ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಕಡ್ಡಾಯ ಬಳಕೆ ಮಾಡದ ವಾಣಿಜ್ಯ ಸಂಸ್ಥೆಗಳು, ಅಂಗಡಿ-ಮುಂಗಟ್ಟುಗಳನ್ನು ಮುಚ್ಚಬಾರದು ಎಂದು ರಾಜ್ಯ ಸರ್ಕಾರಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದ್ದು, ನಾಮಫಲಕದಲ್ಲಿ ಎರಡು ಕನ್ನಡ ಪದ ಬಳಕೆ ಮಾಡಿದರೆ ಏನಾಗಲಿದೆ ಎಂದು ಅರ್ಜಿದಾರರನ್ನು ಮೌಖಿಕವಾಗಿ ಪ್ರಶ್ನಿಸಿದೆ.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ -2024 ಹಾಗೂ ಫೆಬ್ರವರಿ 28ರಂದು ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆ ಪ್ರಶ್ನಿಸಿ ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘ ಸೇರಿದಂತೆ ಒಟ್ಟು ಎಂಟು ಕಂಪನಿಗಳು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
"ಸುತ್ತೋಲೆಯ ಅನುಸಾರ ವಾಣಿಜ್ಯ ಸಂಸ್ಥೆಗಳ ವಿರುದ್ಧ ಸದ್ಯಕ್ಕೆ ಬಲವಂತದ ಕ್ರಮ ಜರುಗಿಸಬಾರದು. ಅಂತೆಯೇ, ಕಾಯಿದೆ ಯಾವ ದಿನದಿಂದ ಜಾರಿಗೆ ಬಂದಿದೆ? ಯಾವ ದಿನ ಸರ್ಕಾರದ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಅಧಿಸೂಚನೆಗೊಂಡು ಪ್ರಕಟವಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಕುರಿತ ದಾಖಲೆಗಳನ್ನು ಒದಗಿಸಿ" ಎಂದು ಅಡ್ವೊಕೇಟ್ ಜನರಲ್ ಕೆ ಶಶಿಕಿರಣ ಶೆಟ್ಟಿ ಅವರಿಗೆ ಸೂಚಿಸಿದ ಪೀಠವು ವಿಚಾರಣೆಯನ್ನು ಮಾರ್ಚ್ 22ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಪೀಠವು "ನಾಮಫಲಕದಲ್ಲಿ ಎರಡು ಸಾಲು ಕನ್ನಡ ಇದ್ದರೆ ಏನಾಗುತ್ತದೆ? ಕಾಯಿದೆಯನ್ನು ನಾವು ಪರಿಗಣಿಸುತ್ತೇವೆ. ಉದ್ಯಮ ಮುಚ್ಚುವುದಕ್ಕೆ ನಮ್ಮ ಸಹಮತ ಇಲ್ಲ. ಕರ್ನಾಟಕದಲ್ಲಿ ವ್ಯಾಪಾರ ಮಾಡುವಾಗ ಕನ್ನಡ ನಾಮಫಲಕವಿರಬೇಕು. ಶೇ 60ರಷ್ಟು ಕನ್ನಡ ನಾಮಫಲಕ ಹಾಕಿದರೆ ಸಮಸ್ಯೆ ಏನು" ಎಂದು ವಾಣಿಜ್ಯ ಮಳಿಗೆಗಳ ಸಂಘದ ಪರ ವಕೀಲ ಮನು ಕುಲಕರ್ಣಿ ಅವರನ್ನು ಮೌಖಿಕವಾಗಿ ಪ್ರಶ್ನಿಸಿತು.
ಅಲ್ಲದೇ, “ನಿಮ್ಮ (ಅರ್ಜಿದಾರರ) ಉದ್ಯೋಗಿಗಳು ಕನ್ನಡಿಗರೇ ಆಗಿರಬೇಕು ಎಂದು ಸರ್ಕಾರ ಹೇಳುತ್ತಿಲ್ಲ. ಇಂಗ್ಲಿಷ್ ಬಿಂಬಿಸುವಷ್ಟೇ ನಾಮಫಲಕದಲ್ಲಿ ಕನ್ನಡ ಬಿಂಬಿಸಿ ಎನ್ನುತ್ತಿದೆ” ಎಂದರು.
ಇದಕ್ಕೆ ಮನು ಕುಲಕರ್ಣಿ ಅವರು “ಎಲ್ಲಾ ಬಗೆಯ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಕಡ್ಡಾಯಗೊಳಿಸುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ ಜಾರಿ ಸಮರ್ಪಕವಾಗಿಲ್ಲ. ಜಾರಿ ದಿನಾಂಕದ ಬಗ್ಗೆ ಗೆಜೆಟ್ ಅಧಿಸೂಚನೆಯನ್ನೇ ಹೊರಡಿಸಿಲ್ಲ. ಅಂತೆಯೇ, ಡಿಜಿಟಲ್ ನಾಮಫಲಕಗಳನ್ನು ಬದಲಿಸಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ” ಎಂದರು.
“ಸರ್ಕಾರ ಮತ್ತು ಬಿಬಿಎಂಪಿ ಸ್ವಲ್ಪ ಸಮಯಾವಕಾಶ ನೀಡಿದೆಯಾದರೂ ಅದು ಸಾಕಾಗುತ್ತಿಲ್ಲ. ಒಂದೇ ಬಾರಿಗೆ ಎಲ್ಲಾ ವಾಣಿಜ್ಯ ಸಂಸ್ಥೆಗಳು ಫಲಕ ಬದಲಾವಣೆಗೆ ಮುಂದಾಗಿರುವುದರಿಂದ ನಾಮಫಲಕಗಳು ಸಕಾಲದಲ್ಲಿ ಲಭ್ಯವಾಗುತ್ತಿಲ್ಲ. ಆದರೆ, ಸರ್ಕಾರ ಮತ್ತು ಬಿಬಿಎಂಪಿ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಇಲ್ಲದಿದ್ದರೆ ವಾಣಿಜ್ಯ ಸಂಸ್ಥೆಗಳನ್ನು ಮುಚ್ಚಲು ಮುಂದಾಗುತ್ತಿದೆ. ವ್ಯಾಪಾರಿಗಳ ವಿರುದ್ಧ ಇದೊಂದು ಉಗ್ರ ಕ್ರಮವಾಗಿದೆ. ಇದರಿಂದ ವಾಣಿಜ್ಯ ಸಂಸ್ಥೆಗಳ ವ್ಯಾಪಾರ, ವಹಿವಾಟಿಗೆ ತೊಂದರೆಯಾಗುತ್ತಿದೆ” ಎಂದು ಪೀಠಕ್ಕೆ ವಿವರಿಸಿದರು.
ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಎಜಿ ಶೆಟ್ಟಿ ಅವರು “ಬೋರ್ಡ್‌ಗಳಲ್ಲಿ ಶೇ 60ರಷ್ಟು ಕನ್ನಡ ಬಳಕೆ ಮಾಡುವ ಉದ್ದೇಶದಿಂದ ಕಾಯಿದೆ ರೂಪಿಸಲಾಗಿದೆ. ಕಾಯಿದೆ ಸಿಂಧುತ್ವ ಪ್ರಶ್ನಿಸಿರುವುದರಿಂದ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಅರ್ಜಿದಾರರ ಮನವಿ ಏನು?: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ -2024ಯ ಸೆಕ್ಷನ್ 17(6), 23 ಮತ್ತು 27ನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು. ಏಕೆಂದರೆ ಅವು ಟ್ರೇಡ್‌ಮಾರ್ಕ್ಸ್ ಕಾಯಿದೆಯನ್ನು ಉಲ್ಲಂಘಿಸುತ್ತವೆ. ಆಕ್ಷೇಪಾರ್ಹವಾದ ಸೆಕ್ಷನ್‌ಗಳನ್ನು ಜಾರಿಗೊಳಿಸಿದಂತೆ ರಾಜ್ಯ ಸರ್ಕಾರ, ಬಿಬಿಎಂಪಿ ಮತ್ತು ಬಿಬಿಎಂಪಿಯ ವಿಶೇಷ ಆಯುಕ್ತರಿಗೆ (ಆರೋಗ್ಯ) ನಿರ್ದೇಶಿಸಬೇಕು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯಿದೆ 2020ಗೆ ವಿರುದ್ಧವಾಗಿ ಅಧಿಕಾರ ಹೊಂದಿರದ ಬಿಬಿಎಂಪಿಯ ವಿಶೇಷ ಆಯುಕ್ತರು 2024ರ ಫೆಬ್ರವರಿ 28ರಂದು ಹೊರಡಿಸಿರುವ ಸುತ್ತೋಲೆಯನ್ನು ಬದಿಗೆ ಸರಿಸಬೇಕು. ಏಕೆಂದರೆ ಇದು ಅರ್ಜಿದಾರರ ಮೂಲಭೂತ ಹಕ್ಕುಗಳು ಹಾಗೂ ಟ್ರೇಡ್‌ಮಾರ್ಕ್ಸ್ ಕಾಯಿದೆಗೆ ವಿರುದ್ಧವಾಗಿದ್ದು, ಅಸಾಂವಿಧಾನಿಕ ಎಂದು ವಾದಿಸಲಾಗಿದೆ.
ಕಾಯಿದೆಯ ಸೆಕ್ಷನ್ 17(6), 23 ಮತ್ತು 27ರ ಅಡಿ ನೋಟಿಸ್ ಜಾರಿ ಮಾಡುವುದು, ದಂಡ ವಿಧಿಸುವುದನ್ನು ನಿರ್ಬಂಧಿಸಿ ಮಧ್ಯಂತರ ಆದೇಶ ಮಾಡುವಂತೆ ಅರ್ಜಿದಾರರು ಕೋರಿದ್ದಾರೆ.