

ಪತ್ನಿಯ ಸ್ವಂತ ಕೃತ್ಯಗಳು ಪತಿಯ ಸಂಪಾದನೆ ಅಸಮರ್ಥತೆಗೆ ಕಾರಣವಾಗಿದ್ದರೆ ಅಥವಾ ಕೊಡುಗೆ ನೀಡಿದ್ದರೆ, ಆಕೆ ತನ್ನ ಪತಿಯಿಂದ ಜೀವನಾಂಶ ಪಡೆಯುವಂತಿಲ್ಲ ಎಂದು ಅಲಾಹಾಬದ್ ಹೈಕೋರ್ಟ್ ತೀರ್ಪು ನೀಡಿದೆ.
ಮಹಿಳೆಯೊಬ್ಬರು ಸಲ್ಲಿಸಿದ್ದ ಜೀವನಾಂಶ ಅರ್ಜಿ ಇತ್ಯರ್ಥವಾಗುವವರೆಗೆ, ಆಕೆ ತನ್ನ ಪತಿಯಿಂದ ಮಧ್ಯಂತರ ಪಾವತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದ ನ್ಯಾಯಮೂರ್ತಿ ಲಕ್ಷ್ಮಿ ಕಾಂತ್ ಶುಕ್ಲಾ ಅವರಿದ್ದ ಪೀಠ ಈ ವಿಚಾರ ತಿಳಿಸಿತು.
ಪತ್ನಿಯ ಕುಟುಂಬ ಸದಸ್ಯರು ಗುಂಡೇಟಿನಿಂದ ಗಂಭೀರ ಗಾಯ ಮಾಡಿದ್ದರಿಂದ ಮಹಿಳೆಯ ಪತಿ ಹಣ ಸಂಪಾದಿಸಲು ಅಸಮರ್ಥನಾಗಿದ್ದ ಪ್ರಕರಣ ಇದಾಗಿದೆ ಎಂದು ನ್ಯಾಯಾಲಯ ನುಡಿದಿದೆ.
“ಪತ್ನಿ ತನ್ನ ಸ್ವಂತ ಕೃತ್ಯ ಅಥವಾ ನಿರ್ಲಕ್ಷ್ಯದಿಂದಾಗಿ ಪತಿಯ ಆದಾಯ ಸಂಪಾದನೆಗೆ ಅಸಮರ್ಥತೆ ಉಂಟುಮಾಡಿದರೆ ಅಥವಾ ಅದಕ್ಕೆ ಕಾರಣವಾದರೆ, ಆ ಪರಿಸ್ಥಿತಿಯನ್ನು ಬಳಸಿಕೊಂಡು ಜೀವನಾಂಶ ಬೇಡುವಂತಿಲ್ಲ. ಇಂತಹ ಸಂದರ್ಭಗಳಲ್ಲಿ ಜೀವನಾಂಶ ನೀಡುವುದು ಪತಿಗೆ ಭಾರೀ ಅನ್ಯಾಯವಾಗುತ್ತದೆ. ಸಾಕ್ಷ್ಯಗಳು ಹೇಳುತ್ತಿರುವ ವಾಸ್ತವಾಂಶವನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ,” ಎಂದು ಅದು ಹೇಳಿದೆ.
ಪ್ರಕರಣದ ವಾಸ್ತವಾಂಶಗಳನ್ನು ಗಮನಿಸಿದರೆ, ಮೇಲ್ನೋಟಕ್ಕೆ ಪತ್ನಿ ಹಾಗೂ ಆಕೆಯ ಕುಟುಂಬದ ಸದಸ್ಯರ ವರ್ತನೆಯೇ ಪತಿಯನ್ನು ತನ್ನ ಜೀವನೋಪಾಯ ಮೊತ್ತ ಸಂಪಾದಿಸಲು ಅಸಮರ್ಥನಾಗಿಸಿದೆ ಎಂಬುದು ಕಾಣಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಜೀವನಾಂಶ ನೀಡುವುದು ಪತಿಗೆ ಭಾರೀ ಅನ್ಯಾಯ ಎಸಗಿದಂತೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪತಿ ಹೋಮಿಯೋಪಥಿ ವೈದ್ಯರಾಗಿದ್ದು, ತಮ್ಮದೇ ಕ್ಲಿನಿಕ್ ನಡೆಸುತ್ತಿದ್ದರು. ಆದರೆ 2019ರ ಏಪ್ರಿಲ್‌ನಲ್ಲಿ ಪತ್ನಿಯ ಸಹೋದರ ಮತ್ತು ತಂದೆ ಸೇರಿದಂತೆ ಇತರರು ನಡೆಸಿದ ಎನ್ನಲಾದ ದಾಳಿಯಲ್ಲಿ ಪತಿ ಗಂಭೀರವಾಗಿ ಗಾಯಗೊಂಡರು. ಗುಂಡಿನ ದಾಳಿಯಿಂದ ಪತಿಯ ಬೆನ್ನೆಲುಬಿನ ನರಮಂಡಲದಲ್ಲಿ ಗುಂಡಿನ ತುಣುಕು ಸಿಲುಕಿದ್ದು, ಅದನ್ನು ತೆಗೆಯುವುದರಿಂದ ಪತಿಗೆ ಘಾಸಿ ಉಂಟಾಗುವ ಪಾಯವಿದೆ ಎಂದು ವೈದ್ಯಕೀಯ ವರದಿಗಳು ಸೂಚಿಸಿದ್ದವು. ಗಾಯದ ಪರಿಣಾಮವಾಗಿ ಪತಿ ದೀರ್ಘಕಾಲ ಕುಳಿತುಕೊಳ್ಳಲು ಸಾಧ್ಯವಾಗದೆ, ಉದ್ಯೋಗವಿಲ್ಲದವನಾಗಿ ಆದಾಯ ಗಳಿಸಲು ಸಂಪೂರ್ಣ ಅಸಮರ್ಥನಾಗಿದ್ದಾನೆ ಎಂದು ನ್ಯಾಯಾಲಯ ಹೇಳಿದೆ.
ಪತಿ ವೈದ್ಯರಾಗಿದ್ದು ಇನ್ನೂ ಆದಾಯ ಸಂಪಾದಿಸುವ ಸಾಮರ್ಥ್ಯ ಹೊಂದಿದ್ದಾರೆ ಹಾಗೂ ಉದ್ದೇಶಪೂರ್ವಕವಾಗಿ ಪತ್ನಿಯನ್ನು ನೋಡಿಕೊಳ್ಳುತ್ತಿಲ್ಲ ಎಂಬುದು ಪತ್ನಿ ಪರ ವಕೀಲರ ವಾದವಾಗಿತ್ತು. ಆದರೆ ನ್ಯಾಯಾಲಯ, ಸಾಮಾನ್ಯವಾಗಿ ಪತಿ ಪತ್ನಿಯನ್ನು ಪೋಷಿಸುವುದು ಅವನ ಕರ್ತವ್ಯವಾದರೂ, ಈ ಪ್ರಕರಣದಲ್ಲಿ ಪತ್ನಿಯ ಕುಟುಂಬದ ಅಪರಾಧ ಕೃತ್ಯದಿಂದಲೇ ಪತಿಯ ಆದಾಯ ಸಾಮರ್ಥ್ಯ ಸಂಪೂರ್ಣವಾಗಿ ನಾಶವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.
ಅಂತೆಯೇ ಕೆಳ ನ್ಯಾಯಾಲಯದ ಆದೇಶ ಸೂಕ್ತವಾಗಿದೆ ಎಂದು ಘೋಷಿಸಿದ ಅದು ಪತ್ನಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ.
[ತೀರ್ಪಿನ ಪ್ರತಿ]