ಕೊಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ನಿರತ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸ್ವಯಂ ಪ್ರೇರಿತ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನಿತ್ಯ ಪೊಲೀಸರಿಗೆ ಸಹಾಯ ಮಾಡುವ ಪೌರ ಸ್ವಯಂ ಸೇವಕರ ನೇಮಕಾತಿ ಕುರಿತ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿದೆ [ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೇನಿ ವೈದ್ಯೆಯ ಆಪಾದಿತ ಅತ್ಯಾಚಾರ ಮತ್ತು ಕೊಲೆ ಘಟನೆ ಮತ್ತು ಸಂಬಂಧಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಪ್ರಕರಣ].
ಕಿರಿಯ ವೈದ್ಯೆಯ ಅಮಾನುಷ ಅತ್ಯಾಚಾರ ಮತ್ತು ಹತ್ಯೆಯ ಆರೋಪಿ ಸಂಜಯ್ ರಾಯ್ ಸಿವಿಲ್ ಪೊಲೀಸ್ ಸ್ವಯಂಸೇವಕನಾಗಿದ್ದ ಎಂಬುದನ್ನು ಗಮನಿಸಿದ ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಅಂತಹ ನೇಮಕಾತಿ ಕುರಿತ ದಾಖಲೆಗಳನ್ನು ನೀಡುವಂತೆ ತಾಕೀತು ಮಾಡಿತು.
ಆರೋಪಿಯ ಹುದ್ದೆಯ ಕಾರಣಕ್ಕೆ ಆಸ್ಪತ್ರೆ ಕಟ್ಟಡಕ್ಕೆ ಆತನ ಪ್ರವೇಶ ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ ಎನ್ನುವ ಅಂಶ ಬೆಳಕಿಗೆ ಬಂದಿತ್ತು. ಪೌರ ಪೊಲೀಸ್ ಸ್ವಯಂ ಸೇವಕರೆಂದರೆ ಉದ್ಯೋಗ ಇಲ್ಲದವರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ಮತ್ತು ಪೊಲೀಸ್ ಇಲಾಖೆಯಲ್ಲಿ ಮಾನವಶಕ್ತಿ ಕೊರತೆ ನೀಗಿಸುವ ಉದ್ದೇಶದಿಂದ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡವರು. ಟ್ರಾಫಿಕ್ ಜಂಕ್ಷನ್‌ಗಳನ್ನು ನಿರ್ವಹಿಸುವಂತಹ ಸಣ್ಣಪುಟ್ಟ ಕೆಲಸಗಳನ್ನು ಅವರಿಗೆ ಸಾಮಾನ್ಯವಾಗಿ ವಹಿಸಲಾಗುತ್ತದೆ.
"ಈ ಪೌರ ಸ್ವಯಂಸೇವಕರನ್ನು ಯಾರು ನೇಮಿಸಿಕೊಳ್ಳುತ್ತಾರೆ. ಅದಕ್ಕೆ ಅರ್ಹತೆಗಳೇನು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಅಂತಹ ಸ್ವಯಂಸೇವಕರು ಆಸ್ಪತ್ರೆಗಳು, ಶಾಲೆಗಳಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಯಾಕೆ ಕಾರ್ಯ ನಿರ್ವಹಿಸುತ್ತಾರೆ ಎಂದು ನಾವು ತಿಳಿದುಕೊಳ್ಳಬೇಕು" ಎಂದು ನ್ಯಾಯಾಲಯ ಇಂದು ಹೇಳಿದೆ.
"ಈವರೆಗೆ ಪೊಲೀಸ್ ಠಾಣೆಗಳಲ್ಲಿ 1,500 ಕ್ಕೂ ಹೆಚ್ಚು ಸ್ವಯಂಸೇವಕರು ಇದ್ದಾರೆ" ಎಂದು ನ್ಯಾಯಾಲಯದ ಮುಂದೆ ಕಿರಿಯ ವೈದ್ಯರನ್ನು ಪ್ರತಿನಿಧಿಸುತ್ತಿದ್ದ ಹಿರಿಯ ವಕೀಲ ಕರುಣಾ ನಂದಿ ಹೇಳಿದರು.
ಆಗ ನ್ಯಾಯಾಲಯವು, "ಆಯ್ದ ಕೆಲ ವ್ಯಕ್ತಿಗಳ ರಾಜಕೀಯ ತುಷ್ಟೀಕರಣಕ್ಕೆ ಇದು ಉತ್ತಮ ಮಾರ್ಗ. ಈ ಕುರಿತಂತೆ ಪ. ಬಂಗಾಳ ಸರ್ಕಾರ ಮೊದಲು ನಮಗೆ ದತ್ತಾಂಶದ ಮಾಹಿತಿ ನೀಡಲಿ" ಎಂದು ಹೇಳಿತು.