ಮಹಿಳೆಗೆ ಕೆಲಸ ಮಾಡುವ ಅರ್ಹತೆ ಮತ್ತು ವಿದ್ಯಾಭ್ಯಾಸ ಇದ್ದರೂ ಕೆಲಸ ಮಾಡುವ ಅಥವಾ ಮನೆಯಲ್ಲೇ ಉಳಿಯುವ ಆಯ್ಕೆ ಆಕೆಗೆ ಬಿಟ್ಟದ್ದು ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಒತ್ತಿಹೇಳಿದೆ.
ಒಬ್ಬ ಮಹಿಳೆ ಪದವೀಧರಳು ಎಂಬ ಕಾರಣಕ್ಕೆ ಆಕೆ ಕೆಲಸ ಮಾಡಬೇಕು, ಮನೆಯಲ್ಲಿರಬಾರದು ಎನ್ನಲಾಗದು ಎಂದು ನ್ಯಾಯಮೂರ್ತಿ ಭಾರತಿ ಡಾಂಗ್ರೆ ಹೇಳಿದರು.
ʼಗೃಹಿಣಿ (ಆರ್ಥಿಕತೆಗೆ) ಕೊಡುಗೆ ನೀಡಬೇಕು ಎಂಬುದನ್ನು ನಮ್ಮ ಸಮಾಜ ಇನ್ನೂ ಒಪ್ಪಿಲ್ಲ. ಕೆಲಸ ಮಾಡುವುದು ಮಹಿಳೆಯ ಆಯ್ಕೆಯಾಗಿದ್ದು ಆಕೆ (ಕಕ್ಷೀದಾರೆ) ಪದವೀಧರಳು ಎಂಬ ಕಾರಣಕ್ಕೆ ಆಕೆ ಮನೆಯಲ್ಲಿ ಕುಳಿತುಕೊಳ್ಳಬಾರದು ಎಂದರ್ಥವಲ್ಲ” ಎಂದು ನ್ಯಾಯಾಲಯ ಹೇಳಿತು.
“ಇವತ್ತು ನಾನ ನ್ಯಾಯಮೂರ್ತಿ. ನಾಳೆ ನಾನು ಮನೆಯಲ್ಲೇ ಉಳಿಯಬಹುದು. ನಾನು ನ್ಯಾಯಮೂರ್ತಿಯಾಗಲು ಅರ್ಹತೆ ಹೊಂದಿದ್ದು ಹಾಗಾಗಿ ಮನೆಯಲ್ಲಿ ಕೂರುವಂತಿಲ್ಲ ಎಂದು ನೀವು ಹೇಳಲು ಸಾಧ್ಯವೇ?” ಎಂದು ಪ್ರತಿವಾದಿಗಳನ್ನು ನ್ಯಾಯಾಲಯ ಪ್ರಶ್ನಿಸಿತು.
ಸ್ಥಿರ ಆದಾಯ ಗಳಿಸುತ್ತಿರುವ ಪತ್ನಿಗೆ ಜೀವನಾಂಶ ನೀಡುವಂತೆ ಪುಣೆಯ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಪರಿಶೀಲನಾ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಪತ್ನಿಯು ವೇತನದಾರಳಾಗಿದ್ದು ತನಗೆ ಯಾವುದೇ ಆದಾಯ ಮೂಲವಿಲ್ಲ ಎಂದು ತೋರಿಸಿದ್ದಾಳೆ ಎನ್ನುವುದು ಪತಿಯ ಆಕ್ಷೇಪವಾಗಿದೆ. ಪ್ರಕರಣದ ವಿಚಾರಣೆ ಮುಂದಿನ ವಾರಕ್ಕೆ ಮುಂದೂಡಲಾಗಿದೆ.