ಅಪಘಾತದ ವೇಳೆ ನಗದು ರಹಿತ ಚಿಕಿತ್ಸೆ ಜಾರಿಗೆ ವಿಳಂಬ: ಸುಪ್ರೀಂನಿಂದ ಕೇಂದ್ರಕ್ಕೆ ನ್ಯಾಯಾಂಗ ನಿಂದನೆ ಕ್ರಮದ ಎಚ್ಚರಿಕೆ

ಅಪಘಾತಕ್ಕೊಳಗಾದವರಿಗೆ ವೈದ್ಯಕೀಯ ನೆರವು ಅತ್ಯಂತ ಅಗತ್ಯವಿರುವ ನಿರ್ಣಾಯಕ ಅವಧಿಯಲ್ಲಿ ನಗದು ರಹಿತ ಚಿಕಿತ್ಸೆ ಸೌಲಭ್ಯ ನೀಡದ ಕೇಂದ್ರವನ್ನು ಪೀಠವು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
Motor vehicle accident
Motor vehicle accident (For representation only).
Published on

ವಾಹನ ಅಪಘಾತದ ಸಂತ್ರಸ್ತರಿಗೆ ವೈದ್ಯಕೀಯ ನೆರವು ಅತ್ಯಂತ ಉಪಯುಕ್ತ ಎನಿಸುವ ಜೀವರಕ್ಷಕ ಸಮಯದಲ್ಲಿ (ಗೋಲ್ಡನ್‌ ಅವರ್) ನಗದು ರಹಿತ ಚಿಕಿತ್ಸೆ ನೀಡುವ ಶಾಸನಬದ್ಧ ಯೋಜನೆ ರೂಪಿಸುವಲ್ಲಿ ಅತಿಯಾದ ವಿಳಂಬ ಮಾಡುತ್ತಿರುವುದಕ್ಕಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿಯನ್ನು ಸುಪ್ರೀಂ ಕೋರ್ಟ್ ಸೋಮವಾರ  ತರಾಟೆಗೆ ತೆಗೆದುಕೊಂಡಿತು.

ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಕಾರ್ಯದರ್ಶಿ, ಯೋಜನೆಯನ್ನು ಜಾರಿಗೆ ತರಲು 3 ವರ್ಷಗಳ ವಿಳಂಬ ಆಗಿರುವುದಕ್ಕೆ ಜನರಲ್‌ ಇನ್ಷುರೆನ್ಸ್‌ ಕಾರ್ಪೊರೇಷನ್‌ (ಜಿಐಸಿ) ಜೊತೆಗಿನ ಸಮಾಲೋಚನೆಗಳು ಮತ್ತು ಅಡಚಣೆಗಳು ಕಾರಣವೆಂದು ಹೇಳಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

Also Read
ಮೋಟಾರು ಅಪಘಾತ ಹಾಗೂ ಕಾರ್ಮಿಕ ಪ್ರಕರಣಗಳಲ್ಲಿ ಪರಿಹಾರ ಪಡೆಯದ ಫಲಾನುಭವಿಗಳ ಪತ್ತೆಗೆ ಸುಪ್ರೀಂ ನಿರ್ದೇಶನ

ಅದಕ್ಕಾಗಿ ಕಾರ್ಯದರ್ಶಿ ಕ್ಷಮೆ ಯಾಚಿಸಿದರೂ ತೃಪ್ತವಾಗದ ನ್ಯಾಯಾಲಯ ಕೂಡಲೇ ಯೋಜನೆ ಜಾರಿಗೆ ತರದಿದ್ದರೆ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕಾದೀತು ಎಂದು ಎಚ್ಚರಿಕೆ ನೀಡಿತು.

"ಮೊದಲನೆಯದಾಗಿ, ನೀವು ನ್ಯಾಯಾಂಗ ನಿಂದನೆ ಮಾಡಿದ್ದೀರಿ ಎಂಬುದನ್ನು ನೆನಪಿಡಿ. ನಾವು ಮೊದಲು ನಿಮಗೆ ನ್ಯಾಯಾಂಗ ನಿಂದನೆ ನೋಟೀಸ್ ಜಾರಿ ಮಾಡುತ್ತೇವೆ. ಏನು ನಡೆಯುತ್ತಿದೆ? ಆದೇಶದ ಅನುಪಾಲನೆ ನಿಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದ ಮೇಲೆ ನ್ಯಾಯಾಲಯಕ್ಕೆ ಬರಬಾರದೇ? ಯಾವಾಗ ಯೋಜನೆಯನ್ನು ರೂಪಿಸುತ್ತೀರಿ ಎಂದು ಈಗಲೇ ತಿಳಿಸಿ" ಎಂದು ನ್ಯಾಯಾಲಯ ಗುಡುಗಿತು.

ಈ ವೇಳೆ ಕಾರ್ಯದರ್ಶಿಯವರು, ಡಿಸೆಂಬರ್ 2024 ರಲ್ಲಿ ಕರಡು ಯೋಜನೆ ಸಿದ್ಧಪಡಿಸಲಾಗಿದ್ದರೂ ಪಾಲುದಾರರೊಂದಿಗೆ ಅದರಲ್ಲಿಯೂ ಜಿಐಸಿಯೊಂದಿಗೆ ನಡೆಯುತ್ತಿರುವ ಸಮಾಲೋಚನೆಗಳು ಪ್ರಕ್ರಿಯೆಯನ್ನು ವಿಳಂಬಗೊಳಿಸಿವೆ ಎಂದು ತಿಳಿಸಿದಾಗ ನ್ಯಾಯಾಲಯ ಇನ್ನಷ್ಟು ಅಸಮಾಧಾನ ವ್ಯಕ್ತಪಡಿಸಿತು.

"ನಿಮಗೆ ನೀವೇ ರೂಪಿಸಿರುವ ಕಾನೂನುಗಳ ಬಗ್ಗೆಯೂ ಕಾಳಜಿ ಇಲ್ಲ. ನಾವು ಮೂರು ವರ್ಷ ಕಳೆದಿದ್ದೇವೆ, ಆದರೂ ನೀವು ಒಂದು ಯೋಜನೆ ರೂಪಿಸಲು ಗೋಳಾಡುತ್ತಿದ್ದೀರಿ. ನೀವು ಸಾಮಾನ್ಯ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದೀರಾ?" ಎಂದು ನ್ಯಾಯಾಲಯ ಕಿಡಿಯಾಡಿತು.

ಕರಡನ್ನು ನಾಳೆಯೊಳಗೆ ಸಲ್ಲಿಸುವುದಾಗಿ ಕಾರ್ಯದರ್ಶಿಯವರು ತಿಳಿಸಿದರೂ ಕಾರ್ಯವಿಧಾನದ ಆತಂಕಕಾರಿ ಉದಾಸೀನತೆ ಗಮನಿಸಿದ ಪೀಠ ಸಮಾಧಾನಗೊಳ್ಳಲಿಲ್ಲ.

"ನೀವು ಈ ಪರಿ ನಿರಾತಂಕವಾಗಿರಲು ಸಾಧ್ಯವೇ? ಮೂರು ವರ್ಷಗಳ ನಂತರ, ನೀವು ಅಡೆತಡೆ ಇತ್ಯಾದಿ ಎದುರಿಸಿದ್ದೀರಿ ಎಂದು ಹೇಳುತ್ತಿದ್ದೀರಿ. ಏನನ್ನೂ ನೀವು ಮಾಡಿಲ್ಲ. ನೀವು ಈ ನಿಬಂಧನೆಯನ್ನು ಏಕೆ ಜಾರಿಗೊಳಿಸಿದ್ದೀರಿ?" ಎಂದು ನ್ಯಾಯಾಲಯ ಕೇಳಿತು.

ಕಳೆದ ವರ್ಷ ಕೆಲವು ರಾಜ್ಯಗಳಲ್ಲಿ ಪೈಲಟ್ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಕಾರ್ಯದರ್ಶಿ ವಿವರಿಸಲು ಪ್ರಯತ್ನಿಸಿದಾಗ, ರಸ್ತೆ ಅಪಘಾತ ಸಂತ್ರಸ್ತರು ಇನ್ನೂ ಜೀವರಕ್ಷಕ ಅವಧಿಯೊಳಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಹೆದ್ದಾರಿಗಳಲ್ಲಿ ಸಾಯುತ್ತಿದ್ದಾರೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.

"ಜನರು ಹೆದ್ದಾರಿಗಳಲ್ಲಿ ಸಾಯುತ್ತಿದ್ದಾರೆ. ಅಲ್ಲಿ ಯಾವುದೇ ಸೌಲಭ್ಯವಿಲ್ಲ. ಗೋಲ್ಡನ್‌ ಅವರ್‌ ಚಿಕಿತ್ಸೆ ಇಲ್ಲ. ಹೆದ್ದಾರಿಗಳನ್ನು ನಿರ್ಮಿಸುವುದರಿಂದ ಏನು ಪ್ರಯೋಜನ?" ಎಂದು ನ್ಯಾಯಾಲಯ ಕೇಳಿತು.

ಜಿಐಸಿಯನ್ನು ದೂಷಿಸುವ ಮೂಲಕ ವಿಳಂಬದಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ಹೇಳಿತು."ನೀವು ನ್ಯಾಯಾಲಯದ ಆದೇಶಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನೀವು ಗಂಭೀರವಾಗಿದ್ದರೆ, ಸಮಯ ವಿಸ್ತರಣೆಗೆ ಅವಕಾಶ ಕೊಡಬಹುದಿತ್ತು. ಇದಕ್ಕೆಲ್ಲಾ ಸಮರ್ಥನೆ ಏನು? ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡುತ್ತೇವೆ. ನೀವು ಎಲ್ಲಿ ಸಿಲುಕಿಕೊಂಡಿದ್ದೀರಿ ಎಂದು ನಮಗೆ ತಿಳಿಯುತ್ತಿಲ್ಲ" ಎಂದು ತರಾಟೆಗೆ ತೆಗೆದುಕೊಂಡಿತು.

Also Read
ರಸ್ತೆ ಅಪಘಾತ ಸಂತ್ರಸ್ತರಿಗೆ ಸಕಾಲಿಕ ನೆರವು: ಶಿಷ್ಟಾಚಾರ ರೂಪಿಸುವಂತೆ ರಾಜ್ಯಗಳಿಗೆ ಸುಪ್ರೀಂ ನಿರ್ದೇಶನ

ಕರಡು ಯೋಜನೆಯನ್ನು ತಕ್ಷಣವೇ ಸಲ್ಲಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದ ಪೀಠ, ಅಗತ್ಯವಿದ್ದಲ್ಲಿ ಅದನ್ನು ಜಾರಿಗೊಳಿಸಲು ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸುವುದಾಗಿಯೂ ಎಚ್ಚರಿಕೆ ನೀಡಿತು. ಪ್ರಕರಣದ ಮುಂದಿನ ವಿಚಾರಣೆ ಮೇ 13ರಂದು ನಡೆಯಲಿದೆ.

ರಸ್ತೆ ಅಪಘಾತ ಸಾವುಗಳನ್ನು ಎತ್ತಿ ತೋರಿಸಿ ಮತ್ತು ಜೀವರಕ್ಷಕ ಅವಧಿಯಲಲ್ಲಿ ಜೀವಗಳನ್ನು ಉಳಿಸಲು ಶಾಸನಬದ್ಧ ಕಾರ್ಯವಿಧಾನಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಕೋರಿ ಡಾ. ಎಸ್ ರಾಜಶೇಖರನ್ ಎಂಬುವರು ಅರ್ಜಿ ಸಲ್ಲಿಸಿದ್ದಾರೆ.

Kannada Bar & Bench
kannada.barandbench.com