ಕಟ್ಟಡ ನಿರ್ವಹಣೆ ತಂತ್ರಜ್ಞಾನದ ಬಳಕೆಯಲ್ಲಿ ಹುಬ್ಬಳ್ಳಿಯ ನ್ಯಾಯಾಲಯ ದೇಶಕ್ಕೇ ಮಾದರಿ: ಸುಪ್ರೀಂ ನ್ಯಾ. ಓಕಾ ಮೆಚ್ಚುಗೆ

ಆದರೆ ನ್ಯಾಯದಾನದ ಗುಣಮಟ್ಟ ಹೆಚ್ಚಿಸಲು ತಂತ್ರಜ್ಞಾನವೊಂದೇ ಸಾಲದು ಎಂದು ಅವರು ಎಚ್ಚರಿಕೆ ನೀಡಿದರು.
Justice AS oka
Justice AS oka
Published on

ದೇಶದ ಮೂರು ನ್ಯಾಯಾಲಯಗಳು ಮಾದರಿ ನ್ಯಾಯಾಲಯಗಳಾಗಿದ್ದು ಅವುಗಳಲ್ಲಿ ಹುಬ್ಬಳ್ಳಿಯ ತಾಲ್ಲೂಕು ನ್ಯಾಯಾಲಯ ತಂತ್ರಜ್ಞಾನವನ್ನು ಅತ್ಯುತ್ತಮವಾಗಿ ಬಳಸಿಕೊಂಡಿದೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಭಯ್‌ ಎಸ್‌ ಓಕಾ ತಿಳಿಸಿದರು.

'ನ್ಯಾಯಾಲಯಗಳಲ್ಲಿ ತಂತ್ರಜ್ಞಾನದ ಪಾತ್ರʼ ಎಂಬ ವಿಚಾರವಾಗಿ ಬಾಂಬೆ ಹೈಕೋರ್ಟ್‌ನಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ  ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

"ಇದು ಅತ್ಯಾಧುನಿಕ ನ್ಯಾಯಾಲಯಗಳಲ್ಲಿ ಒಂದಾಗಿದೆ, ಸರ್ಕಾರ  ಈ ನ್ಯಾಯಾಲಯಕ್ಕೆ ಸಾಕಷ್ಟು ಹಣ ಖರ್ಚು ಮಾಡಿದೆ. ನ್ಯಾಯಾಲಯದ ನೆಲಮಾಳಿಗೆಯಲ್ಲಿ ಕಂಪ್ಯೂಟರ್‌ ಒಂದನ್ನು ಇರಿಸಲಾಗಿದೆ. ಅಲ್ಲಿ ಒಬ್ಬ ಆಪರೇಟರ್ ಕುಳಿತಿರುತ್ತಾರೆ. ಕಂಪ್ಯೂಟರ್‌ ಮೂಲಕ ಅವರು ಎಸಿ  ವ್ಯವಸ್ಥೆ, ಎಲಿವೇಟರ್‌ಗಳು, ಫ್ಯಾನ್‌, ವಿದ್ಯುತ್‌ ದೀಪ, ನೀರಿನ ಪಂಪ್, ನೀರಿನ ಮಟ್ಟ, ಎಲ್ಲವನ್ನೂ ನಿಯಂತ್ರಿಸುತ್ತಾರೆ. ಇದಕ್ಕಾಗಿ ಅಲ್ಲಿ ಕಟ್ಟಡ ನಿರ್ವಹಣಾ ತಂತ್ರಾಂಶ ಬಳಸಲಾಗುತ್ತಿದೆ. ಇದು ನಾವು ತಂತ್ರಜ್ಞಾನವನ್ನು ಬಳಸಬಹುದಾದ ಒಂದು ವಲಯವಾಗಿದೆ. ಅನೇಕ ಆಡಳಿತ ಸಿಬ್ಬಂದಿಗಳನ್ನು ಇಂತಹ ಕೆಲಸಕ್ಕೆ ಹಾಕುವ ಬದಲು ನಾವು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಬಹುದು, ”ಎಂದು ನ್ಯಾಯಮೂರ್ತಿ ಓಕಾ ಹೇಳಿದರು.

Also Read
ಕರ್ನಾಟಕದ ನ್ಯಾಯಾಂಗ ಮೂಲಸೌಕರ್ಯ ಶ್ಲಾಘಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ ಎಸ್ ಓಕಾ

ನವದೆಹಲಿಯ ಸಾಕೇತ್‌ ನ್ಯಾಯಾಲಯ ಮತ್ತು ಪುಣೆಯ ಕೌಟುಂಬಿಕ ನ್ಯಾಯಾಲಯಗಳು ಮಾದರಿ ನ್ಯಾಯಾಲಯಗಳಾಗಿವೆ. ಪುಣೆಯಲ್ಲಿರುವ ನ್ಯಾಯಾಲಯ ದೇಶದ ಅತ್ಯುತ್ತಮ ಕೌಟುಂಬಿಕ ನ್ಯಾಯಾಲಯಗಳಲ್ಲಿ ಒಂದು. ನ್ಯಾಯಾಲಯವನ್ನು ಹಾಗೆ ರೂಪಿಸಿದ ಹೆಗ್ಗಳಿಕೆ ನ್ಯಾ. ರೇವತಿ ಮೋಹಿತೆ ಡೆರೆ ಅವರಿಗೆ ಸಲ್ಲಬೇಕು. ಎರಡು ಮೂರು ವರ್ಷಗಳ ಕಾಲ ತಮ್ಮ ವಾರಾಂತ್ಯದ ದಿನಗಳನ್ನು ಪುಣೆಯಲ್ಲಿ ಕಳೆದು ಆ ನ್ಯಾಯಾಲಯ ನಿರ್ಮಾಣಗೊಳ್ಳಲು ಅವರು ಕಾರಣರಾದರು” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಂತ್ರಜ್ಞಾನದ ಬಳಕೆಯು ನ್ಯಾಯಾಲಯಗಳ ಕಾರ್ಯನಿರ್ವಹಣೆಯನ್ನು ಸುಲಭಗೊಳಿಸಿ ನ್ಯಾಯಾಲಯಗಳ ಸಾರ್ವಜನಿಕ ಲಭ್ಯತೆ ಹೆಚ್ಚುವಂತೆ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು. ಬಾಂಬೆ ಹೈಕೋರ್ಟ್‌ನ ಕಂಪ್ಯೂಟರ್ ಸಮಿತಿಯ ಅಧ್ಯಕ್ಷರಾಗಿರುವ ಅವರು ಕೇರಳ, ದೆಹಲಿ ಹೈಕೋರ್ಟ್‌ ಮಾದರಿಯಲ್ಲಿ ಸ್ವಯಂ ಚಾಲಿತವಾಗಿ ಪ್ರಕರಣಗಳ ಪಟ್ಟಿ ಮಾಡುವ ತಂತ್ರಾಂಶವನ್ನು ರೂಪಿಸಬೇಕು. ನ್ಯಾಯಾಲಯಗಳಲ್ಲಿ ಪಾರದರ್ಶಕತೆಯನ್ನು ತರಲು ತಂತ್ರಜ್ಞಾನವನ್ನು ಬಳಸಬೇಕು ಎಂದರು.

ಇದೇ ವೇಳೆ ಅವರು, ನ್ಯಾಯದಾನದ ಗುಣಮಟ್ಟ ಹೆಚ್ಚಿಸಲು ತಂತ್ರಜ್ಞಾನವೊಂದೇ ಸಾಲದು ಎಂದು ಎಚ್ಚರಿಕೆ ನೀಡಿದರು. ತಂತ್ರಜ್ಞಾನ ಅದರದ್ದೇ ಆದ ಅನುಕೂಲತೆಗಳನ್ನು ಹೊಂದಿದೆ, ಆದರೆ ಅದುವೇ ನ್ಯಾಯದಾನದ ಗುಣಮಟ್ಟವನ್ನು ಸುಧಾರಿಸಲಾಗದು. ನ್ಯಾಯದಾನದ ಗುಣಮಟ್ಟ ಸುಧಾರಿಸಲು ಕಾನೂನು ಲೋಕದ ಸಮುದಾಯವು ಶ್ರಮಿಸಬೇಕು ಎಂದು ಸಲಹೆ ನೀಡಿದರು.

Kannada Bar & Bench
kannada.barandbench.com