
ʼಹಾರ್ನ್ ಓಕೆ ಪ್ಲೀಸ್ʼ ಚಿತ್ರದ ಚಿತ್ರೀಕರಣ ವೇಳೆ ಹಿರಿಯ ನಟ ನಾನಾ ಪಾಟೇಕರ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರಿ ನಟಿ ತನುಶ್ರೀ ದತ್ತಾ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಮುಂಬೈ ನ್ಯಾಯಾಲಯ ಶುಕ್ರವಾರ ನಿರಾಕರಿಸಿದೆ.
ಕಾಲಮಿತಿ ಕಾನೂನು ನಿಗದಿಪಡಿಸಿದ ಗಡುವನ್ನು ದೂರು ಮೀರಿದೆ ಎಂದು ಅಂಧೇರಿಯಲ್ಲಿರುವ ರೈಲ್ವೆ ನ್ಯಾಯಾಲಯ ಸಂಕೀರ್ಣದ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಎನ್ ವಿ ಬನ್ಸಾಲ್ ತಿಳಿಸಿದರು.
ಮಾರ್ಚ್ 23 2008ರಲ್ಲಿ ನಡೆದಿದೆ ಎನ್ನಲಾದ ಘಟನೆಗೆ ಸಂಬಂಧಿಸಿದ ಅಪರಾಧವು ಕಾಲಮಿತಿಯೊಳಗೆ ಬರುವುದಿಲ್ಲ. ಹೀಗಾಗಿ ದೂರನ್ನು ವಿಚಾರಣೆಗೆ ಪರಿಗಣಿಸಲು ನ್ಯಾಯಾಲಯಕ್ಕೆ ನಿರ್ಬಂಧವಿದೆ. ಕಾಲಮಿತಿ ಕಾಯಿದೆಯ ಗುಡುವಿನ ಏಳು ವರ್ಷಗಳ ಅವಧಿ ಮೀರಿದ ನಂತರವೂ ಪ್ರಕರಣವನ್ನು ಏಕೆ ಪರಿಗಣಿಸಬೇಕು ಎನ್ನುವುದಕ್ಕೆ ನನ್ನ ಮುಂದೆ ಸಕಾರಣವಿಲ್ಲ. ಇದಲ್ಲದೆ ಪ್ರಸ್ತಾಪಿತ ಆರೋಪಿಯ ವಿಚಾರಣೆಗೆ ಅವಕಾಶ ನೀಡಲಾಗಿಲ್ಲ ಎನ್ನುವ ಆಧಾರದಲ್ಲಿ ನ್ಯಾಯದಾನದ ಹಿತದೃಷ್ಟಿಯಿಂದ ಅಸಾಧಾರಣ ವಿವೇಚನಾಧಿಕಾರ ಚಲಾಯಿಸಿ ವಿಳಂಬ ಮನ್ನಿಸಲು ಸಹ ಯಾವುದೇ ಸಕಾರಣವಿಲ್ಲ ಎಂದು ನ್ಯಾಯಾಲಯ ವಿವರಿಸಿದೆ.
'ಹಾರ್ನ್ ಓಕೆ ಪ್ಲೀಸ್' ಚಿತ್ರದ ಹಾಡಿನ ಚಿತ್ರೀಕರಣ 2008ರಲ್ಲಿ ನಡೆದ ವೇಳೆ ಪಾಟೇಕರ್ ಕಿರುಕುಳ ನೀಡಿದ್ದಾರೆ ಎಂದು ತನುಶ್ರೀ 2018ರ ಅಕ್ಟೋಬರ್‌ನಲ್ಲಿ ದೂರು ದಾಖಲಿಸಿದ್ದರು. ಆಕೆಯ ಆರೋಪ ಭಾರತದಲ್ಲಿ ಮೀಟೂ ಚಳುವಳಿಗೆ ತಿದಿಯೊತ್ತಿತ್ತು. ತಾನು ಅಶ್ಲೀಲ ಅಥವಾ ಅಹಿತಕರ ರೀತಿಯಲ್ಲಿ ನರ್ತಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ ನಂತರವೂ ಪಾಟೇಕರ್ ತನ್ನನ್ನು ಅನುಚಿತ ರೀತಿಯಲ್ಲಿ ಸ್ಪರ್ಶಿಸಿದ್ದಾರೆ ಎಂದು ಅವರು ಆರೋಪಿಸಿದ್ದರು. ಪಾಟೇಕರ್ ಜೊತೆಗೆ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ, ನಿರ್ಮಾಪಕ ಸಮೀ ಸಿದ್ದಿಕಿ ಮತ್ತು ನಿರ್ದೇಶಕ ರಾಕೇಶ್ ಸಾರಂಗ್ ಅವರನ್ನೂ ದೂರಿನಲ್ಲಿ ಹೆಸರಿಸಿದ್ದರು.
ಮುಂಬೈ ಪೊಲೀಸರು 2019ರಲ್ಲಿ ಪ್ರಕರಣ ಮುಕ್ತಾಯಗೊಳಿಸುವಂತೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಪಾಟೇಕರ್ ಮತ್ತು ಇತರ ಆರೋಪಿಗಳಾದ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ, ನಿರ್ಮಾಪಕ ಸಮೀ ಸಿದ್ದಿಕಿ ಮತ್ತು ನಿರ್ದೇಶಕ ರಾಕೇಶ್ ಸಾರಂಗ್ ವಿರುದ್ಧದ ಆರೋಪಗಳಿಗೆ ಸೂಕ್ತ ಪುರಾವೆಗಳಿಲ್ಲ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ದತ್ತಾ ಡಿಸೆಂಬರ್ 2019 ರಲ್ಲಿ ಪ್ರತಿಭಟನಾ ಅರ್ಜಿ ಸಲ್ಲಿಸಿ, ಆರೋಪಿಗಳ ವಿರುದ್ಧ ಹೆಚ್ಚಿನ ತನಿಖೆ ಮತ್ತು ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಬಳಿಕ ಪ್ರಸ್ತುತ ತೀರ್ಪು ಪ್ರಕಟವಾಗಿದೆ.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 468 ರ ಅಡಿಯಲ್ಲಿ ಕೆಲವು ಅಪರಾಧಗಳನ್ನು ವಿಚಾರಣೆಗೆ ಒಳಪಡಿಸಲು ನಿರ್ದಿಷ್ಟ ಕಾಲಮಿತಿ ವಿಧಿಸುವ ಮಿತಿ ಕಾಯಿದೆಯನ್ನು ಉಲ್ಲೇಖಿಸಿದ ನ್ಯಾ. ಬನ್ಸಾಲ್ ಪ್ರಕರಣ ಕಾಲಮಿತಿ ಮೀರಿದೆ ಎಂದಿದ್ದಾರೆ.