
ಕ್ರೀಡೆ ಮತ್ತು ಕ್ರೀಡಾಪಟುಗಳ ವಿಶಾಲ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಭಾರತೀಯ ಕುಸ್ತಿ ಒಕ್ಕೂಟಕ್ಕೆ (WFI) ವಿಧಿಸಲಾಗಿದ್ದ ನಿಷೇಧ ತೆರವುಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಒಕ್ಕೂಟ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ವಿಲೇವಾರಿ ಮಾಡಿತು.
ಡಿಸೆಂಬರ್ 2023 ರಲ್ಲಿ ಭಾರತೀಯ ಒಲಿಂಪಿಕ್ ಸಂಸ್ಥೆ (IOA) ರಚಿಸಿದ್ದ ತಾತ್ಕಾಲಿಕ ಸಮಿತಿಯನ್ನು ಒಕ್ಕೂಟದ ದೈನಂದಿನ ಕಾರ್ಯನಿರ್ವಹಣೆ ನೋಡಿಕೊಳ್ಳುವುದಕ್ಕಾಗಿ ಮರುಸ್ಥಾಪಿಸಲು ಅವಕಾಶ ನೀಡಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಒಕ್ಕೂಟ ಮೇಲ್ಮನವಿ ಸಲ್ಲಿಸಿತ್ತು.
ಅಮಾನತು ಆದೇಶ ಜಾರಿಯಲ್ಲಿರುವವರೆಗೆ ಮಾತ್ರ ತಾತ್ಕಾಲಿಕ ಸಮಿತಿ ಕಾರ್ಯನಿರ್ವಹಿಸುತ್ತದೆ ಎಂದು ಏಕ ಸದಸ್ಯ ಪೀಠ ಸ್ಪಷ್ಟಪಡಿಸಿರುವುದನ್ನು ವಿಭಾಗೀಯ ಪೀಠ ಇಂದು ಗಮನಿಸಿತು .
ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಪರವಾಗಿ ಹಾಜರಾದ ಹಿರಿಯ ವಕೀಲ ಜಯಂತ್ ಮೆಹ್ತಾ, ಮಾರ್ಚ್ 10ರಂದು ಹೊರಡಿಸಲಾದ ಆದೇಶದ ಮೂಲಕ ಒಕ್ಕೂಟದ ಮಾನ್ಯತೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪುನಃಸ್ಥಾಪಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತೀಯ ಕುಸ್ತಿಪಟುಗಳು ನಿರಂತರವಾಗಿ ಭಾಗವಹಿಸುವಂತೆ ಮಾಡುವುದಕ್ಕಾಗಿ ಕ್ರೀಡಾ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಅವರು ಹೇಳಿದರು.
ಒಕ್ಕೂಟದ ಮಾಜಿ ಅಧ್ಯಕ್ಷ, ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸಿದ ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದ ಅಂಗಳ ತಲುಪಿತ್ತು. ಅವರ ಅಧಿಕಾರಾವಧಿ ಮುಗಿದ ನಂತರ, ಸಂಜಯ್ ಸಿಂಗ್ ಕುಸ್ತಿ ಒಕ್ಕೂಟದ ಮುಖ್ಯಸ್ಥರಾದರು. ಅವರನ್ನು ಬ್ರಿಜ್ ಭೂಷಣ್ ಸಿಂಗ್ ಅವರ ಆಪ್ತರು.
ಹೊಸದಾಗಿ ಆಯ್ಕೆಯಾದ ಸಂಸ್ಥೆಯ ಆಡಳಿತ ಮತ್ತು ಕಾರ್ಯವಿಧಾನದ ಸಮಗ್ರತೆಯಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 24, ಡಿಸೆಂಬರ್ 2023ರಲ್ಲಿ ಒಕ್ಕೂಟವನ್ನು ನಿಷೇಧಿಸಿತ್ತು. ಈ ಹಿನ್ನೆಲೆಯಲ್ಲಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿತ್ತು. ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆ, 2011 ರ ನಿಬಂಧನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಹೊಸ ಪದಾಧಿಕಾರಗಳನ್ನು ಒಳಗೊಂಡ ಒಕ್ಕೂಟ ಈ ಹಿಂದಿನ ಪದಾಧಿಕಾರಿಗಳ ನಿಯಂತ್ರಣದಲ್ಲಿತ್ತು ಎಂದು ಕೇಂದ್ರ ಸರ್ಕಾರ ಹೇಳಿತ್ತು.
ನಂತರ ಸರ್ಕಾರ ಒಕ್ಕೂಟದ ವ್ಯವಹಾರ ನಿರ್ವಹಣೆಗಾಗಿ ತಾತ್ಕಾಲಿಕ ಸಮಿತಿ ರಚಿಸುವಂತೆ ಕೇಳಿತ್ತು. ಆದರೆ ವಿಶ್ವ ಕುಸ್ತಿ ಸಂಸ್ಥೆ ಫೆಬ್ರವರಿ 2024ರಲ್ಲಿ ಒಕ್ಕೂಟದ ಮೇಲಿನ ನಿಷೇಧ ತೆಗೆದುಹಾಕಿದ್ದರಿಂದ ಭಾರತೀಯ ಒಲಿಂಪಿಕ್ ಸಂಸ್ಥೆ ಸಮಿತಿಯನ್ನು ವಿಸರ್ಜಿಸಿತು.
ಆಗಸ್ಟ್ 2024ರಲ್ಲಿ, ಏಕ ಸದಸ್ಯ ಪೀಠ ತಾತ್ಕಾಲಿಕ ಸಮಿತಿಯನ್ನು ಪುನಃಸ್ಥಾಪಿಸಿತ್ತು. ಈ ಹಿನ್ನೆಲೆಯಲ್ಲಿ ಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಲಾಗಿತ್ತು.