ವಾಣಿಜ್ಯ ಚಿಹ್ನೆ ಉಲ್ಲಂಘನೆ: 'ಐಸಿ 814ʼ ನಿರ್ಮಾಪಕರ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋದ ಎಎನ್ಐ

ನಿರ್ಮಾಪಕರು ತನ್ನ ದೃಶ್ಯಾವಳಿಗಳನ್ನು ಪರವಾನಗಿ ಇಲ್ಲದೆ ಬಳಸಿದ್ದು ಐಎಸ್ಐಯನ್ನು ದೋಷಮುಕ್ತಗೊಳಿಸುವ ಚಿತ್ರಸರಣಿಯೊಂದಿಗೆ ನಂಟು ಇರಿಸಿಕೊಳ್ಳಲು ತಾನು ಬಯಸುವುದಿಲ್ಲ ಎಂದು ಸುದ್ದಿ ಸಂಸ್ಥೆ ಹೇಳಿಕೊಂಡಿದೆ.
ANI, Netflix series IC 814 hijack
ANI, Netflix series IC 814 hijack
Published on

ಏಷ್ಯಾ ನ್ಯೂಸ್ ಇಂಟರ್‌ನ್ಯಾಷನಲ್‌ (ಎಎನ್‌ಐ) ಸಲ್ಲಿಸಿದ್ದ ಹಕ್ಕುಸ್ವಾಮ್ಯ ಮತ್ತು ವಾಣಿಜ್ಯ ಚಿಹ್ನೆ ಉಲ್ಲಂಘನೆ ಮೊಕದ್ದಮೆಗೆ ಸಂಬಂಧಿಸಿದಂತೆ 'ಐಸಿ 814: ಕಾಂದಹಾರ್‌ ಹೈಜಾಕ್‌ʼ ನೆಟ್‌ಫ್ಲಿಕ್ಸ್‌ ಚಿತ್ರ ಸರಣಿಯ ನಿರ್ಮಾಪಕರಿಗೆ ದೆಹಲಿ ಹೈಕೋರ್ಟ್‌ ಸೋಮವಾರ ನೋಟಿಸ್‌ ಜಾರಿ ಮಾಡಿದೆ.

ಪ್ರಕರಣವನ್ನು ಸಂಕ್ಷಿಪ್ತವಾಗಿ ಆಲಿಸಿದ ನ್ಯಾ. ಮಿನಿ ಪುಷ್ಕರ್ಣ ಅವರು ಎಎನ್‌ಐ ಸಲ್ಲಿಸಿರುವ  ಮಧ್ಯಂತರ ಪರಿಹಾರದ ಮನವಿಗೆ ಸಂಬಂಧಿಸಿದಂತೆ ಮ್ಯಾಚ್‌ಬಾಕ್ಸ್‌ ಶಾಟ್ಸ್, ಬನಾರಸ್ ಮೀಡಿಯಾ ವರ್ಕ್ಸ್ ಹಾಗೂ ನೆಟ್‌ಫ್ಲಿಕ್ಸ್‌ಗೆ ಪ್ರತಿಕ್ರಿಯಿಸುವಂತೆ ಆದೇಶಿಸಿದ್ದಾರೆ. ಶುಕ್ರವಾರ ಪ್ರಕರಣದ ವಿಚಾರಣೆ ನಡೆಯಲಿದೆ.

Also Read
ಬರ್ಗರ್ ಕಿಂಗ್ ವಾಣಿಜ್ಯ ಚಿಹ್ನೆ: ಸ್ಥಳೀಯ ರೆಸ್ಟರಂಟ್ ಪರ ಆದೇಶಕ್ಕೆ ಬಾಂಬೆ ಹೈಕೋರ್ಟ್ ಮಧ್ಯಂತರ ತಡೆ

ಕಾಂದಹಾರ್ ಅಪಹರಣದ ಸಂದರ್ಭದಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಜನರಲ್ ಪರ್ವೇಜ್ ಮುಷರಫ್ ಮತ್ತು ಭಯೋತ್ಪಾದಕ ಮಸೂದ್ ಮತ್ತು ಇತರರು ಇರುವ ತಾನು ಚಿತ್ರೀಕರಿಸಿದ್ದ ದೃಶ್ಯಾವಳಿಗಳನ್ನು ತನ್ನ ಅನುಮತಿ ಪಡೆಯದೆ ಚಿತ್ರದಲ್ಲಿ ಬಳಸಲಾಗಿದೆ. ಅಲ್ಲದೆ ಐಎಸ್‌ಐಗೆ ವ್ಯಾಪಕ ಪ್ರಚಾರ ತಂದುಕೊಟ್ಟಿದೆ ಎಂದು ಈಗ ಹೇಳಲಾಗುತ್ತಿರುವ ಹೈಜಾಕ್‌ ಘಟನೆಗೂ  ಪಾಕಿಸ್ತಾನಕ್ಕೂ ಯಾವುದೇ ನಂಟಿಲ್ಲ ಎಂದು ತೋರಿಸಿರುವ ಚಿತ್ರದೊಂದಿಗೆ ತಾನು ಸಂಬಂಧ ಮುಂದುವರೆಸಲು ಬಯಸುವುದಿಲ್ಲ. ಕೆಲ ದೃಶ್ಯಗಳಲ್ಲಿ ಎಎನ್‌ಐ ಲೋಗೊ ಕಂಡುಬರುತ್ತಿದ್ದು ಅದು ವಾಣಿಜ್ಯ ಚಿಹ್ನೆ ಉಲ್ಲಂಘನೆ. ಲೋಗೊ ಇರುವ ದೃಶ್ಯಾವಳಿಗಳಿಗೆ ಕತ್ತರಿ ಹಾಕಬೇಕು ಇಲ್ಲವೇ ಲೋಗೊ ಭಾಗವನ್ನು ಮಸುಕುಗೊಳಿಸಬೇಕು ಎಂದು ಎಎನ್‌ಐ ವಾದಿಸಿತು.   

Also Read
ನೆಟ್‌ಫ್ಲಿಕ್ಸ್‌ ಸರಣಿ ʼತ್ರಿಭುವನ್ ಮಿಶ್ರಾ ಸಿಎ ಟಾಪರ್‌ʼಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ್ದೇಕೆ?

ಆದರೆ ವಾದಗಳನ್ನು ನಿರ್ಮಾಪಕರ ಪರ ವಕೀಲರು ಅಲ್ಲಗಳೆದರು. ಕಾನ್ಸೆಪ್ಚುವಲ್ ಮತ್ತು ವೈಲ್ಡರ್ನೆಸ್ ಹೆಸರಿನ ಇತರ ಎರಡು ಸಂಸ್ಥೆಗಳಿಗೆ ₹ 1.75 ಕೋಟಿ ಪಾವತಿಸಿ ಸುದ್ದಿ ಆಧಾರಿತ ನೈಜ ದೃಶ್ಯಗಳನ್ನು ಖರೀದಿಸಲಾಗಿದೆ. ಎಎನ್‌ಐನ ಪಾಲುದಾರ ಸಂಸ್ಥೆಯಾದ ರಾಯಿಟರ್ಸ್‌ ಈ ದೃಶ್ಯಗಳನ್ನು ಆ ಸಂಸ್ಥೆಗಳಿಗೆ ನೀಡಿದ್ದು ನಿರ್ಮಾಪಕರು ಈ ಕುರಿತು ಒಪ್ಪಂದ ಮಾಡಿಕೊಟ್ಟಿದ್ದಾರೆ. ₹100 ಕೋಟಿಗೂ ಅಧಿಕ ಬಜೆಟ್‌ನಲ್ಲಿ ಚಿತ್ರ ಸರಣಿ ನಿರ್ಮಾಣವಾಗಿದ್ದು ಬಳಸಿಕೊಂಡ ನೈಜ ದೃಶ್ಯಗಳಿಗೆ ನಿರ್ಮಾಪಕರು ಹಣ ಪಾವತಿಸಿಲ್ಲ ಎಂಬುದು ನಂಬಲರ್ಹವೇ ಎಂದು ಪ್ರಶ್ನಿಸಿದರು.

ವಾದ ಮಂಡಿಸಿದ ನೆಟ್‌ಫ್ಲಿಕ್ಸ್‌ ಸರಣಿಯ ಆರಂಭದಿಂದಲೇ ಹೈಜಾಕ್‌ ಕೃತ್ಯದ ಹಿಂದೆ ಐಎಸ್‌ಐ ಇದೆ ಎಂದು ಸ್ಪಷ್ಟಪಡಿಸಲಾಗಿದೆ. ಪ್ರಧಾನಿ ವಾಜಪೇಯಿ ಅವರು ಘಟನೆ ಕುರಿತು ನೀಡಿದ ಮೊದಲ ಹೇಳಿಕೆ ಚಿತ್ರೀಕರಣದ ವೇಳೆ ಎಎನ್‌ಐ ಲೋಗೊ ಕಾಣಿಸಿಕೊಂಡಿದೆ. ಸರಣಿಯಲ್ಲಿ ದೇಶದ ಪೈಲಟ್‌ಗಳು ಹಾಗೂ ಸೇನಾಪಡೆಯನ್ನು ವೈಭವೀಕರಿಸಿ ಚಿತ್ರೀಕರಿಸಲಾಗಿದೆ ಎಂದು ಸಮರ್ಥಿಸಿಕೊಂಡಿತು.

Kannada Bar & Bench
kannada.barandbench.com