ನೆಟ್‌ಫ್ಲಿಕ್ಸ್ ಸರಣಿ ʼತ್ರಿಭುವನ್ ಮಿಶ್ರಾ ಸಿಎ ಟಾಪರ್ʼ ಬಿಡುಗಡೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ .
ಸರಣಿಯ ಟ್ರೇಲರ್ ವೀಕ್ಷಿಸಿದ ನ್ಯಾಯಮೂರ್ತಿ ನವೀನ್ ಚಾವ್ಲಾ ಸರಣಿಯಲ್ಲಿ ಚಾರ್ಟರ್ಡ್ ಅಕೌಂಟೆನ್ಸಿ ವೃತ್ತಿಯ ಯಾವುದೇ ಬಗೆಯ ಉಲ್ಲೇಖವಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದರು. ಹಾಗಾಗಿ ಪ್ರದರ್ಶನದಿಂದ ಮಾನಹಾನಿಯಾಗುತ್ತದೆ ಎಂಬ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ (ಐಸಿಎಐ) ವಾದವನ್ನು ಅವರು ತಿರಸ್ಕರಿಸಿದರು.
ಇದು ಬಹುತೇಕ ಹಾಸ್ಯ ಪ್ರಕಾರದ ಸರಣಿಯಂತೆ ಕಂಡುಬರುತ್ತಿದೆ. ಸರಣಿಯ ಮುಖ್ಯ ಪಾತ್ರ ಚಾರ್ಟರ್ಡ್ ಅಕೌಂಟೆನ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಗಳಿಸಿತ್ತು ಎಂಬುದನ್ನಷ್ಟೇ ವಿವರಿಸುತ್ತದೆ. ಇದು ಚಾರ್ಟರ್ಡ್ ಅಕೌಂಟೆನ್ಸಿ ವೃತ್ತಿಗೆ ಇಲ್ಲವೇ ಐಸಿಎಐ ನಡೆಸಿದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದವರಿಗೆ ಅವಹೇಳನ ಮಾಡಿದೆ ಎಂದು ಗ್ರಹಿಸಲಾಗದು ಎಂಬುದಾಗಿ ನ್ಯಾಯಾಲಯ ನುಡಿದಿದೆ.
ಕಲಾತ್ಮಕ ಅಭಿವ್ಯಕ್ತಿ ವಾಣಿಜ್ಯ ಭಾಷಣದ ರೂಪದಲ್ಲಿದ್ದರೂ ಅದನ್ನು ಅತಿಸಂವೇದನಾಶೀಲತೆಯ ಆಧಾರದ ಮೇಲೆ ಮೊಟಕಗೊಳಿಸಲಾಗದು. ಆದ್ದರಿಂದ ಈ ಹಂತದಲ್ಲಿ ಅರ್ಜಿದಾರರ ಪರವಾಗಿ ತಡೆ ನೀಡುವಂತಹ ಪ್ರಾಥಮಿಕ ವಾದ ಕಂಡುಬರುತ್ತಿಲ್ಲ ಎಂದು ಅದು ವಿವರಿಸಿದೆ.
ನೆಟ್‌ಫ್ಲಿಕ್ಸ್‌ನಲ್ಲಿ ಸರಣಿಯ ಬಿಡುಗಡೆ ವಿರುದ್ಧ ಐಸಿಎಐ ಮತ್ತು ಮೂವರು ಸಿಎ ವೃತ್ತಿಪರರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಂಶಗಳನ್ನು ತಿಳಿಸಿದೆ.
ಚಾರ್ಟರ್ಡ್ ಅಕೌಂಟೆನ್ಸಿ ವೃತ್ತಿಯನ್ನು ಸರಣಿ ಅತ್ಯಂತ ಅಸಭ್ಯ ಮತ್ತು ಅವಹೇಳನಕಾರಿ ಅರ್ಥದಲ್ಲಿ ಚಿತ್ರಿಸುತ್ತದೆ, ಅದು ಕಾನೂನುಬಾಹಿರದೆ ಎಂದು ಅರ್ಜಿದಾರರು ವಾದಿಸಿದ್ದರು.