ಸ್ತ್ರೀಯರು ದೇಶದ ಅತಿದೊಡ್ಡ ಅಲ್ಪಸಂಖ್ಯಾತರು ಎಂದ ಸುಪ್ರೀಂ: ಮಹಿಳಾ ಮೀಸಲಾತಿ ಸಂಬಂಧ ಕೇಂದ್ರಕ್ಕೆ ನೋಟಿಸ್

ಹೊಸದಾಗಿ ಕ್ಷೇತ್ರ ಪುನರ್ವಿಂಗಡಣೆಗಾಗಿ ಕಾಯದೆ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರುವಂತೆ ಕೋರಿ ಕಾಂಗ್ರೆಸ್ ನಾಯಕಿ ಡಾ. ಜಯಾ ಠಾಕೂರ್ ಅರ್ಜಿ ಸಲ್ಲಿಸಿದ್ದರು.
Women's Reservation Bill
Women's Reservation Bill
Published on

ಲೋಕಸಭೆ, ರಾಜ್ಯ ವಿಧಾನಸಭೆಗಳು ಹಾಗೂ ದೆಹಲಿ ವಿಧಾನಸಭೆಯಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವುದನ್ನು ಕಡ್ಡಾಯಗೊಳಿಸುವ ಮಹಿಳಾ ಮೀಸಲಾತಿ ಕಾಯಿದೆ ಜಾರಿಗೆ ತರುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ಮೀಸಲಾತಿ ಕುರಿತಂತೆ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಆರ್‌ ಮಹಾದೇವನ್‌ ಅವರಿದ್ದ ಪೀಠ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿತು. ಎಲ್ಲಾ ನಾಗರಿಕರು ರಾಜಕೀಯ ಮತ್ತು ಸಾಮಾಜಿಕ ಸಮಾನತೆಗೆ ಅರ್ಹರು ಎಂದು ಸಂವಿಧಾನದ ಪೀಠಿಕೆ ಹೇಳುತ್ತದೆ. ದೇಶದ ಅತಿದೊಡ್ಡ ಅಲ್ಪಸಂಖ್ಯಾತರು ಮಹಿಳೆಯರು. ಮಹಿಳೆಯರ ಸಂಖ್ಯೆ ಶೇ 48ರಷ್ಟಿದೆ. ಮಹಿಳೆಯರಿಗೆ ರಾಜಕೀಯ ಸಮಾನತೆ ದೊರಕಿಸಿಕೊಡಲು ಈ ಮೀಸಲಾತಿ ಅಗತ್ಯವಿದೆ ಎಂದು ನ್ಯಾ. ನಾಗರತ್ನ ಮೌಖಿಕವಾಗಿ ತಿಳಿಸಿದರು.

Also Read
ಸಾರ್ವತ್ರಿಕ ಚುನಾವಣೆಗೂ ಮುನ್ನ ಮಹಿಳಾ ಮೀಸಲಾತಿ ಜಾರಿಗೆ ಕೋರಿಕೆ: ಸುಪ್ರೀಂ ಕೋರ್ಟ್‌ಗೆ ಕಾಂಗ್ರೆಸ್ ನಾಯಕಿ ಪಿಐಎಲ್

ಹೊಸದಾಗಿ ಕ್ಷೇತ್ರ ಪುನರ್ವಿಂಗಡಣೆಗಾಗಿ ಕಾಯದೆ ಮಹಿಳಾ ಮೀಸಲಾತಿ ಮಸೂದೆ 2024ನ್ನು ಜಾರಿಗೆ ತರುವಂತೆ  ಕೋರಿ ಕಾಂಗ್ರೆಸ್ ನಾಯಕಿ ಡಾ. ಜಯಾ ಠಾಕೂರ್ ಅರ್ಜಿ ಸಲ್ಲಿಸಿದ್ದರು.

ಜಯಾ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಶೋಭಾ ಗುಪ್ತಾ ಅವರು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳ ನಂತರವೂ ಮಹಿಳೆಯರು ರಾಜಕೀಯ ಪ್ರಾತಿನಿಧ್ಯ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕಾಗಿರುವುದು ದುರದೃಷ್ಟಕರ. ಒಟ್ಟು ಸ್ಥಾನಗಳ ಕೇವಲ 1/3 ರಷ್ಟು ಮೀಸಲಾತಿ ಸಾಕಿದ್ದರೂ ಕೆಲವು ದತ್ತಾಂಶಗಳು ಅಗತ್ಯ ಜನಗಣತಿ ಮಾಡಬೇಕಿದೆ ಎಂದು ಸರ್ಕಾರ ಹೇಳುತ್ತಿದೆ ಎಂದರು.

ಇಂತಹ ನೀತಿ ನಿರ್ಧಾರಕ ವಿಚಾರಗಳಲ್ಲಿ ಮಧ್ಯಪ್ರವೇಶಿಸುವುದಕ್ಕೆ ನ್ಯಾಯಾಲಯಕ್ಕೆ ಕೆಲ ಮಿತಿಗಳಿವೆ ಎಂದ ಸುಪ್ರೀಂ ಕೋರ್ಟ್‌ ಈ ಸಂಬಂಧ ಕೇಂದ್ರದ ಪ್ರತಿಕ್ರಿಯೆ ಕೇಳಿತು.

ಮಹಿಳಾ ಮೀಸಲಾತಿ ಮಸೂದೆಯನ್ನು  ಲೋಕಸಭೆ  ಸೆಪ್ಟೆಂಬರ್ 20, 2023ರಂದು ಮತ್ತು  ರಾಜ್ಯಸಭೆ  ಅದೇ ವರ್ಷ ಸೆಪ್ಟೆಂಬರ್ 21ರಂದು ಅಂಗೀಕರಿಸಿತ್ತು. ನಂತರ  ಸೆಪ್ಟೆಂಬರ್ 28, 2023ರಂದು ರಾಷ್ಟ್ರಪತಿಗಳ ಅಂಕಿತ ದೊರೆತಿತ್ತು.

ಈ ಮಸೂದೆಯು ಭಾರತದ ಸಂವಿಧಾನಕ್ಕೆ 334ಎ ವಿಧಿಯನ್ನು ಸೇರಿಸಿತ್ತು. ಈ ವಿಧಿಯ ಪ್ರಕಾರ ಮುಂದಿನ ಜನಗಣತಿಯ ಮಾಹಿತಿ ಆಧರಿಸಿ ಕ್ಷೇತ್ರ ಮರುವಿಂಗಡಣೆ ಮಾಡಿ ಬಳಿಕ ಮೀಸಲಾತಿ ಜಾರಿಗೆ ತರುವಂತೆ ಕೋರಿತ್ತು.

Also Read
ಇದೇ ಮೊದಲ ಬಾರಿಗೆ ತನ್ನ ಸಿಬ್ಬಂದಿ ನೇಮಕಾತಿಯಲ್ಲಿ ಮೀಸಲಾತಿ ಜಾರಿಗೆ ತಂದ ಸುಪ್ರೀಂ

ಆದರೆ 334 ಎ ವಿಧಿಯಿಂದ "after an exercise of delimitation is undertaken for this purpose..." (ʼಮಹಿಳಾ ಮೀಸಲಾತಿ ಉದ್ದೇಶಕ್ಕಾಗಿ ಕ್ಷೇತ್ರ ಪುನರ್‌ವಿಂಗಡಣೆ ಮಾಡಿದ ನಂತರ) ಎಂಬ ಪದಗಳನ್ನು ಕೈಬಿಡುವಂತೆ ಜಯಾ ಅವರ ಅರ್ಜಿ ಕೋರಿತ್ತು. ಹೊಸದಾಗಿ ಕ್ಷೇತ್ರ ಪುನರ್‌ವಿಂಗಡಣೆಗಾಗಿ ಕಾಯದೆ ಮೀಸಲಾತಿ ಜಾರಿಗೆ ತರಬೇಕು ಎಂದು ಮನವಿ ಮಾಡಲಾಗಿತ್ತು. 

2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರಬೇಕೆಂಬ ಕೋರಿಕೆಯೊಂದಿಗೆ ಈ ಅರ್ಜಿಯನ್ನು 2023 ರಲ್ಲಿಯೇ ಸಲ್ಲಿಸಲಾಗಿತ್ತು. ಆದರೆ,  2025 ರಲ್ಲಿ ಅದನ್ನು ಮತ್ತೆ ಸಲ್ಲಿಸಲಾಗಿದ್ದು ಇಂದು ಮೊದಲ ಬಾರಿಗೆ ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.

Kannada Bar & Bench
kannada.barandbench.com