ಚಿತ್ರೋದ್ಯಮದೊಂದಿಗೆ ಸಭೆ ನಡೆಸಿ ಹೇಮಾ ಸಮಿತಿ ವರದಿ ಆಧರಿತ ಮಸೂದೆ ಅಂತಿಮ: ಕೇರಳ ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಮಾಹಿತಿ

ಆಗಸ್ಟ್‌ನಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದ್ದು ಅಷ್ಟರೊಳಗೆ ರಾಜ್ಯ ಸರ್ಕಾರ ಚಲನಚಿತ್ರ ನೀತಿ ಅಂತಿಮಗೊಳಿಸಲಾಗುವುದು ಎಂದು ಅಡ್ವೊಕೇಟ್ ಜನರಲ್ ಗೋಪಾಲಕೃಷ್ಣ ಕುರುಪ್ ಹೇಳಿದ್ದಾರೆ.
ಚಿತ್ರೋದ್ಯಮದೊಂದಿಗೆ ಸಭೆ ನಡೆಸಿ ಹೇಮಾ ಸಮಿತಿ ವರದಿ ಆಧರಿತ ಮಸೂದೆ ಅಂತಿಮ: ಕೇರಳ ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಮಾಹಿತಿ
Published on

ಮಲಯಾಳಂ ಚಲನಚಿತ್ರೋದ್ಯಮದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಪ್ರಸ್ತಾವಿತ ಕಾಯಿದೆಯ ಕರಡನ್ನು ಅಂತಿಮಗೊಳಿಸುವ ಮೊದಲು, ಆಗಸ್ಟ್ 2025ರಲ್ಲಿ ಚಿತ್ರರಂಗದ ಸಭೆ ಕರೆಯುವುದಾಗಿ ಕೇರಳ ಸರ್ಕಾರ ಸೋಮವಾರ ಕೇರಳ ಹೈಕೋರ್ಟ್‌ಗೆ ತಿಳಿಸಿದೆ [ ನವಾಸ್ ಎ @ ಪೈಚಿರಾ ನವಾಸ್ ಮತ್ತು ಕೇರಳ ಸರ್ಕಾರ ಹಾಗೂ ಸಂಬಂಧಿತ ಪ್ರಕರಣಗಳು ].

ಮಾಲಿವುಡ್‌ನಲ್ಲಿ ವ್ಯಾಪಕ ಲೈಂಗಿಕ ಕಿರುಕುಳ ನಡೆಯುತ್ತಿರುವ ವಿಚಾರ ಬಹಿರಂಗಪಡಿಸಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಹಿನ್ನೆಲೆಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಆಲಿಸಿದ ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ಸಿ ಎಸ್ ಸುಧಾ  ಅವರಿದ್ದ ವಿಶೇಷ ಪೀಠದೆದುರು ಈ ವಿಚಾರ ತಿಳಿಸಲಾಯಿತು (ಈ ಪ್ರಕರಣಗಳ ತನಿಖೆಗೆಂದೇ ಈ ಹಿಂದೆ ವಿಶೇಷ ಪೀಠ ರಚನೆಯಾಗಿತ್ತು).

Also Read
ಹೇಮಾ ಸಮಿತಿ ವರದಿ ಬಳಿಕ ಈವರೆಗೆ 40 ಎಫ್ಐಆರ್‌ ದಾಖಲು: ಕೇರಳ ಹೈಕೋರ್ಟ್‌ಗೆ ಮಾಹಿತಿ ನೀಡಿದ ರಾಜ್ಯ ಸರ್ಕಾರ

ಚಿತ್ರರಂಗಕ್ಕೆ ಸಂಬಂಧಿಸಿದ ಎಲ್ಲಾ ಭಾಗೀದಾರರೊಂದಿಗೆ ಸಮಾಲೋಚಿಸಿದ ಬಳಿಕವೇ ಸರ್ಕಾರ ಕರಡು ಮಸೂದೆ ಅಂತಿಮಗೊಳಿಸುತ್ತದೆ. ಈ ಉದ್ದೇಶಕ್ಕಾಗಿ ಆಗಸ್ಟ್ 2 ಮತ್ತು 3 ರಂದು ಚಿತ್ರರಂಗದ ಸಭೆ ಕರೆಯಲಾಗಿದ್ದು ಅಷ್ಟರೊಳಗೆ ರಾಜ್ಯ ಸರ್ಕಾರ ಚಲನಚಿತ್ರ ನೀತಿ ಅಂತಿಮಗೊಳಿಸಲಿದೆ ಎಂದು ಅಡ್ವೊಕೇಟ್ ಜನರಲ್ (ಎಜಿ) ಗೋಪಾಲಕೃಷ್ಣ ಕುರುಪ್ ಪೀಠಕ್ಕೆ ತಿಳಿಸಿದರು.

 ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಲು 'ವಿಮೆನ್ ಇನ್ ಸಿನಿಮಾ ಕಲೆಕ್ಟಿವ್' ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಕೇರಳ ಸರ್ಕಾರ 2017ರಲ್ಲಿ ನ್ಯಾಯಮೂರ್ತಿ ಕೆ ಹೇಮಾ ಸಮಿತಿ ರಚಿಸಿತ್ತು.

Also Read
ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಮತ್ತು ಅಸಮಾನತೆ: ಇಲ್ಲಿವೆ ನ್ಯಾ. ಹೇಮಾ ಸಮಿತಿ ವರದಿಯ ಪ್ರಮುಖ ಅಂಶಗಳು

ಆಗಸ್ಟ್ 2024 ರಲ್ಲಿ ಬಿಡುಗಡೆಯಾದ ವರದಿ ಚಿತ್ರೋದ್ಯಮದಲ್ಲಿ ವ್ಯಾಪಕವಾಗಿರುವ ಲೈಂಗಿಕ ದೌರ್ಜನ್ಯ ಮತ್ತು ʼಪಾತ್ರಕ್ಕಾಗಿ ಪಲ್ಲಂಗʼದ ಚಟುವಟಿಕೆ ರೂಢಿಯಲ್ಲಿರುವುದನ್ನು ಬಹಿರಂಗಪಡಿಸಿತ್ತು.  ಬಳಿಕ ಹಲವು ಮಹಿಳೆಯರು ಚಿತ್ರರಂಗದ ಪ್ರಮುಖ ವ್ಯಕ್ತಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದರ ಪರಿಣಾಮ ಕ್ರಿಮಿನಲ್‌ ಪ್ರಕರಣಗಳು ದಾಖಲಾದವು. ಈ ಪ್ರಕರಣಗಳ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು.

ಎರಡು ವಾರಗಳಲ್ಲಿ ತನ್ನ ಪ್ರಗತಿಯ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಇಂದು ಎಸ್‌ಐಟಿಗೆ ನಿರ್ದೇಶನ ನೀಡಿದೆ. ಜೂನ್ 25 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.

Kannada Bar & Bench
kannada.barandbench.com