ಬೆಂಗಳೂರಿನಂತಹ ಮಹಾನಗರಗಳ ಅತ್ಯುತ್ತಮ ಪ್ರತಿಭೆಗಳನ್ನು ನ್ಯಾಯಾಧೀಶರ ಹುದ್ದೆಯೆಡೆಗೆ ಆಕರ್ಷಿಸುವುದು ಕಷ್ಟಕರ: ಸಿಜೆಐ

ಭವಿಷ್ಯದ ದೃಷ್ಟಿಯಿಂದ ನಾವು ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವುದು ಮುಖ್ಯ ಎಂದು ಸಿಜೆಐ ಚಂದ್ರಚೂಡ್ ಹೇಳಿದರು.
CJI DY Chandrachud
CJI DY Chandrachud
Published on

ಬೆಂಗಳೂರು, ಮುಂಬೈ, ದೆಹಲಿಯಂತಹ ಜಾಗತಿಕ ಮಹಾನಗರಗಳಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ನ್ಯಾಯಾಧೀಶರನ್ನಾಗಿ ಮಾಡುವುದು ಅತಿ ಕಷ್ಟಕರ ಸಂಗತಿಯಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಹೇಳಿದರು.

ಸಿಜೆಐ ಹುದ್ದೆಗೇರಿದ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.  

ಪ್ರತಿಭಾವಂತ ಯುವ ವಕೀಲರು ನ್ಯಾಯಾಧೀಶ ಹುದ್ದೆಗೇರಲು ನಿರಾಕರಿಸಿದರೆ ಮುಂದೊಂದು ದಿನ ಅವರಿಗೆ ತಕ್ಕ ನ್ಯಾಯಾಧೀಶರನ್ನು ಪಡೆಯುತ್ತಾರೆ! ಹಾಗಾಗಿ ಪೀಠಕ್ಕೆ ಉತ್ತಮರು ಬರುವಂತೆ ನೋಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಆ ಮೂಲಕ ಉತ್ತಮರು ಅವಕಾಶಗಳನ್ನು ನಿರಾಕರಿಸುವುದರಿಂದ ಭವಿಷ್ಯದಲ್ಲಿ ಸಾಂಸ್ಥಿಕವಾಗಿ ಎದುರಿಸಬೇಕಾಗುವ ಸಮಸ್ಯೆಯ ಬಗ್ಗೆ ಮಾರ್ಮಿಕವಾಗಿ ವಿವರಿಸಿದರು.

Also Read
ಬಾಂಬೆ ಹೈಕೋರ್ಟ್‌ನ ನಿರ್ಭೀತ ನಿಲುವಿನಿಂದಾಗಿ ತುರ್ತು ಪರಿಸ್ಥಿತಿ ವೇಳೆ ಪ್ರಜಾಪ್ರಭುತ್ವ ಉಳಿಯಿತು: ಸಿಜೆಐ

“ನೀವೀಗ ನ್ಯಾಯಾಧೀಶರ ಹುದ್ದೆಯನ್ನು ಒಪ್ಪದಿದ್ದರೆ 25 ವರ್ಷಗಳ ಬಳಿಕ ನಿಮಗೆ ತಕ್ಕ ನ್ಯಾಯಾಧೀಶರು ಸಿಗುತ್ತಾರೆ! ಹಾಗಾಗಿ, ನಾವು ರಕ್ಷಣೆ ಮಾಡಬೇಕಿರುವುದು ಇಂದಿಗಲ್ಲ, ಬದಲಿಗೆ ಈ ಸಂಸ್ಥೆಗೆ ಉತ್ತಮರು ಬರದೆ ಹೋದಲ್ಲಿ ಇನ್ನು 15-20 ವರ್ಷದ ನಂತರ ಏನಾಗಲಿದೆ ಎನ್ನುವುದನ್ನು ಆಲೋಚಿಸಿ ನಿರ್ಧರಿಸಬೇಕಿದೆ. ಇದರಲ್ಲಿ ನೀವೆಲ್ಲರೂ ಮಹತ್ವದ ಪಾತ್ರ ವಹಿಸುತ್ತೀರಿ" ಎಂದು ಅವರು ಹೇಳಿದರು.

Also Read
ನನ್ನ ಪೋಷಕರು ಶ್ರೀಮಂತ ಕುಟುಂಬಗಳಿಂದ ಬಂದವರಲ್ಲ, ಜಮೀನು ಕಳೆದುಕೊಂಡ ಬಳಿಕ ಅವರ ಹಾದಿ ಬದಲಾಯಿತು: ಸಿಜೆಐ ಚಂದ್ರಚೂಡ್

ಈಗಿನ ನ್ಯಾಯಾಧೀಶರ ಸಾಮರ್ಥ್ಯದ ಬಗಗೆ ಯಾವುದೇ ಅನುಮಾನ ಇಲ್ಲ. ಆದರೆ ಅವರು 37ರ ಆಸುಪಾಸಿನ ವಯಸ್ಸಿನಿಂದಲೇ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವುದು ಮುಖ್ಯವಾಗಿದೆ ಎಂದು ಹೇಳಿದರು.

“... ನಿಮ್ಮ ಮೇಲೆ ಈಗ ನಿಗಾ ಇಡಲಾಗಿದೆ, ನೀವು ಪರಿಗಣನೆಯಲ್ಲಿದ್ದೀರಿ. ಮುಂದಿನ ಐದು, ಆರು ಅಥವಾ ಏಳು ವರ್ಷಗಳಲ್ಲಿ ನೀವು ನ್ಯಾಯಾಧೀಶರಾಗುತ್ತೀರಿ ಎಂದು ನಾವು ಯುವ ಪ್ರತಿಭೆಗಳಿಗೆ ಅವರು 37, 38, 39 ವಯೋಮಾನದಲ್ಲಿರುವಾಗ ಹೇಳಬೇಕಿದೆ. ಆ ಮೂಲಕ ಮುಂದಿನ ದಿನಗಳಲ್ಲಿ ಈ ಸಂಸ್ಥೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯ ಪ್ರಮುಖ ಭಾಗವಾಗಲಿದ್ದೀರಿ ಎಂಬ ವಿಚಾರವನ್ನು ಅವರೊಳಗೆ ಬಿತ್ತಬೇಕಿದೆ. ನ್ಯಾಯಾಲಯಗಳ ಉಳಿವಿಗಾಗಿ ವಕೀಲ ವರ್ಗದಲ್ಲಿರುವ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವುದು ನಿರ್ಣಾಯಕವಾಗಿದೆ” ಎಂದು ಅವರು ವಿವರಿಸಿದರು.

Kannada Bar & Bench
kannada.barandbench.com