ಹವಾಮಾನ ಬದಲಾವಣೆ ನೆಪವೊಡ್ಡಿ ಯೋಜನೆ ಸ್ಥಗಿತಗೊಳಿಸುವಂತೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೇಳುವುದು ತಪ್ಪು: ಸುಪ್ರೀಂ

ಉದ್ಯಾನ, ನಡಿಗೆಪಥ, ಸೈಕಲ್ ಪಥ ಇತ್ಯಾದಿಗಳನ್ನು ನಿರ್ಮಿಸಲು ಕರಾವಳಿ ರಸ್ತೆ ಯೋಜನೆಯಡಿ ಭೂಸುಧಾರಣೆಗೆ ಅನುಮತಿ ಕೋರಿ ಬೃಹನ್ಮುಂಬೈ ಮಹಾನಗರ ಪಾಲಿಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠ.
ಹವಾಮಾನ ಬದಲಾವಣೆ ನೆಪವೊಡ್ಡಿ ಯೋಜನೆ ಸ್ಥಗಿತಗೊಳಿಸುವಂತೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೇಳುವುದು ತಪ್ಪು: ಸುಪ್ರೀಂ
A1
Published on

ಜಾಗತಿಕ ತಾಪಮಾನ ಏರಿಕೆ ಮತ್ತು ಅದರ ಪರಿಣಾಮಗಳಿಗೆ ಅಭಿವೃದ್ಧಿ ಹೊಂದಿದ ದೇಶಗಳು ಹೆಚ್ಚು ಜವಾಬ್ದಾರರಾಗಿರುವಾಗ ಹವಾಮಾನ ಬದಲಾವಣೆಯ ನೆಪವೊಡ್ಡಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನಿರ್ಮಾಣ ಯೋಜನೆ ಸ್ಥಗಿತಗೊಳಿಸುವುದು ಸೂಕ್ತವಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ [ಬೃಹನ್ಮುಂಬೈ ಮಹಾನಗರ ಪಾಲಿಕೆ ಮತ್ತು ವರ್ಲಿ ಕೋಳಿವಾಡ ನಖ್ವ ಮತ್ಸ್ಯ ವ್ಯವಸಾಯ್‌ ಸಹಕಾರಿ ಸಂಘ ಮತ್ತಿತರರ ನಡುವಣ ಪ್ರಕರಣ].

ಅನಿಯಂತ್ರಿತ ಭೂ ಸುಧಾರಣೆ ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ ಎಂಬ ವಕೀಲ ಕಾಲಿನ್ ಗೊನ್ಸಾಲ್ವೆಸ್ ಅವರ ವಾದಕ್ಕೆ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ಈ ಪ್ರತಿಕ್ರಿಯೆ ನೀಡಿತು.  

Also Read
ಸ್ಥಳೀಯ ಸಂಸ್ಕೃತಿಗಳಿಗೆ ಬೆದರಿಕೆಯಾಗಿ ರೂಪುಗೊಳ್ಳುತ್ತಿರುವ ಜಾಗತೀಕರಣ; ಹವಾಮಾನ ಬದಲಾವಣೆಯಿಂದ ಪರಿಸರ ಅಸಮತೋಲನ: ಸಿಜೆಐ

“ಅಭಿವೃದ್ಧಿಶೀಲ ರಾಷ್ಟ್ರಗಳು ಮಾತ್ರ ಇದಕ್ಕೆ (ಹವಾಮಾನ ಬದಲಾವಣೆಗೆ) ಕೊಡುಗೆ ನೀಡುವುದಿಲ್ಲ. ಅಭಿವೃದ್ಧಿ ಹೊಂದಿದ ದೇಶಗಳು ಮಾಡುವ ಮಾಲಿನ್ಯವೂ ಇದಕ್ಕೆ ಕಾರಣ. ಈಗ ಅಭಿವೃದ್ಧಿಶೀಲ ದೇಶಗಳು ತಮ್ಮ ಯೋಜನೆಗಳನ್ನು ನಿಲ್ಲಿಸಬೇಕು ಎನ್ನುವುದು ತಪ್ಪು” ಎಂದು ಪೀಠ ಹೇಳಿತು.

ಕರಾವಳಿ ಹೆದ್ದಾರಿ ಯೋಜನೆಯಡಿ ಉದ್ಯಾನವನ, ನಡಿಗೆಪಥ, ಸೈಕಲ್‌ ಪಥ ಇತ್ಯಾದಿಗಳನ್ನು ನಿರ್ಮಿಸಲು ಭೂಸುಧಾರಣೆಗೆ ಅನುಮತಿ ಕೋರಿ ಬೃಹನ್ಮುಂಬೈ ಮಹಾನಗರ ಪಾಲಿಕೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಆಲಿಸಿತು.

ರಸ್ತೆ ಒಳಗೊಂಡ ಯೋಜನೆಗಳ ಹೊರತಾಗಿ ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಭೂಸುಧಾರಣೆಗಾಗಿ ಆರಂಭದಲ್ಲಿ ನಿಗದಿಪಡಿಸಿದ ಮಿತಿಯನ್ನು ಮೀರಿ ವಿಸ್ತರಣೆ ಬಯಸಿದ್ದ ಅರ್ಜಿಗೆ ಬಾಂಬೆ ಹೈಕೋರ್ಟ್‌ ತಡೆ ನೀಡಿತ್ತು. ಇದರ ವಿರುದ್ಧ ಪಾಲಿಕೆ ಮೇಲ್ಮನವಿ ಸಲ್ಲಿಸಿತ್ತು.

ಪ್ರತಿವಾದಿಗಳು ವಿಧಿಸಿದ ಷರತ್ತುಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮತಿ ನೀಡಿದ ಪೀಠ ಕರಾವಳಿ ರಸ್ತೆಯುದ್ದಕ್ಕೂ ಮನರಂಜನಾ ಪಾರ್ಕ್‌ ನಿರ್ಮಿಸಲು ಸಮ್ಮತಿ ಸೂಚಿಸಲಿಲ್ಲ. ಆ ಪ್ರಕಾರ ನ್ಯಾಯಾಲಯದ ಹಿಂದಿನ ಆದೇಶಗಳನ್ನು ಮಾರ್ಪಡಿಸಿದ ಸುಪ್ರೀಂ ಕೋರ್ಟ್‌ ತೊಂದರೆಗೊಳಗಾದ ಮೀನುಗಾರರ ಪುನರ್ವಸತಿಗೆ ನಾಲ್ಕು ವಾರಗಳ್ಲಲಿ ಯೋಜನೆಯನ್ನು ಜಾರಿಗೊಳಿಸುವಂತೆ ಪಾಲಿಕೆಗೆ ಸೂಚಿಸಿತು.

Kannada Bar & Bench
kannada.barandbench.com