ದಯಾಮರಣಕ್ಕಾಗಿ ಯುರೋಪ್‌ಗೆ ತೆರಳುವ ಸ್ನೇಹಿತನ ಪ್ರಯಾಣ ತಡೆಯಲು ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋದ ಬೆಂಗಳೂರು ಮಹಿಳೆ

ದೀರ್ಘಕಾಲದ ನರ ಉರಿಯೂತ ಕಾಯಿಲೆಯಿಂದ ಬಳಲುತ್ತಿರುವ ಸ್ನೇಹಿತ ಸ್ವಿಜರ್ಲೆಂಡ್ನಲ್ಲಿ ದಯಾಮರಣಕ್ಕೆ ತುರ್ತಾಗಲು ಬಯಸಿದ್ದಾರೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ದಯಾಮರಣಕ್ಕಾಗಿ ಯುರೋಪ್‌ಗೆ ತೆರಳುವ ಸ್ನೇಹಿತನ ಪ್ರಯಾಣ ತಡೆಯಲು ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋದ ಬೆಂಗಳೂರು ಮಹಿಳೆ
Published on

ದಯಾಮರಣಕ್ಕೆ ಒಳಗಾಗಲು ತನ್ನ 48 ವರ್ಷದ ಸ್ನೇಹಿತ ಕೈಗೊಂಡಿರುವ ಯುರೋಪ್ ಪ್ರವಾಸ ತಡೆಯುವಂತೆ ಕೋರಿ ಬೆಂಗಳೂರಿನ ಮಹಿಳೆಯೊಬ್ಬರು ಇತ್ತೀಚೆಗೆ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ರೋಗಿ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದು ಗುಣಮುಖರಾಗದ ಹಂತ ತಲುಪಿದ್ದಾರೆ ಎಂದು ವೈದ್ಯಕೀಯ ಮಂಡಳಿ ಸೂಚಿಸದ ಹೊರತು ದಯಾಮರಣ ನೀಡುವ ವಿಧಾನ ಭಾರತದಲ್ಲಿ ಇಲ್ಲ.

ಮ್ಯಾಲ್ಜಿಕ್ ಎನ್ಸೆಫಾಲೋಮಿಎಲಿಟಿಸ್ ಅಥವಾ ಕ್ರೋನಿಕ್ ಫೆಟಿಗ್ ಸಿಂಡ್ರೋಮ್ ಎಂಬ ಸಂಕೀರ್ಣ, ದೇಹವನ್ನು ದುರ್ಬಲಗೊಳಿಸುವ, ದೀರ್ಘಾವಧಿಯ ನರ ಉರಿಯೂತದ ಕಾಯಿಲೆ 2014ರಲ್ಲಿ ಮೊದಲ ಬಾರಿಗೆ ಈ ವ್ಯಕ್ತಿಗೆ ಕಂಡು ಬಂದಿತ್ತು. , ಅವರ ಸ್ಥಿತಿ ತುಂಬಾ ಹದಗೆಟ್ಟಿದೆ. ಈಗ ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ತನ್ನ ಮಾನಸಿಕ ವಿಶ್ಲೇಷಣೆಗಾಗಿ, ವೈದ್ಯರ ನೆರವಿನ ಆತ್ಮಹತ್ಯೆಗೆ ಅವಕಾಶ ಕಲ್ಪಿಸುವ ಸ್ವಿಜರ್‌ಲೆಂಡ್‌ಗೆ ಸ್ನೇಹಿತ ಈಗಾಗಲೇ ಒಮ್ಮೆ ಪಯಣಿಸಿದ್ದಾರೆ. ತನಗೆ ಗೊತ್ತಿರುವ ಮಾಹಿತಿ ಪ್ರಕಾರ ಅವರ ದಯಾಮರಣದ ಅರ್ಜಿಯನ್ನು ಅಲ್ಲಿ ಸ್ವೀಕರಿಸಲಾಗಿದೆ. ಈಗ ಅಂತಿಮ ತೀರ್ಮಾನಕ್ಕಷ್ಟೇ ಕಾಯುತ್ತಿದ್ದಾರೆ. ಆಗಸ್ಟ್‌ ಅಂತ್ಯದ ಹೊತ್ತಿಗೆ ಈ ಕುರಿತ ನಿರ್ಧಾರ ಹೊರಬೀಳಲಿದೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.

Also Read
ಮಾನಸಿಕ ಆರೋಗ್ಯ ಸಮಸ್ಯೆ ಇರುವವರ ವಿರುದ್ಧ ಶಿಸ್ತು ಪ್ರಕ್ರಿಯೆ ಜಾರಿಯು ಪರೋಕ್ಷ ತಾರತಮ್ಯದ ಮುಖ: ಸುಪ್ರೀಂ ಕೋರ್ಟ್‌

ಭಾರತ ಅಥವಾ ವಿದೇಶದಲ್ಲಿ ರೋಗಿಗೆ ಉತ್ತಮ ಚಿಕಿತ್ಸೆ ಕೊಡಿಸಲು ಹಣಕಾಸಿನ ಯಾವುದೇ ನಿರ್ಬಂಧಗಳಿಲ್ಲ. ಆದರೆ ಅವರೀಗ ದಯಾಮರಣಕ್ಕೆ ತೆರಳುವ ತಮ್ಮ ನಿರ್ಧಾರಕ್ಕೆ ಕಟ್ಟುಬಿದ್ದಿದ್ದಾರೆ. ಇದು ಸ್ನೇಹಿತನ ವೃದ್ಧ ಪೋಷಕರ ಮೇಲೆ ಕೂಡ ಶೋಚನೀಯ ಪರಿಣಾಮ ಬೀರುತ್ತದೆ. ಅವರ ಆರೋಗ್ಯ ಸ್ಥಿತಿ ಸುಧಾರಿಸುವ ಆಶಾಕಿರಣ ಇದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಪ್ರಯಾಣ ಅನುಮತಿಗಾಗಿ ಭಾರತೀಯ ಮತ್ತು ವಿದೇಶಿ ಅಧಿಕಾರಿಗಳೆದುರು ಸುಳ್ಳು ಹೇಳಿರುವುದರಿಂದ ಸ್ನೇಹಿತನ ವಲಸೆ ಅನುಮತಿಯನ್ನು ತಿರಸ್ಕರಿಸಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರಿಗೆ ನಿರ್ದೇಶನ ನೀಡಬೇಕು. ಅಂತೆಯೇ ತನ್ನ ಸ್ನೇಹಿತನ ಆರೋಗ್ಯ ಪರೀಕ್ಷಿಸುವುದಕ್ಕಾಗಿ ವೈದ್ಯಕೀಯ ಮಂಡಳಿ ರಚಿಸಲು ಮತ್ತು ಅವರ ವಿಲಕ್ಷಣ ಆರೋಗ್ಯ ಸ್ಥಿತಿ ಪರಿಗಣಿಸಿ ಅಗತ್ಯ ನೆರವು ನೀಡಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ವಿನಂತಿಸಿದ್ದಾರೆ. ವಕೀಲ ಸುಭಾಷ್ ಚಂದ್ರನ್ ಕೆ ಆರ್ ಅವರ ಮೂಲಕ ಸಲ್ಲಿಸಿರುವ ಅರ್ಜಿ ಈ ವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ.

Kannada Bar & Bench
kannada.barandbench.com