ಪತ್ರಕರ್ತ, ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರಿಗೆ ದೆಹಲಿ ನ್ಯಾಯಾಲಯ ಶನಿವಾರ ಜಾಮೀನು ನಿರಾಕರಿಸಿದೆ. ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ, 2010ರ ಅಡಿಯಲ್ಲಿ ಪೊಲೀಸರು ಆರೋಪ ಮಾಡಿರುವುದು ಜುಬೈರ್ ಜಾಮೀನು ಅರ್ಜಿ ವಜಾಗೊಳಿಸುವ ಕಾರಣಗಳಲ್ಲಿ ಒಂದಾಗಿದೆ.
“ಜುಬೈರ್ ಅವರ 2018ರ ಟ್ವೀಟ್ ಮೂಲ ಹಿಂದಿ ಚಲನಚಿತ್ರ ಕಿಸ್ ಸೆ ನಾ ಕೆಹನಾ. ಆದ್ದರಿಂದ 153 ಎ ಅಥವಾ 295 ಎ ಅಡಿಯಲ್ಲಿ ಯಾವುದೇ ಅಪರಾಧ ನಡೆದಿಲ್ಲ ಎಂದಿದ್ದರೂ ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆಯ ಸೆಕ್ಷನ್ 35ರಡಿ ಕೂಡ ಆರೋಪ ಮಾಡಿರುವುದು ಮತ್ತು ತನಿಖೆ ಬಾಕಿ ಇರುವುದು ಆರೋಪಿಯ ನೆರವಿಗೆ ಬರುತ್ತಿಲ್ಲ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನ್ಯಾಯಾಲಯ ನೀಡಿರುವ ಕೆಲ ಕಾರಣಗಳು ಹೀಗಿವೆ:
ಆರೋಪಿ (ಜುಬೈರ್) ತನಿಖೆಗೆ ಸಹಕರಿಸದ ಕಾರಣ ಸೆಕ್ಷನ್ 41 ಎ ಅಡಿ ನೀಡಲಾದ ನೋಟಿಸ್ ದೋಷಯುಕ್ತವಲ್ಲ.
ಆರೋಪಿಯ ಮೊಬೈಲ್ ಕಳೆದುಹೋಗಿರುವ ಬಗ್ಗೆ ಪುರಾವೆಗಳು ದೊರೆತಿಲ್ಲ.
(ಹಾರ್ಡ್ ಡಿಸ್ಕ್‌ಗಳನ್ನು ತಿರುಚಲಾಗಿದೆ ಎಂಬ ಆಪಾದನೆ ಕುರಿತಂತೆ) ವಶಪಡಿಸಿಕೊಂಡ ಡೇಟಾ ಮತ್ತು ಎಲೆಕ್ಟ್ರಾನಿಕ್ ಸಾಧನಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿರುವುದರಿಂದ ಈಗ ತೀರ್ಮಾನಕ್ಕೆ ಬರುವುದು ಸರಿಯಲ್ಲ.
ಸಿನಿಮಾದ ಸ್ಕ್ರೀನ್‌ಶಾಟ್ ಬಳಸಿಕೊಳ್ಳಲಾಗಿದೆ ಎಂದು ಆರೋಪಿಗಳ ಪರ ವಕೀಲರು ಹೇಳುತ್ತಿದ್ದರೂ ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ ಅಡಿ ಪ್ರಕರಣ ದಾಖಲಿಸಿರುವುದರಿಂದ ಇದು ಆರೋಪಿಗೆ ನೆರವು ನೀಡದು.
ಇಲ್ಲದೇ ಹೋದರೂ ತನಿಖೆ ಆರಂಭಿಕ ಹಂತದಲ್ಲಿರುವುದರಿಂದ ನ್ಯಾಯಾಲಯ ಯಾವ ಸೆಕ್ಷನ್‌ಗಳನ್ನು ಅನ್ವಯಿಸಲಾಗಿದೆ ಅನ್ವಯಿಸಿಲ್ಲ ಎಂದು ಆದೇಶ ನೀಡಲಾಗದು.
ದೆಹಲಿ ಪೊಲೀಸರ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಅತುಲ್ ಶ್ರೀವಾಸ್ತವ, ಜುಬೈರ್ ಪರವಾಗಿ ವಕೀಲೆ ವೃಂದಾ ಗ್ರೋವರ್ ವಾದ ಮಂಡಿಸಿದ್ದರು.