ಪದೇ ಪದೇ ಮನೆಗೆ ತಡವಾಗಿ ಬರುವ ಪತಿಯ ಬಗ್ಗೆ ಪತ್ನಿ ಅನುಮಾನಿಸುವುದು ಕ್ರೌರ್ಯವಲ್ಲ: ಛತ್ತೀಸ್‌ಗಢ ಹೈಕೋರ್ಟ್

ಪತ್ನಿಯ ಅಂತಹ ನಡವಳಿಕೆ ʼಮನುಷ್ಯ ಸಹಜ ನಡೆʼ ಎಂದು ನ್ಯಾ. ಗೌತಮ್ ಭಾದುರಿ ನೇತೃತ್ವದ ಪೀಠ ಪರಿಗಣಿಸಿತು.
ಪದೇ ಪದೇ ಮನೆಗೆ ತಡವಾಗಿ ಬರುವ ಪತಿಯ ಬಗ್ಗೆ ಪತ್ನಿ ಅನುಮಾನಿಸುವುದು ಕ್ರೌರ್ಯವಲ್ಲ: ಛತ್ತೀಸ್‌ಗಢ ಹೈಕೋರ್ಟ್
Published on

ಪತಿ ಪದೇ ಪದೇ ಮನೆಗೆ ತಡವಾಗಿ ಬರುತ್ತಿದ್ದರೆ ಆತನಿಗೆ ಬೇರೆ ಸಂಬಂಧ ಇದೆಯೇ ಎಂದು ಹೆಂಡತಿ ಅನುಮಾನ ವ್ಯಕ್ತಪಡಿಸಿದರೆ ಅದನ್ನು ಕ್ರೌರ್ಯ ಎನ್ನಲಾಗದು ಎಂದು ಛತ್ತೀಸ್‌ಗಢ ಹೈಕೋರ್ಟ್ ಇತ್ತೀಚೆಗೆ ತೀರ್ಪೊಂದರಲ್ಲಿ ಹೇಳಿದೆ [ರೈನ್‌ಪ್ರೀತ್ ಕೌರ್ ಮತ್ತು ಕುಲ್ಬೀರ್ ಛಾಬ್ರಾ ನಡುವಣ ಪ್ರಕರಣ].

ಪತ್ನಿಯ ಅಂತಹ ನಡವಳಿಕೆ ʼಮಾನವ ಸಹಜ ವರ್ತನೆʼ ಎಂದು ನ್ಯಾಯಮೂರ್ತಿಗಳಾದ ಗೌತಮ್‌ ಭಾದುರಿ ಮತ್ತು ದೀಪಕ್‌ ಕುಮಾರ್‌ ತಿವಾರಿ ಅವರಿದ್ದ ಪೀಠ ಅಭಿಪ್ರಾಯ ವ್ಯಕ್ತಪಡಿಸಿತು.

ಇದು ಮಾನವ ಸಹಜ ವರ್ತನೆಯಾಗಿದ್ದು, ಪತಿ ಪದೇ ಪದೇ ತಡರಾತ್ರಿ ಬಂದಾಗ ಹೆಂಡತಿಯ ಮನಸ್ಸಿನಲ್ಲಿ ಕೆಲ ಅನುಮಾನಗಳು ಮೂಡಬಹುದಾಗಿವೆ. ಅದನ್ನು ಕ್ರೌರ್ಯ ಎನ್ನಲಾಗದು ಎಂದು ಅವರು ಅಕ್ಟೋಬರ್ 16ರಂದು ನೀಡಿದ ತೀರ್ಪಿನಲ್ಲಿ ವಿವರಿಸಿದ್ದಾರೆ.  

ಪತಿಯು ವಿಚ್ಛೇದನ ಕೋರಿಕೆಗೆ ಕೌಟುಂಬಿಕ ನ್ಯಾಯಾಲಯವೊಂದು ಸಮ್ಮತಿಸಿತ್ತು. ಇದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್‌ ಮೊರೆ ಹೋಗಿದ್ದರು. ಪತಿಯು ಪದೇ ಪದೇ ತಡರಾತ್ರಿ ಮನೆಗೆ ಬರುತ್ತಿದ್ದರು, ಕೆಲವೊಮ್ಮೆ ಮನೆಗೆ ಬರುತ್ತಲೇ ಇರಲಿಲ್ಲ ಎಂದು ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ಪತ್ನಿಯ ಪರ ವಕೀಲರು ತಿಳಿಸಿದ್ದರು. ಈ ಪ್ರಕರಣದ ತೀರ್ಪಿನ ವೇಳೆ ನ್ಯಾಯಾಲಯ ಮೇಲಿನಂತೆ ಅಭಿಪ್ರಾಯಪಟ್ಟಿತು.

ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಮನೆಗೆ ಬರಲು ತಡವಾಗುತ್ತಿತ್ತು. ತನ್ನ ಚಾರಿತ್ರ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪತ್ನಿ ಕ್ರೂರವಾಗಿ ವರ್ತಿಸುತ್ತಿದ್ದಾಳೆ ಎಂದು ಪತಿ ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚ್ಛೇದನಕ್ಕಾಗಿ ಆತ ಮಾಡಿದ್ದ ಮನವಿಗೆ ಕೌಟುಂಬಿಕ ನ್ಯಾಯಾಲಯ ಸಮ್ಮತಿಸಿತ್ತು. ಇದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಪತಿಯ ನಡೆ ಇದಕ್ಕಿಂತ ಭಿನ್ನವಾಗಿದ್ದರೆ ಮತ್ತು ಸೂಕ್ತ ರೀತಿಯಲ್ಲಿ ಸನ್ನಿವೇಶವನ್ನು ವಿವರಿಸಿದ್ದರೆ ಪತ್ನಿಗೆ ಅನುಮಾನ ಬರುತ್ತಿರಲಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

“ಈ ನಡೆಗಳಿಂದ ಅನುಮಾನ ಸೃಷ್ಟಿಯಾದ ಕಾರಣ ಪತಿ ವಿರುದ್ಧ ಮಾಡಲಾದ ಆರೋಪಗಳು ಸಂಪೂರ್ಣ ತಪ್ಪು ಎನ್ನಲಾಗದು. ಆದರೆ ಪತಿಯ ಅಸಹಜವಾದ ಮತ್ತು ವಿವರಿಸಲಾಗದ ನಡೆಯಿಂದಾಗಿ ಆರೋಪ ಮಾಡಲಾಗಿದೆ ಎಂಬುದನ್ನು ವಾಸ್ತವಾಂಶಗಳು ಬಹಿರಂಗಪಡಿಸುತ್ತವೆ" ಎಂದು ಪೀಠ ಹೇಳಿದೆ.

ತನ್ನ ಸಹೋದರನ ಸ್ನೇಹಿತರೊಂದಿಗೆ ಮಾತನಾಡಿದ್ದಕ್ಕೆ ಪತಿ ಕೂಡ ತನ್ನ ಪತ್ನಿಯನ್ನು ಅನುಮಾನಿಸಿದ್ದಾನೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಇಬ್ಬರೂ ಸಂಗಾತಿಗಳು ಪರಸ್ಪರ ನಂಬಿಕೆ ಇರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದೆ. ಈ ಅವಲೋಕನಗಳೊಂದಿಗೆ ಪತಿ ವಿಚ್ಛೇದನ ಪಡೆಯುವ ಪರವಾಗಿ ಕೌಟುಂಬಿಕ ನ್ಯಾಯಾಲಯ 2017ರಲ್ಲಿನೀಡಿದ್ದ ತೀರ್ಪನ್ನು ಅದು ಬದಿಗೆ ಸರಿಸಿದೆ.

Kannada Bar & Bench
kannada.barandbench.com