ಪೋಕ್ಸೊ ನ್ಯಾಯಾಲಯಗಳ ಸಾಕ್ಷಿ ಕಟಕಟೆ ನಾಯಿಗೂಡಿಗಿಂತಲೂ ಕಡೆ; ಮಕ್ಕಳಿಗೆ ಅಹಿತಕರ: ಕೇರಳ ಹೈಕೋರ್ಟ್ ಬೇಸರ

"ಅಲ್ಲಿ ಅವರ (ಸಂತ್ರಸ್ತ ಮಕ್ಕಳ) ಮುಖಗಳಷ್ಟೇ ಗೋಚರಿಸುತ್ತವೆ. ನಾಯಿ ಗೂಡಿಗಾದರೋ ಬೆಳಕು ಒಳಬರಲು ಅನುವಾಗುವಂತೆ ಕಂಬಿಗಳಿರುತ್ತವೆ" ಎಂದು ನ್ಯಾ. ಸೋಫಿ ಥಾಮಸ್‌ ಬೇಸರ ವ್ಯಕ್ತಪಡಿಸಿದರು.
ನ್ಯಾಯಮೂರ್ತಿ ಸೋಫಿ ಥಾಮಸ್ ಮತ್ತು ಕೇರಳ ಹೈಕೋರ್ಟ್
ನ್ಯಾಯಮೂರ್ತಿ ಸೋಫಿ ಥಾಮಸ್ ಮತ್ತು ಕೇರಳ ಹೈಕೋರ್ಟ್
Published on

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ- 2012 (ಪೋಕ್ಸೊ ಕಾಯಿದೆ) ಅಡಿಯ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಲಯಗಳಲ್ಲಿ ಲೈಂಗಿಕ ಅಪರಾಧಗಳಿಗೆ ತುತ್ತಾದ ಅಪ್ರಾಪ್ತ ಸಂತ್ರಸ್ತರು ತಮ್ಮ ಹೇಳಿಕೆ ದಾಖಲಿಸುವ ಪರಿಸ್ಥಿತಿಯ ಬಗ್ಗೆ ಕೇರಳ ಹೈಕೋರ್ಟ್ ಸೋಮವಾರ ಕಳವಳ ವ್ಯಕ್ತಪಡಿಸಿದೆ.

ಪೋಕ್ಸೊ ಕಾಯಿದೆಯಡಿಯ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿ ಸೋಫಿ ಥಾಮಸ್ ಅವರಿದ್ದ ಏಕಸದಸ್ಯ ಪೀಠ ಈ ವಿಚಾರ ತಿಳಿಸಿದೆ.

ಸಾಕ್ಷ್ಯ ನುಡಿಯುವ ಪರಿಸ್ಥಿತಿ ಭಯಾನಕವಾಗಿವೆ ಎಂದು ನ್ಯಾಯಮೂರ್ತಿಗಳು ಆತಂಕ ವ್ಯಕ್ತಪಡಿಸಿದರು. "ಪೋಕ್ಸೊ ನ್ಯಾಯಾಲಯಗಳಲ್ಲಿ, ಮಕ್ಕಳು ಸಾಕ್ಷ್ಯ ನುಡಿಯಲೆಂದು ಸಾಕ್ಷಿ ಕಟಕಟೆಯಿರುತ್ತದೆ. ಸಂತ್ರಸ್ತರಿಗೆ ಮೀಸಲಾಗಿರುವ ಇದು ನಾಯಿಗೂಡಿನಂತಿರುತ್ತದೆ. ಮಕ್ಕಳು ಅದರೊಳಗೆ ಹೋಗಲು ಹೆದರುತ್ತಾರೆ. ಅವರನ್ನು ಆ ಪಂಜರಕ್ಕೆ ಹೋಗುವಂತೆ ಹೇಳುವುದು ತುಂಬಾ ಆಘಾತಕಾರಿ "ಎಂದು ನ್ಯಾಯಮೂರ್ತಿ ಥಾಮಸ್ ವಿವರಿಸಿದರು.

ಒಮ್ಮೆ ತಾವು ಪೋಕ್ಸೊ ನ್ಯಾಯಾಲಯದಲ್ಲಿದ್ದಾಗ, ಆರೋಪಿಯನ್ನು ಸಾಕ್ಷಿ ಕೋಣೆಯಲ್ಲಿ ನಿಲ್ಲಿಸಿ ಮಕ್ಕಳನ್ನು ಹೊರಗೆ ಇರಿಸುವಂತೆ ನ್ಯಾಯಾಲಯದ ಸಿಬ್ಬಂದಿಗೆ ಹೇಳಿದ್ದನ್ನು ಅವರು ನೆನಪಿಸಿಕೊಂಡರು.

ಸಾಕ್ಷಿ ಕೋಣೆಗಳು ತುಂಬಾ ನಿರ್ಬಂಧಿತವಾಗಿದ್ದು ನಾಯಿ ಗೂಡಿನಲ್ಲಿರುವಷ್ಟೂ ಬೆಳಕು ಅಲ್ಲಿರುವುದಿಲ್ಲ ಎಂದು ನ್ಯಾಯಮೂರ್ತಿಗಳು ನುಡಿದರು.

"ಅಲ್ಲಿ ಅವರ (ಸಂತ್ರಸ್ತ ಮಕ್ಕಳ) ಮುಖಗಳಷ್ಟೇ ಗೋಚರಿಸುತ್ತವೆ. ನಾಯಿ ಗೂಡಿಗಾದರೋ ಬೆಳಕು ಒಳ ಬರಲು ಅನುವಾಗುವ ಕಂಬಿಗಳಿವೆ. ಇಲ್ಲಿ ಮಕ್ಕಳನ್ನು ಮುಚ್ಚಿದ ಗೂಡಿನಂತಹದರಲ್ಲಿ ಇರಿಸಲಾಗುತ್ತದೆ. ಇದರಿಂದಾಗಿ ಆರೋಪಿಗಳು ಅವರನ್ನು ನೋಡಲು ಸಾಧ್ಯವಾಗದಂತೆ ಮಕ್ಕಳ ಮುಖವಷ್ಟೇ ಗೋಚರವಾಗುತ್ತಿರುತ್ತದೆ " ಎಂದು ನ್ಯಾ. ಸೋಫಿ ಥಾಮಸ್‌ ತಿಳಿಸಿದರು.

ಕುತೂಹಲಕಾರಿ ಸಂಗತಿಯೆಂದರೆ, ಕಳೆದ ವರ್ಷವಷ್ಟೇ ಕೇರಳದ ಎರ್ನಾಕುಲಂ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಮೊದಲ ಮಕ್ಕಳ ಸ್ನೇಹಿ ಪೋಕ್ಸೊ ನ್ಯಾಯಾಲಯ ಆರಂಭವಾಗಿತ್ತು.

ಸಂತ್ರಸ್ತ ಮಕ್ಕಳು ಆರಾಮದಿಂದ, ಸುರಕ್ಷಿತವಾಗಿ ಸಾಕ್ಷ್ಯ ನುಡಿಯಲು ಅಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ ಆಟದ ಪ್ರದೇಶ, ಪ್ರತ್ಯೇಕ ಶೌಚಾಲಯ, ಊಟದ ಸೌಲಭ್ಯದಂತಹ ಅನೇಕ ವೈಶಿಷ್ಟ್ಯಗಳು ಅಲ್ಲಿದ್ದವು.

ಕರ್ನಾಟಕ, ಗೋವಾ, ತೆಲಂಗಾಣ ಹಾಗೂ ದೆಹಲಿಯಲ್ಲಿ ಈಗಾಗಲೇ ಇದೇ ರೀತಿಯ ಕ್ರಮ ಕೈಗೊಳ್ಳಲಾಗಿದೆ.

Kannada Bar & Bench
kannada.barandbench.com