ಬೈಪೋಲಾರ್‌ ಸಮಸ್ಯೆ ಎದುರಿಸುತ್ತಲೇ ನ್ಯಾಯಾಧೀಶರಾದ ವಕೀಲರೊಬ್ಬರ ಕಥನ

ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಹೊರಬರಲು ತಜ್ಞ ವೈದ್ಯರ ಜೊತೆ ನಿರಂತರ ಸಮಾಲೋಚನೆಯಿಂದ ಸಾಧ್ಯ ಎಂದು ಈಚೆಗೆ ಸುಪ್ರೀಂ ಕೋರ್ಟ್‌ನಿಂದ ಆದೇಶ ಪಡೆದಿರುವ 36 ವರ್ಷದ ಭವ್ಯ ನೈನ್‌ ಹೇಳಿದ್ದಾರೆ.
ಬೈಪೋಲಾರ್‌ ಸಮಸ್ಯೆ ಎದುರಿಸುತ್ತಲೇ ನ್ಯಾಯಾಧೀಶರಾದ ವಕೀಲರೊಬ್ಬರ ಕಥನ

Justice

ಬೈಪೋಲಾರ್‌ ಉದ್ವೇಗ ಸಮಸ್ಯೆಯಿಂದ (ಬೈಪೊಲಾರ್ ಅಫೆಕ್ಟಿವ್ ಡಿಸಾರ್ಡರ್) ಬಳಲುತ್ತಿರುವ ವಕೀಲ ಭವ್ಯ ನೈನ್‌ ಅವರ ನ್ಯಾಯಾಂಗ ಅಧಿಕಾರಿ (ನ್ಯಾಯಾಧೀಶ) ನೇಮಕಾತಿಯನ್ನು ಈಚೆಗೆ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ವಿಕಲಚೇತನರ ಕೋಟಾದಡಿ ಆಯ್ಕೆಯಾಗಿದ್ದ ಅವರನ್ನು ಅವರ ವೈಕಲ್ಯ ಶಾಶ್ವತವಾದುದಲ್ಲ ಎನ್ನುವ ಕಾರಣ ನೀಡಿ ಸಂದರ್ಶನದಲ್ಲಿ ಅನರ್ಹಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಭವ್ಯ ನೈನ್‌ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಸರ್ವೋಚ್ಚ ನ್ಯಾಯಾಲಯ ನೇಮಿಸಿದ್ದ ವೈದ್ಯಕೀಯ ಮಂಡಳಿಯು "ಭವ್ಯ ನೈನ್‌ ಅವರು ನ್ಯಾಯಾಂಗ ಅಧಿಕಾರಿಯಾಗಿ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಲು ಯಾವುದೇ ಅಂಶಗಳು ಇಲ್ಲ" ಎಂದಿದೆ. ಇದನ್ನು ಆಧರಿಸಿ ದೆಹಲಿ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿಯಿತು.

2018ರಲ್ಲಿ ದೆಹಲಿ ನ್ಯಾಯಾಂಗ ಸೇವಾ ಪರೀಕ್ಷೆ ಬರೆಯುವುದರೊಂದಿಗೆ ನೈನ್ ಅವರ ಕಾನೂನು ಸಂಘರ್ಷ ಆರಂಭವಾಗಿತ್ತು. ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ನೈನ್‌ ಅವರಿಗೆ ಸಂದರ್ಶನದ ವೇಳೆ ನಿರಾಸೆಯಾಗಿತ್ತು. ಅವರು ಸಲ್ಲಿಸಿದ್ದ ವೈಕಲ್ಯ ಪ್ರಮಾಣ ಪತ್ರದಲ್ಲಿ ನೈನ್‌ ಅವರದ್ದು ಶಾಶ್ವತವಾದ ವೈಕಲ್ಯತೆ ಎಂದು ಹೇಳಲಾಗಿಲ್ಲ ಎಂಬ ಆಧಾರದಲ್ಲಿ ಅವರ ಹೆಸರನ್ನು ತಿರಸ್ಕರಿಸಲಾಗಿತ್ತು.

ಇದನ್ನು ನೈನ್‌ ಅವರು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಸುದೀರ್ಘವಾದ ವಾದ ಆಲಿಸಿದ್ದ ದೆಹಲಿ ಹೈಕೋರ್ಟ್‌ ಉದ್ಯೋಗಕ್ಕೆ ಸಂಬಂಧಿಸಿದ ವಿಚಾರದಲ್ಲಿ ವೈಕಲ್ಯದಿಂದ ಬಳಲುತ್ತಿರುವವರ ವಿರುದ್ಧ ತಾರತಮ್ಯದ ನೀತಿ ಅನುಸರಿಸುವಂತಿಲ್ಲ ಎಂದು ಹೇಳಿತಲ್ಲದೇ ನೈನ್‌ ಅವರನ್ನು ನ್ಯಾಯಾಂಗ ಸೇವೆಗೆ ಆಯ್ಕೆ ಮಾಡುವಂತೆ ನಿರ್ದೇಶಿಸಿತ್ತು. ಈ ಆದೇಶವನ್ನು ಈಚೆಗೆ ಸುಪ್ರೀಂ ಕೋರ್ಟ್‌ ಸಹ ಎತ್ತಿ ಹಿಡಿದಿದೆ, ಆದರೆ ಅದು ನೀಡಿರುವ ಕಾರಣಗಳು "ಕೊಂಚ ಭಿನ್ನವಾಗಿವೆ".

ದೇಶದಲ್ಲಿ ಮೊದಲ ಬಾರಿಗೆ ಬೈಪೊಲಾರ್ ಅಸ್ವಸ್ಥತೆಯಿಂದ ಬಳಲುತ್ತಿರುವವರೊಬ್ಬರು ನ್ಯಾಯಾಂಗ ಅಧಿಕಾರಿಯಾಗಿರುವ ಕುರಿತು “ಬಾರ್‌ ಅಂಡ್‌ ಬೆಂಚ್‌” ಜೊತೆ ಮಾತನಾಡಿದ ಭವ್ಯ ನೈನ್‌ ಅವರು, “2010ರಲ್ಲಿ ನನಗೆ ಬೈಪೋಲಾರ್‌ ಉದ್ವೇಗ ಸಮಸ್ಯೆ ಇದೆ ಎಂದು ತಿಳಿಯಿತು. ಅದನ್ನು ಪತ್ತೆಹಚ್ಚುವುದು ಅಷ್ಟು ಸುಲಭದ ವಿಧಾನವಾಗಿರಲಿಲ್ಲ. 2018ರಲ್ಲಿ ನಾನು ನ್ಯಾಯಾಂಗ ಸೇವೆಗೆ ಮೊದಲ ಬಾರಿಗೆ ಅರ್ಜಿ ಹಾಕಿದೆ. ನೇಮಕಾತಿ ಪ್ರಕ್ರಿಯೆಯ ಎಲ್ಲ ಹಂತಗಳನ್ನೂ ಪೂರ್ಣಗೊಳಿಸಿದ್ದೇನೆ. 2020-2021ರಲ್ಲಿ ಸಾಕಷ್ಟು ಶ್ರಮ ಹಾಕಿದ್ದು, ಇದೊಂದು ಸುದೀರ್ಘ ಯಾನ” ಎಂದು ನೆನೆದರು.

“ನಿರಂತರವಾದ ಚಿಕಿತ್ಸೆ, ಆರೈಕೆಯಿಂದ ಸಮಸ್ಯೆಯನ್ನು ಉತ್ತಮವಾಗಿ ನಿಭಾಯಿಸಬಹುದು. ಕಠಿಣ ಪರಿಶ್ರಮದ ಮೂಲಕ ನಮ್ಮ ಗುರಿಯನ್ನು ಮುಟ್ಟಬಹುದಾಗಿದೆ” ಎಂದು ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಆಕಾಂಕ್ಷಿಗಳಿಗೆ ಸಲಹೆ ನೀಡಿದ್ದಾರೆ. ಇದೆ ವೇಳೆ, ನ್ಯಾಯಾಧೀಶರಾಗಿ ನೊಂದವರಿಗೆ, ಸಂತ್ರಸ್ತರಿಗೆ “ನ್ಯಾಯದಾನ ಮಾಡಲು ಎಲ್ಲಾ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆಯಿಂದ ನುಡಿಯುತ್ತಾರೆ.

Also Read
ಮಾನಸಿಕ ಆರೋಗ್ಯ ಸಮಸ್ಯೆ ಇರುವವರ ವಿರುದ್ಧ ಶಿಸ್ತು ಪ್ರಕ್ರಿಯೆ ಜಾರಿಯು ಪರೋಕ್ಷ ತಾರತಮ್ಯದ ಮುಖ: ಸುಪ್ರೀಂ ಕೋರ್ಟ್‌

ಭವ್ಯ ನೈನ್ ಅವರ ತಂದೆ ವಕೀಲ ಕವಲ್ ನೈನ್‌ ಅವರು ಸುಪ್ರೀಂ ಕೋರ್ಟ್‌ ತೀರ್ಪನ್ನು ತಮ್ಮ ಜೀವನದ ಮಹತ್ವದ ದಿನ ಎಂದು ಬಣ್ಣಿಸಿದ್ದಾರೆ. “ನನ್ನ ಪುತ್ರ ಆಯ್ಕೆಯಾದ ದಿನ ನನ್ನ ಬದುಕಿನ ಮಹತ್ವದ ದಿನ. ಕಠಿಣ ಪರಿಶ್ರಮದಿಂದ ಯಶಸ್ಸು ಸಾಧಿಸಬಹುದು ಎಂಬುದರ ಬಗ್ಗೆ ನನಗೆ ಭರವಸೆ ಮೂಡಿದೆ. ದೆಹಲಿ ಹೈಕೋರ್ಟ್‌ ನಮ್ಮ ವಾದವನ್ನು ಸಾವಧಾನದಿಂದ ಆಲಿಸಿ ಸೂಕ್ತವಾದ ತೀರ್ಪು ನೀಡಿತ್ತು. ಇನ್ನು 'ಕೊಂಚ ವಿಭಿನ್ನ ಕಾರಣ ನೀಡಿ' ಮೂಲಕ ವೈದ್ಯಕೀಯ ಮಂಡಳಿಯ ರಚಿಸಿ ಅದರ ಅಭಿಪ್ರಾಯ ಆಧರಿಸಿ ದೆಹಲಿ ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ” ಎಂದು ಹೇಳಿದ್ದಾರೆ.

“ನನ್ನ ಪುತ್ರ ಪರಿಶ್ರಮಪಟ್ಟು ನ್ಯಾಯಾಂಗ ಆಯ್ಕೆಯ ಎಲ್ಲಾ ಮೂರು ಹಂತಗಳಲ್ಲೂ ಯಶಸ್ವಿಯಾಗಿದ್ದಾನೆ. ನಮ್ಮ ಕಾನೂನು ವ್ಯವಸ್ಥೆಯು ನ್ಯಾಯ ಕೇಂದ್ರಿತವಾಗಿರುವುದಕ್ಕೆ ನಾನು ಆಭಾರಿಯಾಗಿದ್ಢೇನೆ. ನ್ಯಾಯಾಲಯವು ಅಸ್ವಸ್ಥತೆ ಇರುವವರ ಹಕ್ಕುಗಳನ್ನು ಎತ್ತಿ ಹಿಡಿದಿದೆ. ನಿಧಾನವಾಗಿಯೇ ಆದರೂ ಸರಿ ಅಂತಿಮವಾಗಿ ನಮ್ಮ ಗುರಿ ಮುಟ್ಟಬಹುದು ಎಂಬುದು ತೃಪ್ತಿ ನೀಡುವ ಭಾವನೆಯಾಗಿದೆ” ಎಂದು ಹೇಳಿದ್ದಾರೆ.

Related Stories

No stories found.
Kannada Bar & Bench
kannada.barandbench.com