ತನ್ನ ವಿರುದ್ಧದ ದಿವಾಳಿ ಪ್ರಕ್ರಿಯೆ ಆದೇಶ ಪ್ರಶ್ನಿಸಿ ಚೆನ್ನೈ ಎನ್‌ಸಿಎಲ್ಎಟಿಗೆ ಬೈಜೂಸ್ ಮೇಲ್ಮನವಿ

ಪ್ರಾಯೋಜಕತ್ವ ಒಪ್ಪಂದದಂತೆ ತನಗೆ 158 ಕೋಟಿ ರೂ.ಗಳನ್ನು ಪಾವತಿಸಲು ವಿಫಲವಾದ ಬೈಜೂಸ್ ಶೈಕ್ಷಣಿಕ ತಂತ್ರಜ್ಞಾನ ಕಂಪನಿ ವಿರುದ್ಧ ಬಿಸಿಸಿಐ ಸಲ್ಲಿಸಿದ್ದ ದಿವಾಳಿತನ ಅರ್ಜಿಯನ್ನು ಬೆಂಗಳೂರಿನ ಎನ್‌ಸಿಎಲ್‌ಟಿ ಜುಲೈ 16ರಂದು ಸ್ವೀಕರಿಸಿತ್ತು.
Byju's, NCLAT
Byju's, NCLAT
Published on

ತನ್ನ ಮಾತೃ ಕಂಪೆನಿಯಾದ ಥಿಂಕ್‌ ಅಂಡ್‌ ಲರ್ನ್‌ ವಿರುದ್ಧದ ದಿವಾಳಿ ಅರ್ಜಿಯನ್ನು ಸ್ವೀಕರಿಸಿದ್ದ ಬೆಂಗಳೂರು ರಾಷ್ಟ್ರೀಯ ಕಂಪೆನಿ ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಆದೇಶ ಪ್ರಶ್ನಿಸಿ ಶೈಕ್ಷಣಿಕ ನವೋದ್ಯಮವಾದ ಬೈಜೂಸ್‌ ಚೆನ್ನೈನಲ್ಲಿರುವ  ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯ ಮಂಡಳಿಗೆ (ಎನ್‌ಸಿಎಲ್‌ಎಟಿ) ಅರ್ಜಿ ಸಲ್ಲಿಸಿದೆ.

ಥಿಂಕ್‌ ಅಂಡ್‌ ಲರ್ನ್‌ ಪರವಾಗಿ ಮಂಗಳವಾರ ಹಾಜರಾದ ಹಿರಿಯ ವಕೀಲ ಪ್ರಮೋದ್‌ ನಾಯರ್‌ ಅರ್ಜಿಯನ್ನು ತುರ್ತಾಗಿ ಆಲಿಸುವಂತೆ  ಮೇಲ್ಮನವಿ ನ್ಯಾಯಮಂಡಳಿಯ ನ್ಯಾಯಾಂಗ ಸದಸ್ಯ ಶರದ್ ಕುಮಾರ್ ಶರ್ಮಾ ಮತ್ತು ತಾಂತ್ರಿಕ ಸದಸ್ಯ ಜತೀಂದ್ರನಾಥ್ ಸ್ವೈನ್ ಅವರಿದ್ದ ಪೀಠವನ್ನು ಕೋರಿದರು.

Also Read
ಅಂತಾರಾಷ್ಟ್ರೀಯ ಸಾಲದಾತರಿಂದ ದಿವಾಳಿ ಪ್ರಕ್ರಿಯೆ ಚಾಲನೆಗೆ ಅರ್ಜಿ: ಬೈಜೂಸ್‌ಗೆ ನೋಟಿಸ್‌ ಜಾರಿ ಮಾಡಿದ ಎನ್‌ಸಿಎಲ್‌ಟಿ

ಈ ಮೊದಲು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿ ಬಳಿಕ ಅರ್ಜಿಯನ್ನು ಹಿಂಪಡೆದು ತನ್ನ ಬಳಿ ಬಂದಿರುವುದು ಏಕೆ ಎಂದು ಬೈಜೂಸ್‌ ಸಂಸ್ಥೆಯನ್ನು ನ್ಯಾಯಮಂಡಳಿ ಆರಂಭದಲ್ಲಿ ಪ್ರಶ್ನಿಸಿತು.

ಆದರೆ ಸಾವಿರಾರು ಉದ್ಯೋಗಿಗಳಿಗೆ ವೇತನ ನೀಡಬೇಕಿರುವುದರಿಂದ ತುರ್ತಾಗಿ ಅರ್ಜಿ ಆಲಿಸುವಂತೆ ನಾಯರ್‌ ಅವರು ಕೋರಿದರು. ಬಳಿಕ ಜುಲೈ 29 ರಂದು ವಿಚಾರಣೆ ನಡೆಸುವುದಾಗಿ ನ್ಯಾಯಮಂಡಳಿ ತಿಳಿಸಿತು.

 ಭಾರತೀಯ ಕ್ರಿಕೆಟ್ ತಂಡದ ಜರ್ಸಿ ಪ್ರಾಯೋಜಕತ್ವದ ಕುರಿತಾದ ಒಪ್ಪಂದದಂತೆ ಬಿಸಿಸಿಐಗೆ ನೀಡಬೇಕಿದ್ದ ಮೊತ್ತ ಪಾವತಿಸಲು ಬೈಜೂಸ್‌ ವಿಫಲವಾದ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬೆಂಗಳೂರಿನ ಎನ್‌ಸಿಎಲ್‌ಟಿಗೆ ಅರ್ಜಿ ಸಲ್ಲಿಸಿತ್ತು. ಮೊಬೈಲ್ ಫೋನ್ ತಯಾರಕ ಕಂಪೆನಿ ಒಪ್ಪೋದಿಂದ ಕ್ರಿಕೆಟ್ ತಂಡದ ಜರ್ಸಿಗಳನ್ನು ಪ್ರಾಯೋಜಿಸುವ ಜವಾಬ್ದಾರಿಯನ್ನು ಹಿಂಪಡೆದಿದ್ದ ಬಿಸಿಸಿಐ ಬೈಜೂಸ್‌ ಜೊತೆ 2019ರಲ್ಲಿ ಪ್ರಾಯೋಜಕತ್ವ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದ 2022ರಲ್ಲೇ ಕೊನೆಗೊಂಡರೂ ಅದನ್ನು 2023 ಕ್ಕೆ ವಿಸ್ತರಿಸಲಾಯಿತು.

Also Read
ಬೈಜೂಸ್‌ ವಿರುದ್ಧ ದಿವಾಳಿ ಪ್ರಕ್ರಿಯೆ ಆರಂಭಿಸಲು ಕೋರಿ ಎನ್‌ಸಿಎಲ್‌ಟಿ ಮೆಟ್ಟಿಲೇರಿದ ಮತ್ತೊಂದು ಸಂಸ್ಥೆ

ಬಿಸಿಸಿಐ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ವಿಶ್ವ ಫುಟ್‌ಬಾಲ್‌ ಸಂಸ್ಥೆ (ಫಿಫಾ) ಜೊತೆಗೂ ತಾನು ಪ್ರಾಯೋಜಕತ್ವ ಒಪ್ಪಂದ ನವೀಕರಿಸುವುದಿಲ್ಲ ಎಂದು ಹಲವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದ ಬೈಜೂಸ್‌ ಕಳೆದ ಜನವರಿಯಲ್ಲಿ ಘೋಷಿಸಿತ್ತು.

ಹೀಗಾಗಿ ಆ ವರ್ಷವೇ ಅದ ವಿರುದ್ಧ ಕಾರ್ಪೊರೇಟ್‌ ದಿವಾಳಿ ಪರಿಹಾರ ಪ್ರಕ್ರಿಯೆಯನ್ನು ಕೋರಿ ಬಿಸಿಸಿಐ ಬೆಂಗಳೂರಿನ ಎನ್‌ಸಿಎಲ್‌ಟಿಗೆ ಮನವಿ ಸಲ್ಲಿಸಿತ್ತು. ಅರ್ಜಿ ಆಲಿಸಿದ್ದ ನ್ಯಾಯಮಂಡಳಿ ಜುಲೈ 16 ರಂದು ಬಿಸಿಸಿಐ ಸಲ್ಲಿಸಿದ್ದ ದಿವಾಳಿ ಅರ್ಜಿಯನ್ನು ಸ್ವೀಕರಿಸಿತ್ತು. ಈ ಆದೇಶವನ್ನು ಇದೀಗ ಬೈಜೂಸ್‌ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿದೆ.

Kannada Bar & Bench
kannada.barandbench.com