ದೇಶದಲ್ಲಿ ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಣಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಮುಂದೂಡಿದೆ [ಹೃಷಿಕೇಶ್ ಸಾಹೂ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಎರಡೂ ಕಡೆಯ ವಕೀಲರು ಪ್ರಕರಣದಲ್ಲಿ ಮಾಡಬೇಕಾದ ವಾದಗಳ ಕಾಲಮಿತಿ ತಿಳಿಸಿದ ನಂತರ ಸಿಜೆಐ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಪ್ರಕರಣ ಮುಂದೂಡಿತು.
ವಕೀಲರು ತಮ್ಮ ವಾದ ಮಂಡನೆಗೆ ಒಂದು ದಿನ ಕಾಲಾವಕಾಶಬೇಕು ಬೇಕು ಎಂದರು. ನವೆಂಬರ್ 10 ರಂದು ಸಿಜೆಐ ಚಂದ್ರಚೂಡ್ ನಿವೃತ್ತರಾಗಲಿದ್ದು ಅದಕ್ಕೂ ಮೊದಲು ತೀರ್ಪು ನೀಡಲಾಗದು. ನಾಲ್ಕು ವಾರಗಳ ನಂತರ ಹೊಸ ಪೀಠ ಪ್ರಕರಣದ ವಿಚಾರಣೆ ನಡೆಸಲಿದೆ ಎಂದು ನ್ಯಾಯಾಲಯ ತಿಳಿಸಿತು.
ಹಿರಿಯ ವಕೀಲ ಶಂಕರನಾರಾಯಣನ್ ಮತ್ತು ಎಸ್‌ಜಿ ತುಷಾರ್ ಮೆಹ್ತಾ ಅವರು ತಲಾ ಒಂದು ದಿನ ಕಾಲಾವಕಾಶಬೇಕು ಎಂದು ಕೇಳಿದರು. ಉಳಿದ ವಕೀಲರೂ ಹೀಗೆಯೇ ಕಾಲಾವಕಾಶ ಕೇಳುತ್ತಿರುವುದರಿಂದ ಪ್ರಕರಣ ಮುಂದೂಡಬೇಕಾಗುತ್ತದೆ ಎಂದು ಸಿಜೆಐ ಚಂದ್ರಚೂಡ್ ತಿಳಿಸಿದರು.
ಪ್ರಕರಣ ಮುಂದೂಡುವ ನಿರ್ಧಾರ ಪ್ರಕಟಿಸಿದ ಬಳಿಕ ಹಿರಿಯ ವಕೀಲೆ ಕರುಣಾ ನಂದಿ ಅವರು ಪ್ರಕರಣ ಆಲಿಸುವಂತೆ ಸಿಜೆಐ ಚಂದ್ರಚೂಡ್ ಅವರ ಮನವೊಲಿಸಲು ಯತ್ನಿಸಿದರು. ಲಕ್ಷಾಂತರ ಮಹಿಳೆಯರಿಗಾಗಿ ತಾವೇ ಪ್ರಕರಣ ಆಲಿಸಬೇಕು ಎಂದರು. ಆಗ ಎಸ್‌ಜಿ ಮೆಹ್ತಾ ಈ ರೀತಿಯ ವಾದ ಮಂಡನೆ ಸೂಕ್ತವಲ್ಲ ಎಂದು ಆಕ್ಷೇಪಿಸಿದರು.
ಐಪಿಸಿ ಸೆಕ್ಷನ್ 375ಕ್ಕೆ ವಿನಾಯಿತಿ 2ರ ಮೂಲಕ ವೈವಾಹಿಕ ಅತ್ಯಾಚಾರವನ್ನು ಅತ್ಯಾಚಾರದ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಜುಲೈ 1ರಿಂದ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆಯಲ್ಲಿಯೂ (ಬಿಎನ್‌ಎಸ್) ಇದೇ ಅಂಶಗಳಿವೆ.
ಅಕ್ಟೋಬರ್ 17 ರಂದು ನ್ಯಾಯಾಲಯ ಪ್ರಕರಣದ ವಾದ ಆಲಿಸಲು ಆರಂಭಿಸಿತ್ತು.
ಐಪಿಸಿ ಸೆಕ್ಷನ್ 375ಕ್ಕೆ ವಿನಾಯಿತಿ 2ರ ಮೂಲಕ ವೈವಾಹಿಕ ಅತ್ಯಾಚಾರವನ್ನು ಅತ್ಯಾಚಾರದ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಜುಲೈ 1ರಿಂದ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆಯಲ್ಲಿಯೂ (ಬಿಎನ್‌ಎಸ್) ಇದೇ ಅಂಶಗಳಿವೆ.
ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಣಗೊಳಿಸುವಂತೆ ಒತ್ತಾಯಿಸಿ ಸಲ್ಲಿಸಲಾದ ಅರ್ಜಿಗಳಿಗೆ ಪ್ರತಿಕ್ರಿಯೆ ನೀಡಿದ್ದ, ಕೇಂದ್ರ ಸರ್ಕಾರ ಮದುವೆಯಾದ ಮಹಿಳೆಯರಿಗೆ ಕಾನೂನಿನ ಅಭಯವಿದೆ. ವೈವಾಹಿಕ ಅತ್ಯಾಚಾರದ ವಿಷಯವು ಕಾನೂನಿಗಿಂತಲೂ ಹೆಚ್ಚಾಗಿ ಸಾಮಾಜಿಕ ವ್ಯಾಪ್ತಿಗೆ ಬರುತ್ತದೆ ಎಂದು ಈ ಹಿಂದಿನ ವಿಚಾರಣೆ ವೇಳೆ ತಿಳಿಸಿತ್ತು.
ವೈವಾಹಿಕ ಅತ್ಯಾಚಾರ ಅಪರಾಧೀಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ 2022ರಲ್ಲಿ, ಭಿನ್ನ ತೀರ್ಪು ನೀಡಿತ್ತು. ಪ್ರಕರಣ ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಅಂಗಳ ತಲುಪಿತ್ತು.