ಅಧಿಕ ಪ್ರಮಾಣದ ಸ್ಥಳೀಯ ಕೋಟಾ ನಿಗದಿಯು ಮೀಸಲಾತಿ ಉದ್ದೇಶವನ್ನೇ ತಲೆಕೆಳಗು ಮಾಡುತ್ತದೆ: ಸುಪ್ರೀಂ ಕೋರ್ಟ್‌

ಎರಡು ತಿಂಗಳೊಳಗೆ ಆ ಬಗೆಯ ಮೀಸಲಾತಿ ಅಗತ್ಯತೆ ಕುರಿತಂತೆ ವಾಸ್ತವಿಕ ಇತ್ಯರ್ಥಕ್ಕೆ ಬರುವುದಕ್ಕಾಗಿ ಅಗತ್ಯ ಮಾಹಿತಿ ಪರಿಶೀಲಿಸುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸೂಚಿಸಿತು.
Justices Sudhanshu Dhulia and Aniruddha Bose
Justices Sudhanshu Dhulia and Aniruddha Bose

ಶಿಕ್ಷಣ ಸಂಸ್ಥೆಗಳಲ್ಲಿ ಸಂವಿಧಾನ ವಿರೋಧಿಯಾದ ಮತ್ತು ಸಮಾನತೆಯ ಹಕ್ಕನ್ನು ಉಲ್ಲಂಘಿಸುವ ಅಧಿಕ ಪ್ರಮಾಣದ ಸಗಟು ಮೀಸಲಾತಿಯನ್ನು ಜಾರಿಗೆ ತರಬಾರದು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಪುನರುಚ್ಚರಿಸಿದೆ [ವೀಣಾ ವಾದಿನಿ ಶಿಕ್ಷಕರ ತರಬೇತಿ ಸಂಸ್ಥೆ ಮತ್ತು ಮಧ್ಯಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಮಧ್ಯಪ್ರದೇಶದ ಬಿ.ಎಡ್‌ ಕಾಲೇಜುಗಳಿಗೆ ಕಡ್ಡಾಯವಾಗಿ ಶೇ 75ರಷ್ಟು ಸ್ಥಳೀಯ ಪ್ರಾತಿನಿಧ್ಯ ಕಲ್ಪಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಈ ಮೀಸಲಾತಿಯ ಪ್ರಮಾಣ ತೀರಾ ಹೆಚ್ಚಾಗಿದ್ದು ಯಾವುದೇ ಉದ್ದೇಶವನ್ನು ಈಡೇರಿಸದು ಎಂದಿತು.

“ತನ್ನದೇ ನಿವಾಸಿಗಳಿಗೆ ಸೀಟುಗಳನ್ನು ಕಾಯ್ದಿರಿಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಇದೆಯಾದರೂ ಹಾಗೆ ಮಾಡುವಾಗ ವಾಸ್ತವಾಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು… ಒಟ್ಟು ಸೀಟುಗಳಲ್ಲಿ ಶೇ.75% ವರೆಗೂ ಮೀಸಲಾತಿ ಕಲ್ಪಿಸುವುದು ಅದನ್ನು ಸಗಟು ಮೀಸಲಾತಿಯಾಗಿಸಿಬಿಡುತ್ತದೆ. ಪ್ರದೀಪ್‌ ಜೈನ್‌ ಪ್ರಕರಣದಲ್ಲಿ ಇದು ಅಸಾಂವಿಧಾನಿಕ ಮತ್ತು ಸಂವಿಧಾನದ 14ನೇ ವಿಧಿಯ ಉಲ್ಲಂಘನೆ ಎಂದು ತೀರ್ಪು ನೀಡಲಾಗಿದೆ. ನಾವು ಕಂಡಂತೆ ಸಗಟು ಮೀಸಲಾತಿ ಯಾವುದೇ ಉದ್ದೇಶವನ್ನು ಈಡೇರಿಸುತ್ತಿಲ್ಲ, ಬದಲಿಗೆ ಮೀಸಲಾತಿಯ ಆಶಯಗಳನ್ನು ವಿಫಲಗೊಳಿಸುತ್ತಿದೆ” ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ಮುಂದುವರೆದು ನ್ಯಾಯಾಲಯವು, "ಶಿಕ್ಷಣದ ವಿವಿಧ ಕ್ಷೇತ್ರಗಳಲ್ಲಿ ಸ್ಥಳೀಯ ಪ್ರಾತಿನಿಧ್ಯವನ್ನು ಕಲ್ಪಿಸುವ ವಿಚಾರವಾಗಿ ವಿಶೇಷ ವಾಸ್ತವಾಂಶಗಳೆಡೆಗೆ ನಾವು ಕುರುಡಾಗಲು ಸಾಧ್ಯವಿಲ್ಲ. ವೈದ್ಯಕೀಯ ಶಿಕ್ಷಣದ ವಿಚಾರವನ್ನು ಗಮನಿಸಿದರೆ ರಾಜ್ಯವೊಂದು ಹಿಂದುಳಿದಿರುವುದು ಅಥವಾ ಸ್ಥಳೀಯ ಮೀಸಲಾತಿಯನ್ನು ಕಲ್ಪಿಸಲು ಕಾರಣವಾದ 'ರಾಜ್ಯದ ಹಿತಾಸಕ್ತಿಯನ್ನು' ಕಾಯುವ ಇನ್ನಾವುದೇ ನ್ಯಾಯಯುತ ಅಂಶದ ಆಧಾರದಲ್ಲಿ ಕಲ್ಪಿಸಲಾದ ಈ ಮೀಸಲಾತಿಯು ಇತರ ಶೈಕ್ಷಣಿಕ ವಲಯಗಳಲ್ಲಿಯೂ ಅಥವಾ ವೃತ್ತಿಪರ ಕೋರ್ಸ್‌ಗಳ ವಿಚಾರದಲ್ಲಿಯೂ ಪ್ರಸ್ತುತವೇ ಎಂಬುದನ್ನು ಇನ್ನೂ ಕಂಡುಕೊಳ್ಳಬೇಕಾಗಿದೆ," ಎಂದು ವಿವರಿಸಿತು.

ಹೀಗಾಗಿ ಎರಡು ತಿಂಗಳೊಳಗೆ ಆ ಬಗೆಯ ಮೀಸಲಾತಿ ಅಗತ್ಯತೆ ಕುರಿತಂತೆ ವಾಸ್ತವಿಕ ಇತ್ಯರ್ಥಕ್ಕೆ ಬರುವುದಕ್ಕಾಗಿ ಅಗತ್ಯ ಪೂರಕ ಮಾಹಿತಿ ಪರಿಶೀಲಿಸುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸೂಚಿಸಿತು.

ಇಂತಹ ಮೀಸಲಾತಿಯನ್ನು ಎತ್ತಿಹಿಡಿದಿದ್ದ ಮಧ್ಯಪ್ರದೇಶ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯ ಈ ಆದೇಶ ನೀಡಿದೆ. ಸ್ಥಳೀಯ ಪ್ರಾತಿನಿಧ್ಯ ಕೋಟಾದಡಿ ಸೀಟುಗಳು ಭರ್ತಿಯಾಗದೇ ಉಳಿದಿದ್ದು ಇಂತಹ ನೀತಿಯಿಂದ ತೊಂದರೆಯಾಗುತ್ತಿದೆ ಎಂದು ಬಿಎಡ್‌ ಕಾಲೇಜುಗಳನ್ನು ನಡೆಸುತ್ತಿದ್ದ ಅರ್ಜಿದಾರರು ಅಳಲು ತೋಡಿಕೊಂಡಿದ್ದರು.

Kannada Bar & Bench
kannada.barandbench.com