ಸಂವಿಧಾನದ 370ನೇ ವಿಧಿ ಅಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಶುಕ್ರವಾರ ಹೇಳಿದ್ದಾರೆ.
ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದೆದುರು ಹಿರಿಯ ವಕೀಲ ರಾಜು ರಾಮಚಂದ್ರನ್ ಅವರು ಅರ್ಜಿಗಳನ್ನು ಉಲ್ಲೇಖಿಸಿದರು. ಆಗ ಸಿಜೆಐ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಸಂವಿಧಾನದ 370ನೇ ವಿಧಿ ರದ್ದುಗೊಳಿಸಿ, ಕಾಶ್ಮೀರ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಬದಲಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ 20ಕ್ಕೂ ಹೆಚ್ಚು ಅರ್ಜಿಗಳು ವಿಚಾರಣೆ ಎದುರುನೋಡುತ್ತಿವೆ.
ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವಂತೆ ಕೆಲ ಅರ್ಜಿದಾರರು ಮಾಡಿದ ವಿನಂತಿಯ ಹೊರತಾಗಿಯೂ ಮಾರ್ಚ್ 2020ರಲ್ಲಿ, ಸುಪ್ರೀಂ ಕೋರ್ಟ್‌ನ 5 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಪ್ರಕರಣವನ್ನು ಏಳು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸದಿರಲು ನಿರ್ಧರಿಸಿತ್ತು, 370ನೇ ವಿಧಿಯನ್ನು ವ್ಯಾಖ್ಯಾನಿಸುವ, ಐವರು ಸದಸ್ಯರ ನ್ಯಾಯಪೀಠ ನಿರ್ಣಯಿಸಿದ್ದ ಪ್ರೇಮನಾಥ್ ಕೌಲ್ ಮತ್ತು ಜಮ್ಮು- ಕಾಶ್ಮೀರ ಸರ್ಕಾರ ನಡುವಣ ಪ್ರಕರಣ ಹಾಗೂ ಸಂಪತ್ ಪ್ರಕಾಶ್ ಮತ್ತು ಜಮ್ಮು ಕಾಶ್ಮೀರ ಸರ್ಕಾರ ನಡುವಣ ಪ್ರಕರಣಗಳ ತೀರ್ಪುಗಳು ಒಂದಕ್ಕೊಂದು ಸಂಘರ್ಷಾತ್ಮಕ ನೆಲೆಯಲ್ಲಿವೆ ಎಂದು ಅರ್ಜಿದಾರರು ತಿಳಿಸಿದ್ದರು.
ಆದರೆ ಈ ಎರಡು ತೀರ್ಪುಗಳ ನಡುವೆ ಯಾವುದೇ ಸಂಘರ್ಷವಿಲ್ಲಎಂದು ಹೇಳಿದ ಐವರು ಸದಸ್ಯರ ನ್ಯಾಯಪೀಠ, ಪ್ರಕರಣವನ್ನು ವಿಸೃತ ಪೀಠಕ್ಕೆ ವರ್ಗಾಯಿಸಲು ನಿರಾಕರಿಸಿತ್ತು.