ಮನವಿಗಳ ಗುಣಮಟ್ಟ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ, ಸಂಶೋಧನೆ, ಸೃಜನಾತ್ಮಕ ವಾದ ಇಲ್ಲ: ಹೈಕೋರ್ಟ್‌ ಅತೃಪ್ತಿ

“ಕೋರಿಕೆಗಳಲ್ಲಿ ಗುಣಮಟ್ಟ ಇಲ್ಲದಿರುವುದರಿಂದ ಪ್ರಕರಣಗಳ ಕುರಿತು ವಕೀಲರ ವಾದವು ಪರಿಣಾಮಕಾರಿಯಾಗಿಲ್ಲ. ಇದನ್ನು ಹಿರಿಯ ವಕೀಲರು ಸುಧಾರಿಸಲಾಗದು. ಏಕೆಂದರೆ ಅವರಿಗೆ ಬ್ರೀಫಿಂಗ್‌ ಅಷ್ಟೇ ಮಾಡಲಾಗಿರುತ್ತದೆ” ಎಂದ ಪೀಠ.
Justice Krishna S Dixit and Karnataka HC
Justice Krishna S Dixit and Karnataka HC
Published on

ವಕೀಲರು ನ್ಯಾಯಾಲಯಕ್ಕೆ ಸಲ್ಲಿಸುವ ಅರ್ಜಿಯಲ್ಲಿನ ಮನವಿ ಅಥವಾ ಕೋರಿಕೆಗಳಲ್ಲಿ (ಪ್ಲೀಡಿಂಗ್ಸ್‌) ಗುಣಮಟ್ಟ ಕುಸಿಯುತ್ತಿರುವುದರ ಬಗ್ಗೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿದೆ.

ಬ್ಯಾಂಕ್‌ ಆಫ್‌ ಬರೋಡ ಮತ್ತು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗಳು ಇಮಿಗ್ರೇಷನ್‌ ಅಧಿಕಾರಿಗಳಿಗೆ ಪತ್ರ ಬರೆದು ಎಲ್‌ಒಸಿ ಹಿಂಪಡೆಯಲು ಅಥವಾ ಎಲ್‌ಒಸಿ ಉಪೇಕ್ಷಿಸಿ ಅರ್ಜಿದಾರರು ಪ್ರವಾಸ ಕೈಗೊಳ್ಳಲು ಇಮಿಗ್ರೇಷನ್‌ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ಮಂಗಳೂರಿನ ಉದ್ಯಮಿ ಬಿ ಆರ್‌ ಶೆಟ್ಟಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರು ಅರ್ಜಿಯಲ್ಲಿನ ಕೋರಿಕೆಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.

“ಕೆಲವು ವಕೀಲರನ್ನು ಹೊರತುಪಡಿಸಿ ಅರ್ಜಿಯಲ್ಲಿನ ಕೋರಿಕೆಯ ಗುಣಮಟ್ಟ ಅತ್ಯಂತ ಕೆಟ್ಟ ಮಟ್ಟಕ್ಕೆ ಇಳಿದಿದೆ. ಸಂಶೋಧನೆ ಎಲ್ಲಿದೆ? ಸೃಜನಾತ್ಮಕ ವಾದ ಎಲ್ಲಿದೆ?” ಎಂದು ಅವರು ಪ್ರಶ್ನಿಸಿದರು.

“ಕೋರಿಕೆಗಳಲ್ಲಿ ಗುಣಮಟ್ಟ ಇಲ್ಲದಿರುವುದರಿಂದ ಪ್ರಕರಣಗಳ ಕುರಿತು ವಕೀಲರ ವಾದವು ಪರಿಣಾಮಕಾರಿಯಾಗಿಲ್ಲ. ಇದನ್ನು ಹಿರಿಯ ವಕೀಲರು ಸುಧಾರಿಸಲಾಗದು. ಏಕೆಂದರೆ ಅವರಿಗೆ ಬ್ರೀಫಿಂಗ್‌ ಅಷ್ಟೇ ಮಾಡಲಾಗಿರುತ್ತದೆ” ಎಂದು ಹಿರಿಯ ವಕೀಲ ಬಿ ವಿ ಆಚಾರ್ಯ ಅವರನ್ನು ಕುರಿತು ಪೀಠ ಹೇಳಿತು.

“ನಾನು ಪದೇಪದೇ ಕೋರಿಕೆಗಳ ಬಗ್ಗೆ ಈ ವಿಷಯ ಹೇಳುತ್ತಿರುತ್ತೇನೆ. ಇದನ್ನು ನನಗೆ ತಡೆದುಕೊಳ್ಳಲಾಗುವುದಿಲ್ಲ” ಎಂದು ನ್ಯಾ. ದೀಕ್ಷಿತ್‌ ಹೇಳಿದರು.

“ಪ್ರತಿವಾದಿ ಬ್ಯಾಂಕ್‌ಗಳನ್ನು ಪ್ರತಿನಿಧಿಸಿದ್ದ ವಕೀಲ ಮನು ಕುಲಕರ್ಣಿ ಅವರ ಪ್ಲೀಡಿಂಗ್‌ ಬಗ್ಗೆ ಖುಷಿಯಿದೆ. ಒಂದೆರಡು ತೀರ್ಪುಗಳಲ್ಲಿ ನಾನು ಅವರಿಗೆ ಮೆಚ್ಚುಗೆ ಸೂಚಿಸಿದ್ದೇನೆ. ಪ್ಲೀಡಿಂಗ್‌ ಸರಿಯಾಗಿ ಮಾಡಲಿಲ್ಲವಾದರೆ ಜನರನ್ನು ಹೇಗೆ ರಕ್ಷಿಸುತ್ತೀರಿ. ಬಾರ್‌ನ ಗುಣಮಟ್ಟ ಸುಧಾರಿಸಬೇಕು. ಒಂದು ಕಡೆ ನಾವು ಜನರ ಮೂಲಭೂತ ಹಕ್ಕುಗಳ ರಕ್ಷಕರು. ಇನ್ನೊಂದು ಕಡೆ ನಾವು ಪ್ಲೀಂಡಿಂಗ್‌ನ ಮಿತಿಗೆ ಒಳಪಟ್ಟಿರುತ್ತೇವೆ. ಅಲ್ಲಿ ಸಂಘರ್ಷ ಇದೆ. ಜನರ ಸಾಂವಿಧಾನಿಕ ಹಕ್ಕುಗಳ ರಕ್ಷಕನಾದ ನ್ಯಾಯಾಲಯವು ಎಲ್ಲಾ ಪ್ರಯತ್ನ ಮಾಡಬೇಕು” ಎಂದರು.

Kannada Bar & Bench
kannada.barandbench.com