ಪ್ಯಾರಿಸ್ ಒಲಿಂಪಿಕ್ಸ್‌ನ 50-ಕಿಲೋಗ್ರಾಂ ಮಹಿಳಾ ಕುಸ್ತಿ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ವಿಜೇತೆಯಾಗಿದ್ದ ವಿನೇಶ್ ಪೋಗಟ್ ಅವರು ತಮ್ಮನ್ನು ಬೆಳ್ಳಿ ಪದಕದ ಸಹ ವಿಜೇತೆ ಎಂದು ಘೋಷಿಸಲು ಕೋರಿದ್ದ ಮನವಿಯನ್ನು ತಿರಸ್ಕರಿಸಿದ್ದೇಕೆ ಎನ್ನುವುದನ್ನು ವಿವರಿಸುವ 24 ಪುಟಗಳ ತೀರ್ಪಿನ ಪ್ರತಿಯನ್ನು ಪ್ಯಾರಿಸ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ತನ್ನ ಜಾಲತಾಣದಲ್ಲಿ ಈಚೆಗೆ ಬಿಡುಗಡೆ ಮಾಡಿದೆ.
ತಮ್ಮನ್ನು ಬೆಳ್ಳಿ ಪದಕದ ಸಹ ವಿಜೇತೆ ಎಂದು ಘೋಷಿಸಲು ಕೋರಿ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿದ್ದ ಅರ್ಜಿಯನ್ನು ಸಿಎಎಸ್ ಆಗಸ್ಟ್ 14ರಂದು ವಜಾಗೊಳಿಸಿತ್ತು.
ಪೋಗಟ್ ಅವರು ಮಹಿಳೆಯರ 50 ಕೆಜಿ ಕುಸ್ತಿ ಸ್ಪರ್ಧೆಯ ಫೈನಲ್‌ನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಸುಮಾರು 100 ಗ್ರಾಂ ಹೆಚ್ಚುವರಿ ದೈಹಿಕ ತೂಕ ಇಳಿಸಿಕೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಅವರನ್ನು ಅನರ್ಹಗೊಳಿಸಿ ವಿಶ್ವ ಕುಸ್ತಿ ಒಕ್ಕೂಟ (ಯುಡಬ್ಲ್ಯೂಡಬ್ಲ್ಯೂ) ನಿರ್ಧಾರ ಕೈಗೊಂಡಿತ್ತು. ಈ ಅನರ್ಹತೆ ಪ್ರಶ್ನಿಸಿ ಆಗಸ್ಟ್ 7ರಂದು ಪೋಗಟ್ ಅವರು ಸಿಎಎಸ್ ಮೆಟ್ಟಿಲೇರಿದ್ದರು.
ಇದು ನಿಜವಾಗಿಯೂ ಕಷ್ಟಕರವಾಗಿದ್ದ ಪ್ರಕರಣ ಎಂದು ತಮ್ಮ ಆದೇಶದಲ್ಲಿ ವಿವರಿಸಿರುವ ಏಕ ಮಧ್ಯಸ್ಥಿಕೆದಾರೆ ನ್ಯಾ. ಡಾ. ಅನ್ನಾ ಬೆಲ್ಲೆ ಬೆನೆಟ್, ಪೋಗಟ್ ಎರಡನೇ ಬಾರಿ ತೂಕ ಪರೀಕ್ಷೆಯಲ್ಲಿ ವಿಫಲವಾದ ಪರಿಣಾಮಗಳು "ಕರಾಳವಾಗಿದ್ದವು" ಎಂದು ದಾಖಲಿಸಿದ್ದಾರೆ.
"ಅಥ್ಲೀಟ್ ಅನರ್ಹ ಎಂದು ಕಂಡುಬಂದ ಪರಿಣಾಮವಾಗಿ ಅವರನ್ನು ಆ ಸುತ್ತಿಗೆ ಶ್ರೇಯಾಂಕವಿಲ್ಲದೆ ಹೊರಹಾಕುವುದರ ಜೊತೆಗೇ ಅವರು ಈ ಹಿಂದೆ ಸ್ಪರ್ಧಿಸಿದ ಸುತ್ತುಗಳ ಅರ್ಹತೆಯನ್ನು ಪರಿಗಣಿಸುವುದು ಉತ್ತಮ ಪರಿಹಾರವಾಗಿರುತ್ತಿತ್ತು ಎಂದು ತೋರುತ್ತದೆ. ಆದರೆ, ವಿಶ್ವ ಕುಸ್ತಿ ಒಕ್ಕೂಟದ (ಯುಡಬ್ಲ್ಯೂಡಬ್ಲ್ಯೂ) ನೀತಿಗಳ ರಚನೆ ಅಥವಾ ಸಿಂಧುತ್ವದ ಪ್ರಶ್ನೆ ಮಧ್ಯಸ್ಥಿಕೆದಾರರ ಮುಂದಿಲ್ಲ ಹಾಗೂ ಅಂತಹ ನೀತಿಗೆ ಕಾರಣವಾಗಿರುವ ಅಂಶಗಳು ಅಥವಾ ಪುರಾವೆಗಳು ಸಹ ಸಲ್ಲಿಕೆಯಾಗಿಲ್ಲ" ಎಂದು ತಾವು ಯುಡಬ್ಲ್ಯೂಡಬ್ಲ್ಯೂ ನೀತಿನಿಯಮಗಳ ಮಿತಿಯಲ್ಲಿಯೇ ನ್ಯಾಯ ನಿರ್ಣಯಿಸಬೇಕಾದ ಅಂಶದ ಬಗ್ಗೆ ಮಧ್ಯಸ್ಥಿಕೆದಾರೆ ನ್ಯಾಯಮೂರ್ತಿ ಅನ್ನಾ ಬೆಲ್ಲೆ ಬೆನೆಟ್ ಅವರು ಗಮನಸೆಳೆದಿದ್ದಾರೆ.
ಪೋಗಟ್ ಸ್ಪರ್ಧಿಸಲು ಅನುವು ಮಾಡಿಕೊಡದ ನಿಯಮಾವಳಿ ಅನ್ಯಾಯುತವಾದುದು ಮತ್ತು ಕಠಿಣತಮವಾದುದು ಎಂದು ಅವರು ಇದೇ ವೇಳೆ ದಾಖಲಿಸಿದ್ದಾರೆ.
ಪೋಗಟ್ ಅವರನ್ನು ಪ್ರತಿನಿಧಿಸಿದ್ದ ವಕೀಲರಾದ ಹ್ಯಾಬಿನ್ ಎಸ್ಟೆಲ್ಲೆ ಕಿಮ್, ಜೊಯೆಲ್ಲೆ ಮೊನ್ಲೂಯಿಸ್, ಎಸ್ಟೆಲ್ಲೆ ಇವನೊವಾ ಮತ್ತು ಚಾರ್ಲ್ಸ್ ಆಮ್ಸನ್ ನಿಯಮವು ಅನ್ಯಾಯವಾಗಿದೆ ಮತ್ತು ವಿಪರೀತ ಕಠಿಣವಾಗಿದೆ ಎಂದು ವಾದಿಸಿದ್ದರು.
ಭಾರತೀಯ ಒಲಿಂಪಿಕ್ ಸಂಸ್ಥೆಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತವರ ತಂಡ ಆ ದಿನ ಎರಡನೇ ತೂಕದ ಫಲಿತಾಂಶ ಅನರ್ಹತೆಗೆ ಕಾರಣವಾದರೆ, ಸ್ಪರ್ಧೆಯಿಂದ ಹೊರಹಾಕುವಿಕೆ ಮತ್ತು ಕೊನೆಯ ಶ್ರೇಯಾಂಕವು ನಂತರದ ಘಟನೆಗಳಿಗೆ ಮಾತ್ರ ಅನ್ವಯಿಸಬೇಕೇ ವಿನಾ, ಈಗಾಗಲೇ ನಡೆದ ಘಟನೆಗಳಿಗೆ ಅಲ್ಲ ಎಂದಿತು.
ವಾದದ ಒಂದು ಹಂತದಲ್ಲಿ ಮಧ್ಯಸ್ಥಿಕೆದಾರೆ ಅವರು “ಊಟ, ಪಾನೀಯ ಮತ್ತು ಋತುಚಕ್ರ ಇವೆಲ್ಲವೂ ಹೆಚ್ಚು ಅನುಭವ ಇರುವ ಕ್ರೀಡಾಪಟುಗಳು ಸಹಜವಾಗಿ ಗಣನೆಗೆ ತೆಗೆದುಕೊಳ್ಳಬೇಕಾದ ಅಂಶಗಳು” ಎಂದರು.
ಅರ್ಜಿದಾರರು ತಮ್ಮ ತೂಕದ ವರ್ಗದ ಗರಿಷ್ಠ ಮಿತಿಯಲ್ಲಿದ್ದರು ಎಂಬುದು ಮೊದಲ ತೂಕ ಪರೀಕ್ಷೆಯಲ್ಲಿ ಸ್ಪಷ್ಟವಾಗಿತ್ತು. ಆಕೆ ತನ್ನ ತೂಕದ ಬಗ್ಗೆ ಅತಿ ಜಾಗರೂಕರಾಗಿರಬೇಕಾದದ್ದು ಆಕೆಯ ಕರ್ತವ್ಯವಾಗಿತ್ತು ಎಂದು ಅವರು ಹೇಳಿದ್ದಾರೆ.
50 ಕೆಜಿ ನಿರ್ಬಂಧ ಪಾಲಿಸಿದ್ದರೆ ತನ್ನ ದೈಹಿಕ ಸಮಗ್ರತೆಯನ್ನು ದುರ್ಬಲಗೊಳಿಸುತ್ತದೆ ಎಂಬ ಪೋಗಟ್ ವಾದಕ್ಕೆ ಪ್ರತಿಕ್ರಿಯಿಸಿರುವ ಮಧ್ಯಸ್ಥಿಕೆದಾರೆ ಇದು ಅರ್ಜಿದಾರೆ ಮುಕ್ತವಾಗಿ ಆಯ್ದುಕೊಂಡ ವರ್ಗವಾಗಿತ್ತು. ಇದಕ್ಕೂ ಹೆಚ್ಚಿನ ತೂಕದ ಮಿತಿ ಇದ್ದ ವರ್ಗ 2 ಅನ್ನು ಆಕೆ ಆಯ್ಕೆ ಮಾಡಿಕೊಳ್ಳಬಹುದಿತ್ತು. ಅವರು 50 ಕೆಜಿ ವಿಭಾಗವನ್ನು ಆಯ್ಕೆ ಮಾಡಿಕೊಂಡು ಆ ತೂಕದ ಮಿತಿಯ ವಿಭಾಗದಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಿದ್ದರು ಎಂದು ಹೇಳಿದ್ದಾರೆ.