ಖರ್‌ಗೌನ್ ತೆರವು ಕಾರ್ಯಾಚರಣೆ ವೇಳೆ ಕಾನೂನು ಪಾಲಿಸಲಾಗಿದೆ: ಮಧ್ಯಪ್ರದೇಶದ ಎಜಿ ಪ್ರಶಾಂತ್‌ ಸಿಂಗ್

ಖರ್‌ಗೌನ್‌ ಜಿಲ್ಲೆಯಲ್ಲಿನ ಅತಿಕ್ರಮಣ ತೆರವುಗೊಳಿಸುವ ವಿಷಯದಲ್ಲಿ ಕಾನೂನು ಪಾಲಿಸಲಾಗಿದೆ ಎಂದು ನಾನು ನಿಮಗೆ ಸಂಪೂರ್ಣ ಖಚಿತವಾಗಿ ಹೇಳಬಲ್ಲೆ ಎಂದು 'ಬಾರ್ ಅಂಡ್ ಬೆಂಚ್‌'ಗೆ ನೀಡಿದ ಸಂದರ್ಶನದಲ್ಲಿ ಎಜಿ ಪ್ರಶಾಂತ್‌ ಸಿಂಗ್‌ ತಿಳಿಸಿದ್ದಾರೆ.
Madhya Pradesh Advocate General Prashant Singh
Madhya Pradesh Advocate General Prashant Singh A1

ಮಧ್ಯಪ್ರದೇಶದಲ್ಲಿ ರಾಮನವಮಿ ಸಂದರ್ಭದಲ್ಲಿ ಖರ್‌ಗೌನ್‌ನಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಉತ್ತರವಾಗಿ ಹಿಂಸಾಚಾರದಲ್ಲಿ ತೊಡಗಿದ್ದವರ ವಿರುದ್ಧ ರಾಜ್ಯ ಸರ್ಕಾರ ಕೈಗೊಂಡಿದ್ದ ಕಟ್ಟಡ ತೆರವು ಕಾರ್ಯಾಚರಣೆ ಕ್ರಮವನ್ನು ಮಧ್ಯಪ್ರದೇಶದ ಅಡ್ವೊಕೇಟ್‌ ಜನರಲ್‌ ಪ್ರಶಾಂತ್‌ ಸಿಂಗ್‌ ಸಮರ್ಥಿಸಿಕೊಂಡಿದ್ದಾರೆ.

'ಬಾರ್‌ ಅಂಡ್‌ ಬೆಂಚ್ʼ' ಇಂಗ್ಲಿಷ್‌ ಆವೃತ್ತಿಗೆ ನೀಡಿದ ಸಂದರ್ಶನದಲ್ಲಿ ಅವರು “ಕಾರ್ಯಾಚರಣೆಗೆ ಸಂಬಂಧಿಸಿದಂತೆ 1961ರ ಮಧ್ಯಪ್ರದೇಶ ಪುರಸಭಾ ಕಾಯಿದೆಯ ವಿವಿಧ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಕಾನೂನು ಪಾಲಿಸದ ಒಂದೇ ಒಂದು ಉದಾಹರಣೆ ಕೂಡ ಇಲ್ಲ. ನೋಟಿಸ್‌ ಜಾರಿ ಮಾಡಲಾಗಿದ್ದು ಕಂದಾಯ ಅಧಿಕಾರಿಗಳು ಮತ್ತು ಪುರಸಭೆ ಅಧಿಕಾರಿಗಳ ಮುಂದೆ ಬಹುಕಾಲದಿಂದ ಈ ಪ್ರಕರಣಗಳು ಬಾಕಿ ಉಳಿದಿದ್ದವು. ಕಾನೂನು ಪಾಲಿಸಿ ಕ್ರಮ ಕೈಗೊಳ್ಳಲಾಗಿದೆ” ಎಂದು ಹೇಳಿದ್ದಾರೆ.

'ಬುಲ್ಡೋಜರ್‌' ರಾಜಕೀಯ ವಿವಾದ ಆರಂಭವಾಗಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು “ನೋಡಿ ಮಾಧ್ಯಮಗಳು ಅದರ ಬಗ್ಗೆ ಏನು ಹೇಳುತ್ತಿವೆ ಎಂದು ನನಗೆ ಗೊತ್ತಿಲ್ಲ. ವಿವಿಧ ಮಾಧ್ಯಮ ಚಾನೆಲ್‌ಗಳಲ್ಲಿ ಏನು ನಡೆಯುತ್ತಿದೆ ಎಂದು ಉತ್ತರಿಸಲು ನನಗೆ ನಿಜವಾಗಿಯೂ ಆಸಕ್ತಿ ಇಲ್ಲ. ಆದರೆ ಖರ್‌ಗೌನ್‌ ಜಿಲ್ಲೆಯಲ್ಲಿನ ಅತಿಕ್ರಮಣವನ್ನು ತೆರವುಗೊಳಿಸುವ ವಿಷಯದಲ್ಲಿ ಕಾನೂನು ಪಾಲಿಸಲಾಗಿದೆ ಎಂದು ನಾನು ನಿಮಗೆ ಸಂಪೂರ್ಣ ಖಚಿತವಾಗಿ ಹೇಳಬಲ್ಲೆ. ನಾವು ಸಂಬಂಧಪಟ್ಟ ಅತಿಕ್ರಮಣದಾರರಿಗೆ ನೋಟಿಸ್ ನೀಡಿ ಕಾನೂನಿನ ಪ್ರಕಾರವೇ ಅತಿಕ್ರಮ ಕಟ್ಟಡಗಳನ್ನು ತೆರವುಗೊಳಿಸಿದ್ದೇವೆ” ಎಂದಿದ್ದಾರೆ.

Also Read
ಪ್ರತಿಭಟನಾಕಾರರ ಮನೆ ಧ್ವಂಸ: ಮಧ್ಯ ಪ್ರವೇಶಿಸುವಂತೆ ಸಿಜೆಐಗೆ ನಿವೃತ್ತ ನ್ಯಾಯಮೂರ್ತಿಗಳ ಪತ್ರ

ಮಧ್ಯಪ್ರದೇಶ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ನಿಯಂತ್ರಣ ಹಾಗೂ ಮುಟ್ಟುಗೋಲು ಮಸೂದೆ- 2021ನ್ನು ಮಂಡಿಸುವ ಅಗತ್ಯತೆ ಕುರಿತು ಮಾತನಾಡುತ್ತಾ ಎ.ಜಿ. ಸಿಂಗ್‌ “ಸಾರ್ವಜನಿಕ ಆಸ್ತಿಯಲ್ಲಿ ಸಾರ್ವಜನಿಕ ಹಣವನ್ನು ಸಾಕಷ್ಟು ತೊಡಗಿಸಲಾಗಿರುತ್ತದೆ. ನಾವು, ನೀವು ತೆರಿಗೆದಾರರಾಗಿ ತೆರಿಗೆಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ. ಹಾಗೆ ಕಷ್ಟಪಟ್ಟುಗಳಿಸಿದ ಆದಾಯದಿಂದ ಸಾರ್ವಜನಿಕ ಆಸ್ತಿ ರೂಪುಗೊಂಡಿರುತ್ತದೆ. ಹಾಗಾಗಿ ಆ ಆಸ್ತಿಗೆ ಯಾವುದೇ ಹಾನಿ ಉಂಟಾದರೆ ಅದು ನಾಗರಿಕರಿಗೆ ನಷ್ಟ, ಅದು ನಿಮಗೂ ನಮಗೂ ನಷ್ಟ...ಅದನ್ನು ಸೂಕ್ತ ರೀತಿಯಲ್ಲಿ ರಕ್ಷಣೆ ಮಾಡಲೆಂದು ಕಾನೂನು ರೂಪಿಸಲಾಗಿದೆ” ಎಂದಿದ್ದಾರೆ.

ಸಂದರ್ಶನದ ಪೂರ್ಣ ವಿವರಗಳಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ಜಾಲತಾಣದ ʼಲಿಂಕ್‌ʼ ಗಮನಿಸಿ.

Related Stories

No stories found.
Kannada Bar & Bench
kannada.barandbench.com