'ಪ್ರಕರಣ ಯಾವಾಗ ಆಲಿಸಬೇಕು ಎಂದು ನಮಗೆ ಆದೇಶಿಸಲು ಹೈಕೋರ್ಟ್ ಯಾರು?' ಎನ್‌ಸಿಎಲ್‌ಎಟಿ ಚೆನ್ನೈ ಪೀಠ ಗರಂ

ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಕರ್ನಾಟಕ ಹೈಕೋರ್ಟ್ ಆದೇಶ ಇದೆ ಎಂದು ವಕೀಲರು ಹೇಳಿದಾಗ ನ್ಯಾ. ಶರ್ಮಾ ಅವರು ಅಂತಹ ಆದೇಶ ಹೊರಡಿಸಲು ಹೈಕೋರ್ಟ್‌ಗೆ ಇರುವ ಅಧಿಕಾರವನ್ನು ಪ್ರಶ್ನಿಸಿದರು.
NCLAT ಚೆನ್ನೈ
NCLAT ಚೆನ್ನೈ
Published on

ಪ್ರಕರಣವೊಂದನ್ನು ಆದ್ಯತೆಯ ಮೇರೆಗೆ ವಿಚಾರಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್‌ ಆದೇಶ ಇದೆ ಎಂದು ವಕೀಲರೊಬ್ಬರು ತಿಳಿಸಿದಾಗ ಚೆನ್ನೈನಲ್ಲಿರುವ ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ ಕಾವೇರಿದ ಚರ್ಚೆಗೆ ಸಾಕ್ಷಿಯಾಯಿತು.

ಎನ್‌ಸಿಎಲ್‌ಎಟಿ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಶರದ್ ಕುಮಾರ್ ಶರ್ಮಾ, ಅಂತಹ ಆದೇಶ  ಹೊರಡಿಸಲು ಹೈಕೋರ್ಟ್‌ಗೆ ಇರುವ ಅಧಿಕಾರವನ್ನು ಪ್ರಶ್ನಿಸಿದರು.

Also Read
ತನ್ನ ವಿರುದ್ಧದ ದಿವಾಳಿ ಪ್ರಕ್ರಿಯೆ ಆದೇಶ ಪ್ರಶ್ನಿಸಿ ಚೆನ್ನೈ ಎನ್‌ಸಿಎಲ್ಎಟಿಗೆ ಬೈಜೂಸ್ ಮೇಲ್ಮನವಿ

"ಪ್ರಕರಣವನ್ನು ಯಾವಾಗ ಪಟ್ಟಿ ಮಾಡಬೇಕೆಂದು ಎನ್‌ಸಿಎಲ್‌ಎಟಿ ಗೆ ಆದೇಶಿಸಲು ಹೈಕೋರ್ಟ್ ಯಾರು? ಎನ್‌ಸಿಎಲ್‌ಎಟಿ ಗೆ ನಿರ್ದೇಶನಗಳನ್ನು ನೀಡುವುದು ಹೈಕೋರ್ಟ್‌ನ ವ್ಯವಹಾರ ಹೇಗಾಗುತ್ತದೆ?" ಅವರು ಪ್ರಶ್ನಿಸಿದರು.

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಆದೇಶದ ವಿರುದ್ಧ ತಾನು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಿಚಾರಣೆ ನಡೆಸಬೇಕೆಂದು ವಕೀಲರು ಬಯಸಿದ್ದರು. ಹೀಗಾಗಿ ನ್ಯಾ. ಶರ್ಮಾ ಪ್ರಕರಣವನ್ನು ಆಲಿಸುವಂತೆ ಅವರು ಕೋರಿದರು.

ಪ್ರಕರಣ ಹಿಂದೆಗೆದುಕೊಂಡು ಎನ್‌ಸಿಎಲ್‌ಎಟಿ ಮೆಟ್ಟಿಲೇರುವ ಬದಲು ಅವರು ಹೈಕೋರ್ಟನ್ನು ಸಂಪರ್ಕಿಸಿದ್ದರು.

ಪ್ರಕರಣವನ್ನು ಸೋಮವಾರ ವಿಚಾರಣೆ ನಡೆಸುವುದಾಗಿ ಎನ್‌ಸಿಎಲ್‌ಎಟಿ ಖುದ್ದು ಹೇಳಿತ್ತು ಎಂದು ವಕೀಲರು ತಿಳಿಸಿದರು. ಆದರೆ ತಾನು ಪ್ರಕರಣದ ವಿಚಾರಣೆ ನಿಗದಿಪಡಿಸುವಾಗ ದಿನಾಂಕವನ್ನು ಪ್ರಸ್ತಾಪಿಸುವುದಿಲ್ಲ ಎಂದು ನ್ಯಾ. ಶರ್ಮಾ ನುಡಿದರು.  

ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸುವಂತೆ ಹೈಕೋರ್ಟ್‌ ಕೂಡ ಹೇಳಿದೆ ಎಂದು ವಕೀಲರು ತಿಳಿಸಿದ್ದು ನ್ಯಾ. ಶರ್ಮಾ ಅವರು ಹೈಕೋರ್ಟ್‌ಗೆ ಇರುವ ಅಧಿಕಾರದ ಬಗ್ಗೆ ಪ್ರಶ್ನಿಸುವಂತೆ ಪ್ರೇರೇಪಿಸಿತು.  

Also Read
ಕೆಫೆ ಕಾಫಿ ಡೇ ವಿರುದ್ಧದ ದಿವಾಳಿತನ ಪ್ರಕ್ರಿಯೆ: ಬೆಂಗಳೂರಿನ ಎನ್‌ಸಿಎಲ್‌ಟಿ ಆದೇಶಕ್ಕೆ ಚೆನ್ನೈನ ಎನ್‌ಸಿಎಲ್‌ಎಟಿ ತಡೆ

ತಾನು ಕೂಡ ನ್ಯಾಯಾಂಗದ ಅದೇ ಹಾದಿಯಲ್ಲಿ ಹೆಜ್ಜೆ ಇರಿಸಿದವನು ಎಂದು ನ್ಯಾ. ಶರ್ಮಾ ಎನ್‌ಸಿಎಲ್‌ಎಟಿ ಸ್ವತಂತ್ರ ಮೇಲ್ಮನವಿ ನ್ಯಾಯಮಂಡಳಿಯಾಗಿದ್ದು ತನಗೆ ಅರ್ಥವಾಗಿರುವಂತೆ ಹೈಕೋರ್ಟ್‌ ಪ್ರಕರಣದ ವಿಚಾರಣೆಗೆ ಮನವಿ ಮಾಡಬಹುದೇ ವಿನಾ ನಿರ್ದೇಶನ ನೀಡದು ಎಂದರು.

ಉತ್ತರಾಖಂಡ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ನ್ಯಾ. ಶರ್ಮಾ ಅವರನ್ನು ಕಳೆದ ಜನವರಿ 30ರಂದು ಕೇಂದ್ರ ಸರ್ಕಾರ ಚೆನ್ನೈನ ಎನ್‌ಸಿಎಲ್‌ಎಟಿ ನ್ಯಾಯಾಂಗ ಸದಸ್ಯರನ್ನಾಗಿ ನೇಮಿಸಿತ್ತು.

Kannada Bar & Bench
kannada.barandbench.com