ವಿವಾಹಿತ ಮಹಿಳೆಯರ ವಿರುದ್ಧ ಕ್ರೌರ್ಯ ಎಸಗಿದವರನ್ನು ಶಿಕ್ಷಿಸುವ ಐಪಿಸಿ ಸೆಕ್ಷನ್ 498 ಎ ಅಡಿ ಸಾಂಪ್ರದಾಯಿಕ ಇಲ್ಲವೇ ಧಾರ್ಮಿಕ ಕಾನೂನಿನ ಲೇಪನ ಹೊಂದಿರುವಂತಹ ವೈವಾಹಿಕ ಮಹಿಳೆಯರಿಗೆ ಕೂಡ ರಕ್ಷಣೆ ಒದಗಿಸಲಾಗಿದೆ ಎಂದು ಕೇರಳ ಹೈಕೋರ್ಟ್ ಈಚೆಗೆ ಹೇಳಿದೆ.
ನಿಖಾ ಆದ ಕೆಲವೇ ದಿನಗಳಲ್ಲಿ 18 ವರ್ಷದ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣ ಎನ್ನಲಾದ ವ್ಯಕ್ತಿಯೊಬ್ಬನ ವಿರುದ್ಧ ಮೃತ ಯುವತಿಯ ಕುಟುಂಬಸ್ಥರು ಹೂಡಿದ್ದ ಪ್ರಕರಣದ ವಿಚಾರಣೆ ವೇಳೆ ನ್ಯಾ. ಸೋಫಿ ಥಾಮಸ್ ಈ ವಿಚಾರ ತಿಳಿಸಿದರು.
ಪ್ರಸ್ತುತ ಪ್ರಕರಣದ ವೈವಾಹಿಕ ಒಪ್ಪಂದ ಕಾನೂನುಬದ್ಧ ವಿವಾಹವಾಗದೇ ಇರುವುದರಿಂದ ಐಪಿಸಿ ಸೆಕ್ಷನ್ 498 ಎ ಅಡಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಕಾನೂನುಬದ್ಧವಾಗಿ ವಿವಾಹವಾದ ಪತ್ನಿಗೆ ಮಾತ್ರ ಐಪಿಸಿ ಸೆಕ್ಷನ್ 498 ಎ ಅನ್ವಯವಾಗುತ್ತದೆ ಎಂದು ಪ್ರಕರಣದ ಆರೋಪಿಗಳು ವಾದಿಸಿದ್ದರು.
ಇದನ್ನು ಒಪ್ಪದ ನ್ಯಾಯಾಲಯ ನಾರಾಯಣನ್ ಮತ್ತು ಕೇರಳ ಸರ್ಕಾರ ಪ್ರಕರಣದಲ್ಲಿ ಹೈಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ, “ಕಾನೂನುಬದ್ಧ ಮದುವೆ ಎಂಬ ಲೇಪನ ಹೊಂದಿರುವ ಆದರೆ ನಂತರದ ಕಾಲಘಟದಲ್ಲಿ ಕಾನೂನಿನ ಕಣ್ಣಿನಲ್ಲಿ ವಿವಾಹದ ಮಾನ್ಯತೆ ಪಡೆಯದ, ಧಾರ್ಮಿಕ ಇಲ್ಲವೇ ಸಾಂಪ್ರದಾಯಿಕವಾಗಿ ಮದುವೆಯಾದ ಮಹಿಳೆ ಕೂಡ ಐಪಿಸಿ ಸೆಕ್ಷನ್ 498 ಎ ಅಡಿ ರಕ್ಷಣೆ ಪಡೆಯಬಹುದು” ಎಂದು ವಿವರಿಸಿತು.
ವೈವಾಹಿಕ ಸಂಬಂಧ ಎಂಬುದು ಕಾನೂನುಬದ್ಧತೆಯ ವಿಚಾರದಲ್ಲಿ ವಿವಾದಕ್ಕೀಡಾಗಿದ್ದರೂ, ಕ್ರೌರ್ಯ ನಡೆದಿದ್ದಾಗ ಐಪಿಸಿ ಸೆಕ್ಷನ್ 498 ಎ ಅಡಿ ಪ್ರಕರಣ ಹೂಡುವುದನ್ನು ತಡೆಯುವುದಿಲ್ಲ ಎಂದು ರೀಮಾ ಅಗರ್‌ವಾಲ್ ಮತ್ತು ಅನುಪಮ್ ಇನ್ನಿತರರ ನಡುವಣ ಪ್ರಕರಣದಲ್ಲಿ ನೀಡಲಾದ ತೀರ್ಪನ್ನೂ ಅದು ಉಲ್ಲೇಖಿಸಿತು.
ಹದಿನೆಂಟು ವರ್ಷದ ಯುವತಿಯೊಬ್ಬರು 2002 ರಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಕುಮ್ಮಕ್ಕು ನೀಡಿದ್ದಕಾಗಿ ಐಪಿಸಿ ಸೆಕ್ಷನ್ 498 ಎ ಅಡಿ ವಿಚಾರಣಾ ನ್ಯಾಯಾಲಯ ಮೃತಳ ಪತಿ ಸೇರಿ ಗಂಡನ ಕುಟುಂಬದ ನಾಲ್ವರನ್ನು ಅಪರಾಧಿಗಳು ಎಂದು ಘೋಷಿಸಿತ್ತು.
ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಯುವತಿಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿದ್ದಾಗಲೇ ಯುವಕನೊಂದಿಗೆ ಪ್ರೇಮಾಂಕುರವಾಗಿತ್ತು. ಧಾರ್ಮಿಕ ಮುಖಂಡರ ಸಂಧಾನ ನಡೆದು ಯುವತಿ ಹದಿನೆಂಟು ವರ್ಷ ಪೂರೈಸಿದ ಬಳಿಕ ಆರೋಪಿಯನ್ನು ಮದುವೆಯಾಗುವ ತೀರ್ಮಾನಕ್ಕೆ ಬರಲಾಗಿತ್ತು. ನಿಖಾ ಬಳಿಕ ಆಕೆಗೆ ತನ್ನ ಗಂಡನ ಮನೆಯವರಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ವಿಚಾರಣಾ ನ್ಯಾಯಾಲಯ ಗಂಡ ಸೇರಿ ನಾಲ್ವರನ್ನು ಅಪರಾಧಿಗಳೆಂದು ಘೋಷಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು. ಆದರೆ ಅಪರಾಧ ನಡೆದು ಸುಮಾರು 22 ವರ್ಷಗಳಾಗಿರುವುದಲ್ಲದೆ ಮೃತ ಯುವತಿಯ ಪತಿಗೆ ಕೇವಲ 19 ವರ್ಷ ವಯಸ್ಸಾಗಿತ್ತು ಎಂಬುದನ್ನು ಪರಿಗಣಿಸಿ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಿತು.
ಪತಿ ಮತ್ತು ಅವರ ತಾಯಿಯ ಶಿಕ್ಷೆಯನ್ನು ಮೂರು ವರ್ಷದಿಂದ 1.5 ವರ್ಷಗಳ ಜೈಲು ಶಿಕ್ಷೆಗೆ ಇಳಿಸಿದ ನ್ಯಾಯಾಲಯ ಜೊತೆಗೆ ತಲಾ ₹ 25,000 ದಂಡ ವಿಧಿಸಿತು. ಮಾವ ಮತ್ತು ಸೋದರ ಮಾವನಿಗೆ ವಿಧಿಸಿದ ಶಿಕ್ಷೆಯನ್ನೂ ಕಡಿತಗೊಳಿಸಿದ ಪೀಠ ನಾಲ್ಕು ತಿಂಗಳ ಜೈಲು ಶಿಕ್ಷೆ ಮತ್ತು ತಲಾ ₹ 10,000 ದಂಡ ಪಾವತಿಸುವಂತೆ ಆದೇಶಿಸಿತು.
ದಂಡದ ಮೊತ್ತದಲ್ಲಿ ₹50,000ವನ್ನು ಸಂತ್ರಸ್ತೆಯ ತಂದೆ ಅಥವಾ ಅವರ ಕಾನೂನುಬದ್ಧ ವಾರಸುದಾರರಿಗೆ ಪರಿಹಾರವಾಗಿ ಪಾವತಿಸುವಂತೆಯೂ ನ್ಯಾಯಾಲಯ ಸೂಚಿಸಿತು.