'ದಾಖಲೆ ನಿರಾಕರಿಸುವುದು ಆರೋಪಿಗಳ ಸ್ವಾತಂತ್ರ್ಯ ಉಲ್ಲಂಘಿಸಿದಂತಲ್ಲವೇ?' ಇ ಡಿಗೆ ಸುಪ್ರೀಂ ತರಾಟೆ

ಜಾಮೀನು ವಿಚಾರವಾಗಿ ಕಾಲ ಬದಲಾಗಿದ್ದು ಆರೋಪಿಗಳಿಗೆ ದಾಖಲೆ ಒದಗಿಸುವ ನಿಟ್ಟಿನಲ್ಲಿ ನ್ಯಾಯಾಲಯಗಳು ಮತ್ತು ತನಿಖಾ ಸಂಸ್ಥೆಗಳು ಕಠಿಣವಾಗಿ ವರ್ತಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.
Supreme Court and ED
Supreme Court and ED
Published on

ತನಿಖೆ ಸಂದರ್ಭದಲ್ಲಿ ತಾನು ಸಂಗ್ರಹಿಸಿದ ಪ್ರತಿಯೊಂದು ದಾಖಲೆಗಳನ್ನೂ ಆರೋಪಿ ಕೇಳುವಂತಿಲ್ಲ ಎಂಬ ಜಾರಿ ನಿರ್ದೇಶನಾಲಯದ (ಇ ಡಿ) ನಿಲುವನ್ನು ಸುಪ್ರೀಂ ಕೋರ್ಟ್‌ ಬುಧವಾರ ತರಾಟೆಗೆ ತೆಗೆದುಕೊಂಡಿದೆ [ಸರಳಾ ಗುಪ್ತಾ ಮತ್ತು ಜಾರಿ ನಿರ್ದೇಶನಾಲಯ ಇನ್ನಿತರರ ನಡುವಣ ಪ್ರಕರಣ].

ಕೇವಲ ತಾಂತ್ರಿಕ ಕಾರಣಕ್ಕಾಗಿ ಆರೋಪಿಗಳಿಗೆ ದಾಖಲೆಗಳನ್ನು ಹೇಗೆ ನಿರಾಕರಿಸಲು ಸಾಧ್ಯ ಎಂದು ಇ ಡಿಯನ್ನು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ , ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ಪ್ರಶ್ನಿಸಿದೆ.

Also Read
ಬಡ್ತಿ ಕೇಡರ್ ಪರೀಕ್ಷೆ ಎದುರಿಸದಿದ್ದರೆ ವೇತನ ಹೆಚ್ಚಳ ಹಕ್ಕು ಸೇನಾ ಸಿಬ್ಬಂದಿಗಿಲ್ಲ: ಸಶಸ್ತ್ರಪಡೆಗಳ ನ್ಯಾಯಮಂಡಳಿ

ಕೆಲವೊಮ್ಮೆ ಇ ಡಿ ನಿರ್ಣಾಯಕ ದಾಖಲೆಗಳನ್ನು ಇರಿಸಿಕೊಳ್ಳಬಹುದಾದರೂ ಆರೋಪ ಪಟ್ಟಿ ಸಲ್ಲಿಸಿದ ನಂತರವೂ ಆರೋಪಿಗೆ ಅಂತಹ ನಿರ್ಣಾಯಕ ದಾಖಲೆ ನೀಡುವುದಿಲ್ಲ ಎನ್ನುತ್ತೀರಿ. ಇದು ಸಂವಿಧಾನದ  21ನೇ ವಿಧಿಯಡಿ ಒದಗಿಸಲಾಗಿರುವ ಅವರ ಹಕ್ಕನ್ನು ಕಸಿದುಕೊಳ್ಳುವುದಿಲ್ಲವೇ ಎಂಬುದಾಗಿ ನ್ಯಾಯಾಲಯ ಪ್ರಶ್ನಿಸಿತು.

ಜಾಮೀನು ವಿಚಾರವಾಗಿ ಕಾಲ ಬದಲಾಗಿದ್ದು ಆರೋಪಿಗಳಿಗೆ ದಾಖಲೆ ಒದಗಿಸುವ ನಿಟ್ಟಿನಲ್ಲಿ ನ್ಯಾಯಾಲಯಗಳು ಮತ್ತು ತನಿಖಾ ಸಂಸ್ಥೆಗಳು ಕಠಿಣವಾಗಿ ವರ್ತಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೋಷಯುಕ್ತ ಮತ್ತು ಅರ್ಹವಲ್ಲದ ದಾಖಲೆಗಳ ಪೂರೈಕೆಗೆ ಸಂಬಂಧಿಸಿದ ಮೇಲ್ಮನವಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ವಿಚಾರ ತಿಳಿಸಿತು.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರ ವಾದವೊಂದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ವಿಚಾರಣೆಯ ಯಾವುದೇ ಹಂತದಲ್ಲಿ ದಾಖಲೆಗಳನ್ನು ಆರೋಪಿಗಳಿಗೆ ನೀಡದೇ ಇರಲು ಯಾವುದೇ ಕಾರಣಗಳಿರುವುದಿಲ್ಲ ಎಂದು ಹೇಳಿತು. ಮುಂದುವರೆದು, "ಅದು ಸರಿಯೋ ಅಲ್ಲವೋ ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿ. ಆರೋಪಿಯು ಜಾಮೀನು ಪಡೆಯಲು ಅರ್ಹನೋ, ಅಲ್ಲವೋ ಎನ್ನುವ ತೀರ್ಮಾನಕ್ಕೆ ನ್ಯಾಯಾಲಯ ಬರಲು ಆರೋಪಿಗೆ ದಾಖಲೆಗಳನ್ನು ಒದಗಿಸುವುದು ಅಗತ್ಯ” ಎಂದು ನ್ಯಾಯಮೂರ್ತಿ ಓಕಾ ಹೇಳಿದರು.

ಆರೋಪ ನಿಗದಿ ಹಂತದಲ್ಲಿ, ಆರೋಪ ಪಟ್ಟಿಯ ಭಾಗವಾಗಿರುವ ದಾಖಲೆಗಳನ್ನು ಮಾತ್ರ ಪರಿಶೀಲಿಸಬಹುದು ಎಂದು ನ್ಯಾಯಾಲಯ ಹೇಳಿತು. ಜಾಮೀನು ಹಂತದಲ್ಲಿ ಅಂತಹ ನಿರ್ಬಂಧ ಇರುವುದಿಲ್ಲ ಎಂದು ಅದು ಸ್ಪಷ್ಟಪಡಿಸಿತು.

" ಜಾಮೀನು ನೀಡುವ ಅಥವಾ ರದ್ದುಗೊಳಿಸುವ ಪ್ರಕರಣದಲ್ಲಿ ಅವರು ದಾಖಲೆಗಳನ್ನು ಬಯಸಿದರೆ, ಅವರು ಅವುಗಳನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ " ಎಂದು ನ್ಯಾಯಮೂರ್ತಿ ಓಕಾ ಹೇಳಿದರು. ಆದರೆ, ಅಂತಹ ಯಾವುದೇ ಹಕ್ಕು ಇಲ್ಲ ಎಂದು ಎಎಸ್‌ಜಿ ರಾಜು ಹೇಳಿದರು.  ಜಾಮೀನಿನ ಹಂತದಲ್ಲಿ ದಾಖಲೆಗಳನ್ನು ಸಲ್ಲಿಸಲು ಆರೋಪಿಗೆ ಅರ್ಹತೆ ಇರುವುದಿಲ್ಲ ಎಂದು ಎಎಸ್‌ಜಿ ವಾದಿಸಿದರು.

Also Read
ಇಲ್ಲಿವೆ ಪಿಎಂಎಲ್ಎ ಆರೋಪಿ ಹಕ್ಕುಗಳ ಕುರಿತಂತೆ ಸುಪ್ರೀಂ ಕೋರ್ಟ್‌ ಹೇಳಿದ ಮೂರು ಮಹತ್ವದ ಅಂಶಗಳು

ಅಂತಿಮವಾಗಿ ನ್ಯಾಯಾಲಯವು, ದಾಖಲೆಗಳನ್ನು ಪಡೆಯುವ ಸಂಬಂಧ ಆರೋಪಿಗೆ ಇರುವ ಹಕ್ಕುಗಳೇನು ಎನ್ನುವುದು ನಮ್ಮ ಮುಂದೆ ಇರುವ ಕಾನೂನಾತ್ಮಕ ಪ್ರಶ್ನೆಯಾಗಿದ್ದು, ಈ ಬಗ್ಗೆ ನಾವು ಉತ್ತರಿಸಲಿದ್ದೇವೆ ಎಂದು ನ್ಯಾ. ಓಕಾ ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶವನ್ನು ಕಾಯ್ದಿರಿಸಿತು.

ಆರೋಪಿ-ಮೇಲ್ಮನವಿದಾರರ ಪರವಾಗಿ ಹಿರಿಯ ವಕೀಲರಾದ ಆರ್ ಬಸಂತ್ ಮತ್ತು ಗೋಪಾಲ್ ಶಂಕರನಾರಾಯಣನ್ ಕೂಡ ವಾದ ಮಂಡಿಸಿದರು.

Kannada Bar & Bench
kannada.barandbench.com