಮುಖ್ಯಮಂತ್ರಿಗಳ ಪೂರ್ವಾನುಮತಿ ಪಡೆಯದೇ ಅರ್ಜಿದಾರರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಅರ್ಜಿದಾರರ ವಾದವನ್ನು ತಳ್ಳಿಹಾಕಿದ ಪೀಠವು ಪ್ರಕರಣ ಸಂಬಂಧದ ದಾಖಲೆಗಳನ್ನು ಪರಿಶೀಲಿಸಿದಲ್ಲಿ ಅರ್ಜಿದಾರರನ್ನು ಮುಖ್ಯಮಂತ್ರಿಗಳ ಪೂರ್ವಾನುಮತಿ ಪಡೆದೇ ವರ್ಗಾವಣೆ ಮಾಡಲಾಗಿದೆ ಎಂಬ ಅಂಶ ಗೊತ್ತಾಗುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರರೆಲ್ಲರ ದಾಖಲೆಗಳನ್ನು ಪರಿಶೀಲಿಸಿದಾಗ ಒಂದೇ ಸ್ಥಳದಲ್ಲಿ ಒಂದಲ್ಲಾ ಒಂದು ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ ಸರ್ಕಾರ ಪ್ರತಿಯೊಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡುವುದಕ್ಕೆ ಕಾರಣಗಳನ್ನು ನಿಗದಿಪಡಿಸುವುದು ಕಷ್ಟಕರ. ಅರ್ಜಿದಾರರನ್ನು ವರ್ಗಾವಣೆ ಮಾಡುವುದಕ್ಕೆ ಕಾರಣ ನೀಡಲೇಬೇಕು ಎಂಬುದು ಅನಿವಾರ್ಯವಲ್ಲ ಎಂದು ಪೀಠ ತಿಳಿಸಿದೆ.

ಕೆಎಟಿಯು ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಿದ ಬಳಿಕವೇ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದ್ದು, ಆಡಳಿತಾತ್ಮ ಹಿತದೃಷ್ಟಿಯಿಂದ ವರ್ಗಾವಣೆ ಮಾಡಿದೆ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿದೆ. ಕೆಎಟಿ ಆದೇಶದಲ್ಲಿ ಯಾವುದೇ ದೋಷ ಕಂಡು ಬರುತ್ತಿಲ್ಲ, ಹೀಗಾಗಿ, ಆ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ನಿರ್ದೇಶನ ವಿಭಾಗದದಲ್ಲಿ ಉಪ ಆಯುಕ್ತರಾಗಿದ್ದ ಎಚ್ ಎಸ್ ವೀಣಾ, ಸಿ ಪುಷ್ಪಾ, ಜಿಎಸ್‌ಟಿ ವಿಭಾಗದ ಉಪ ಆಯುಕ್ತ ವಿ ಆರ್ ಮಂಜುಳಾ, ಸಹಾಯಕ ಆಯುಕ್ತರಾದ ಎನ್ ಸಿ ಶೈಲಾ, ಇ-ಗೌವರ್ನೆನ್ಸ್‌ ವಿಭಾಗದ ಹೆಚ್ಚುವರಿ ಆಯುಕ್ತ ಕೆ ಎಸ್ ಬಸವರಾಜು ಎಂಬುವರನ್ನು 2022ರ ಜೂನ್ 22ರಂದು ವಿವಿಧ ಸ್ಥಳಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಇದಾದ ಬಳಿಕ ಒಂದು ವರ್ಷ ಎರಡು ತಿಂಗಳು ಮುಗಿಯುವುದಕ್ಕೂ ಮುನ್ನ ಮತ್ತೆ ವರ್ಗವಣೆ ಮಾಡಲಾಗಿತ್ತು.

ಸರ್ಕಾರದ ಕ್ರಮ ಪ್ರಶ್ನಿಸಿ ಅರ್ಜಿದಾರರು ಕೆಎಟಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳನ್ನು ಕೆಎಟಿ ವಜಾಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಎಲ್ಲ ಅರ್ಜಿದಾರರು ಪ್ರತ್ಯೇಜವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Attachment
PDF
Veena H S Vs State of Karnataka.pdf
Preview

Related Stories

No stories found.
Kannada Bar & Bench
kannada.barandbench.com