ಯೆಸ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತಮ್ಮನ್ನು ವಶಕ್ಕೆ ಪಡೆಯುವುದರ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಅರ್ಹತೆ ಇಲ್ಲದಿದ್ದರೂ ಅವಾಂತ ಸಮೂಹ ಕಂಪೆನಿಗಳಿಗೆ ಸಾಲ ಸೌಲಭ್ಯ ವಿಸ್ತರಿಸಿ ಯೆಸ್ ಬ್ಯಾಂಕ್‌ಗೆ ರೂ 1800 ಕೋಟಿಗಳಷ್ಟುನಷ್ಟ ಉಂಟುಮಾಡುವ ಜೊತೆಗೆ ರೂ 307 ಕೋಟಿಗಳಷ್ಟು ಲಾಭ ಪಡೆದ ಆರೋಪ ಕಪೂರ್ ಅವರ ಮೇಲಿದೆ. ಈ ಹಿನ್ನೆಲೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಆಧರಿಸಿ ಸಿಬಿಐ ಕಪೂರ್ ಅವರನ್ನು ವಶಕ್ಕೆ ಪಡೆಯಲು ಕೋರಿತ್ತು.
ಕಪೂರ್ ಇದನ್ನು ವಿರೋಧಿಸಿ ಪ್ರತಿ- ಅರ್ಜಿ ಸಲ್ಲಿಸಿದ್ದು ತಾನು ತನಿಖಾಧಿಕಾರಿಗೆ ಹೇಳಲು ಇನ್ನೇನೂ ಇಲ್ಲ ಮತ್ತು ಸಂವಿಧಾನದ 20 (3)ನೇ ವಿಧಿಯಡಿ ಮೌನವಾಗಿರಲು ಬಯಸುತ್ತೇನೆ ಎಂದು ತಿಳಿಸಿದ್ದರು. ಇದನ್ನು ಆಗಸ್ಟ್ 14ರಂದು ತಳ್ಳಿ ಹಾಕಿದ್ದ ಸಿಬಿಐ ವಿಶೇಷ ನ್ಯಾಯಾಲಯ ಕಪೂರ್ ಅವರನ್ನು 7 ದಿನಗಳಸಿಬಿಐ ವಶಕ್ಕೆ ಒಪ್ಪಿಸಿ ಆದೇಶಿಸಿತ್ತು.
ವಕೀಲರಾದ ವಿಜಯ್ ಅಗರ್‌ವಾಲ್ ಮತ್ತುರಾಹುಲ್ ಅಗರ್‌ವಾಲ್ ಅವರ ಮೂಲಕ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ, ಕಪೂರ್ ಅವರು ವಿಶೇಷ ನ್ಯಾಯಾಲಯದ ಆದೇಶ ರದ್ದುಗೊಳಿಸುವಂತೆ ಮತ್ತು ವಶಕ್ಕೆ ಪಡೆದು ವಿಚಾರಣೆ ನಡೆಸುವುದು ಸೇರಿದಂತೆ ನಂತರದ ಎಲ್ಲಾ ಪ್ರಕ್ರಿಯೆಗಳು ಕಾನೂನುಬಾಹಿರ ಎಂದು ಘೋಷಿಸುವಂತೆ ಕೋರಿದ್ದಾರೆ. ಅಲ್ಲದೆ ಕಪೂರ್ ಅವರು ಪರಿಹಾರ ಒದಗಿಸುವಂತೆಯೂ ಮನವಿ ಮಾಡಿದ್ದಾರೆ.
ಈ ಮಧ್ಯೆ ಪ್ರತ್ಯೇಕ ಅರ್ಜಿ ಸಲ್ಲಿಸಿರುವ ಕಪೂರ್ ಪುತ್ರಿ ರಾಖಿ ಕಪೂರ್ ಟಂಡನ್ ಅವರು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿರುವ ಯೆಸ್ ಬ್ಯಾಂಕ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅನಿವಾಸಿ ಭಾರತೀಯರಾದ ತಾವು ಇಂಗ್ಲೆಂಡ್‌ನಲ್ಲಿದ್ದು ಕೋವಿಡ್ ಹಿನ್ನೆಲೆಯಲ್ಲಿ ಅಲ್ಲಿಂದ ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಖುದ್ದು ಹಾಜರಿಯಿಂದ ಶಾಶ್ವತವಾಗಿ ವಿನಾಯಿತಿ ನೀಡಿ, ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.