ವೈಟ್‌ಫೀಲ್ಡ್‌ ಪೊಲೀಸ್‌ ಸ್ಟೇಷನ್‌ ಅನ್ನು ಡಾರ್ಕ್‌ ಫೀಲ್ಡ್‌ ಎಂದು ಬದಲಿಸಬೇಕು: ಹೈಕೋರ್ಟ್‌

“ಖಾಕಿ ಸಮವಸ್ತ್ರ ಧರಿಸಿದಾಕ್ಷಣ ಅಥವಾ ಎತ್ತರ–ದಪ್ಪ ಇದ್ದಾಕ್ಷಣ ನೀವು ಸಂವಿಧಾನ ಮತ್ತು ಕಾನೂನಿಗಿಂತ ಮಿಗಿಲಾದವರು ಎಂದುಕೊಳ್ಳಬೇಡಿ. ಯಾರನ್ನೇ ಆಗಲಿ ಬಂಧಿಸುವ ಅಧಿಕಾರವು ದಬ್ಬಾಳಿಕೆಯ ಅಸ್ತ್ರವಾಗಬಾರದು” ಎಂದು ಪೀಠ ಹೇಳಿದೆ.
Police officer
Police officer
Published on

“ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸುವ ಹಾಗೂ ನೋಟಿಸ್​ ನೀಡುವಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನಿರ್ದೇಶನದ ಅನುಸಾರ ಮಾರ್ಗದರ್ಶಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸದೇ ಹೋದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು” ಎಂದು ಕರ್ನಾಟಕ ಹೈಕೋರ್ಟ್ ಶನಿವಾರ ಪೊಲೀಸರ ಕೆಂಡಾಮಂಡಲವಾಯಿತು.

ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸರು ದಾಖಲಿಸಿರುವ ಎ‍ಫ್‌ಐಆರ್‌ ರದ್ದುಗೊಳಿಸಬೇಕು ಎಂದು ಕೋರಿ ರಾಜಾಜಿನಗರದ ಮೋಹನಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

“ಪೊಲೀಸರ ವರ್ತನೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಕಾಣಿಸುತ್ತಿಲ್ಲವೇ? ಬಂಧನಕ್ಕಿರುವ ಮಾರ್ಗಸೂಚಿಗಳ ಕುರಿತಂತೆ ಸುತ್ತೋಲೆ ಅಥವಾ ತತ್ಸಮಾನ ಆದೇಶವನ್ನು ಕೂಡಲೇ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಹೊರಡಿಸಬೇಕು. ಈ ನಿಯಮಗಳನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, ವೈಯಕ್ತಿಕವಾಗಿ ಪೊಲೀಸರ ಮೇಲೆ ಜುಲ್ಮಾನೆ ವಿಧಿಸಲಾಗುವುದು ಎಂದು ಸುತ್ತೋಲೆಯಲ್ಲಿ ನಮೂದಿಸಬೇಕು” ಎಂದು ತಾಕೀತು ಮಾಡಿದೆ.

“ಕ್ಷುಲ್ಲಕ ಕಾರಣಕ್ಕೆ ಸಾರ್ವಜನಿಕರನ್ನು ಕಾನೂನು ಬಾಹಿರವಾಗಿ ವಶಕ್ಕೆ ಪಡೆಯುವುದು ಮತ್ತು ಇಂತಹ ಸಂದರ್ಭಗಳಲ್ಲಿ ಠಾಣೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕೆಲಸ ಮಾಡದೇ ಇರುವುದನ್ನು ಇದೇ ಹೈಕೋರ್ಟ್‌ನ ಸಮನ್ವಯ ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿರುವುದನ್ನು ಮರೆಯುವಂತಿಲ್ಲ. ಪೊಲೀಸ್‌ ಠಾಣೆಗಳಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಮರೆ ಮಾಚಲು ಇಂತಹುದನ್ನೆಲ್ಲಾ ಮಾಡಲಾಗುತ್ತಿದೆಯೇ” ಎಂದು ಕಿಡಿ ಕಾರಿದೆ.

“ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ವ್ಯವಸ್ಥೆ ಹಾಗೂ ಯುಪಿಎಸ್ ಬ್ಯಾಕಪ್ 24 ಗಂಟೆಯೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಲು ರಾಜ್ಯಮಟ್ಟದ ಆಡಿಟ್ ನಡೆಸಬೇಕು. ಸುತ್ತೋಲೆ ಹೊರಡಿಸಿದ ಬಗ್ಗೆ ಸೆಪ್ಟೆಂಬರ್ 25ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು” ಎಂದು ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶಿಸಿದೆ.

ವಿಚಾರಣೆ ವೇಳೆ ಖುದ್ದು ಹಾಜರಿದ್ದ ತನಿಖಾಧಿಕಾರಿ ಎ ಡಿ ಪ್ರೀತಮ್‌, ಎಸಿಪಿ ರೀನಾ ಸುವರ್ಣ ಮತ್ತು ಡಿಸಿಪಿ ಸೈದುಲ್ಲಾ ಅದಾವತ್‌ ಅವರನ್ನು ಹಿಗ್ಗಾಮುಗ್ಗ ಜಾಡಿಸಿದ ಪೀಠವು “ನಿಮ್ಮ ವರ್ತನೆ ಮತ್ತು ಕಾರ್ಯವೈಖರಿಯನ್ನು ಹೈಕೋರ್ಟ್‌ ಸಹಿಸುವುದಿಲ್ಲ. ನಿಮ್ಮ ವೈಟ್‌ಫೀಲ್ಡ್‌ ಠಾಣೆ ಪದೇ ಪದೇ ಮುಗ್ಗರಿಸುತ್ತಿದ್ದು ಡಾರ್ಕ್‌ ಫೀಲ್ಡ್‌ ಠಾಣೆಯಾಗಿ ಪರಿವರ್ತನೆಗೊಂಡಿದೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

“ಉಡುಪಿಗೆ ತೆರಳಿ ಆರೋಪಿಯನ್ನು ಬಂಧಿಸಿ ರಾತ್ರಿ ಎರಡು ಗಂಟೆಯಲ್ಲಿ ಎಫ್‌ಐಆರ್ ದಾಖಲಿಸುವ ಅವಶ್ಯಕತೆ ಯಾಕಾಗಿ ಬಂತು. ಕಾನೂನು ಪ್ರಕ್ರಿಯೆ ಆರಂಭಿಸಿದ ಮೇಲೆ ಅದರಂತೆ ನಡೆಯುವುದು ನಿಮ್ಮ ಜವಾಬ್ದಾರಿಯಲ್ಲವೇ? ನೀವೆಲ್ಲಾ ಕಾನೂನು ಉಲ್ಲಂಘಿಸಿ ಮೆರೆಯುತ್ತಿದ್ದೀರಿ” ಎಂದು ಛೀಮಾರಿ ಹಾಕಿತು.

ವೈಟ್‌ಫೀಲ್ಡ್‌ನಲ್ಲಿ ನಿಗದಿಯಾಗಿದ್ದ ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಕುನಾಲ್ ಕಾಮ್ರಾ ಕಾರ್ಯಕ್ರಮ ರದ್ದುಗೊಳಿಸುವಂತೆ ಕೋರಿ, ‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ ಪೊಲೀಸರಿಗೆ ಮನವಿ ಸಲ್ಲಿಸಿತ್ತು. ಕಾರ್ಯಕ್ರಮ ರದ್ದಾದ ಬಳಿಕ ಸಂಘಟನೆಯ ಕಾರ್ಯಕರ್ತ ಮೋಹನ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದರು.

ಫೇಸ್‌ ಬುಕ್‌ನಲ್ಲಿ ಬಿತ್ತರಗೊಂಡಿದ್ದ ಈ ಪೋಸ್ಟ್ ಸುಳ್ಳು ಹಾಗೂ ತಪ್ಪು ದಾರಿಗೆಳೆಯುವಂತಿದೆ ಎಂದು ಆರೋಪಿಸಿ ವೈಟ್‌ಫೀಲ್ಡ್ ಪೊಲೀಸರು ಸ್ವಯಂಪ್ರೇರಿತವಾಗಿ ಮೋಹನಗೌಡ ವಿರುದ್ಧ; ಭಾರತೀಯ ನ್ಯಾಯ ಸಂಹಿತಾ-2023ರ (ಬಿಎನ್‌ಎಸ್‌) ಕಲಂ 217 (ಸುಳ್ಳು ಮಾಹಿತಿ ನೀಡುವುದು) ಮತ್ತು 353(2)ರ (ಸಾರ್ವಜನಿಕ ಶಾಂತಿ ಕದಡುವ ಮತ್ತು ವಿವಿಧ ಸಮುದಾಯಗಳ ನಡುವೆ ದ್ವೇಷ ಉಂಟುಮಾಡುವ ಸುಳ್ಳು ಮಾಹಿತಿ ಅಥವಾ ವದಂತಿಗಳ ಹರಡುವಿಕೆಯನ್ನು ತಡೆಯುವ) ಕಾನೂನುಗಳ ಅಡಿಯಲ್ಲಿನ ಅಪರಾಧಗಳಿಗಾಗಿ ಪ್ರಕರಣ ದಾಖಲಿಸಿದ್ದರು. ನಂತರ ವಶಕ್ಕೆ ಪಡೆದಿದ್ದರು.

ಅರ್ಜಿದಾರರ ಪರ ಗಿರೀಶ್‌ ಭಾರದ್ವಾಜ್‌ ಹಾಗೂ ಪ್ರಾಸಿಕ್ಯೂಷನ್‌ ಪರ ಬಿ ಎನ್‌ ಜಗದೀಶ್ ವಾದ ಮಂಡಿಸಿದರು.

Kannada Bar & Bench
kannada.barandbench.com