[ಯೋಗೀಶ್‌ ಗೌಡ ಕೊಲೆ ಪ್ರಕರಣ] ದೋಷಾರೋಪ ನಿಗದಿಯಲ್ಲಿ ದೋಷ: ಹೈಕೋರ್ಟ್‌ನಲ್ಲಿ ಶಾಸಕ ವಿನಯ್‌ ಕುಲಕರ್ಣಿ ಪರ ವಕೀಲರ ವಾದ

ಅಪರಾಧ ನಡೆದಿದ್ದ ಸ್ಥಳದಲ್ಲಿ ರಕ್ತದ ಕಲೆ, ಚಪ್ಪಲಿ, ಮೆಣಸಿನ ಪುಡಿ, ಚಾಪೆ, ಒಂದು ಸ್ಯಾಮ್‌ಸಂಗ್ ಫೋನ್‌ ಅನ್ನು ಮಹಜರು ಮಾಡಲಾಗಿದೆಯೇ ಹೊರತಾಗಿ ಬೇರಾವುದೇ ಸಾಕ್ಷ್ಯಗಳಿಲ್ಲ ಎಂದು ಆಕ್ಷೇಪ.
Vinay Kulkarni and Karnataka HC
Vinay Kulkarni and Karnataka HC
Published on

ಧಾರವಾಡ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿಪಡಿಸಿರುವಲ್ಲಿ ಸಾಕಷ್ಟು ದೋಷಗಳಿವೆ ಎಂದು ಧಾರವಾಡ ಶಾಸಕ ವಿನಯ್‌ ಕುಲಕರ್ಣಿ ಪರ ವಕೀಲರು ಕರ್ನಾಟಕ ಹೈಕೋರ್ಟ್‌ ಮುಂದೆ ವಾದಿಸಿದ್ದಾರೆ.

ತಮ್ಮ ವಿರುದ್ಧ ಹೊರಿಸಲಾಗಿರುವ ದೋಷಾರೋಪ ಮತ್ತು ವಿಶೇಷ ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣಾ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ವಿನಯ್‌ ಕುಲಕರ್ಣಿ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ವಿನಯ ಕುಲಕರ್ಣಿ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಅವರು, ಪ್ರಾಸಿಕ್ಯೂಷನ್‌ ಸಂಗ್ರಹಿಸಿರುವ ಸಾಕ್ಷ್ಯಗಳಲ್ಲಿ ಐಪಿಸಿ ಸೆಕ್ಷನ್‌ 201ರ (ಅಪರಾಧ ಪುರಾವೆ ಕಣ್ಮರೆಯಾಗುವಂತೆ ಮಾಡುವುದು ಅಥವಾ ಅಪರಾಧಿಯನ್ನು ರಕ್ಷಿಸಲು ತಪ್ಪು ಮಾಹಿತಿ ನೀಡುವುದು) ಅನುಸಾರ ಕೊಲೆಗೆ ಬಳಸಲಾಗಿದೆ ಎಂಬ ಆಯುಧವನ್ನೇ ವಶಪಡಿಸಿಕೊಂಡಿಲ್ಲ. ಅಪರಾಧ ನಡೆದಿದ್ದ ಸ್ಥಳದಲ್ಲಿ ರಕ್ತದ ಕಲೆ, ಚಪ್ಪಲಿ, ಮೆಣಸಿನ ಪುಡಿ, ಚಾಪೆ, ಒಂದು ಸ್ಯಾಮ್‌ಸಂಗ್ ಫೋನ್‌ ಅನ್ನು ಮಹಜರು ಮಾಡಲಾಗಿದೆಯೇ ಹೊರತಾಗಿ ಬೇರಾವುದೇ ಸಾಕ್ಷ್ಯಗಳಿಲ್ಲ. ಹೀಗಾಗಿ, ಅರ್ಜಿದಾರರ ವಿರುದ್ಧ ವಿಚಾರಣಾಧೀನ ನ್ಯಾಯಾಲಯ ದೋಷಾರೋಪ ಹೊರಿಸಿರುವ ಕ್ರಮ ನ್ಯಾಯಬದ್ಧವಾಗಿಲ್ಲ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು ಅಪರಾಧಿಕ ಪ್ರಕರಣಗಳಲ್ಲಿ ಸಾಂದರ್ಭಿಕ ಪುರಾವೆಗಳಿಂದಲೂ ಕೇಸನ್ನು ತೀರ್ಮಾನಿಸಬಹುದಲ್ಲವೇ? ಜನಪ್ರತಿನಿಧಿಗಳ ವಿರುದ್ಧದ ಅಪರಾಧಿಕ ಪ್ರಕರಣಗಳು ಗಂಭೀರ ಎಂಬ ಕಾರಣಕ್ಕಾಗಿಯೇ, ಸುಪ್ರೀಂ ಕೋರ್ಟ್‌, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವನ್ನು ನಿಯೋಜಿಸಿದೆ. ಇಂತಹ ಪ್ರಕರಣಗಳಲ್ಲಿ ಮೆರಿಟ್‌ ಮೇಲಿನ ವಾದ ಆಲಿಸುವುದರಿಂದ ಉಳಿದ ಆರೋಪಿಗಳ ವಿರುದ್ಧದ ವಿಚಾರಣೆ ವಿಳಂಬವಾಗುತ್ತದೆಯಲ್ಲವೇ ಎಂದು ಕೇಳಿತು.

ಆರೋಪಿಯ ಹಕ್ಕುಗಳು ಬಹಳ ಮೌಲ್ಯಯುತವಾದವು ಎಂಬುದೇನೊ ಸರಿ. ಆದರೆ, ಕ್ರಿಮಿನಲ್ ಪ್ರಕರಣಗಳ ವಿಲೇವಾರಿ ಶೀಘ್ರ ಮುಗಿಯದೇ ಹೋದರೆ, ಸಮಾಜದಲ್ಲಿ ಯಾರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಹೀಗೇ ಆದರೆ ಶ್ರೀ ಸಾಮಾನ್ಯರ ಗತಿಯೇನು? ಒಳ್ಳೆಯ ಸಮಾಜ ನಿರ್ಮಾಣವಾಗಬೇಕು ಎಂದಾಗ ಎಲ್ಲಿಂದಲಾದರೂ ಅದನ್ನು ಸರಿಪಡಿಸುವುದು ಅಗತ್ಯವಾಗಿದ್ದು ಅದರಲ್ಲೂ, ನ್ಯಾಯಾಂಗದ ಪಾತ್ರ ಹಿರಿದಲ್ಲವೇ? ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಇದೇ ವೇಳೆ, ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸುವ ಭರವಸೆ ನೀಡಿದರು.

ನಾಗೇಶ್‌ ಅವರು ತಮ್ಮ ವಾದ ಮುಂದುವರಿಸಲು ಮತ್ತಷ್ಟು ಸಮಯ ಕೋರಿದ ಕಾರಣ ಎಂದು ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಲಾಯಿತು.

Also Read
ಯೋಗೀಶ್‌ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್‌ ಕುಲಕರ್ಣಿ ವಿರುದ್ಧದ ನ್ಯಾಯಿಕ ಪ್ರಕ್ರಿಯೆಗೆ ತಡೆ ನೀಡಲು ಹೈಕೋರ್ಟ್‌ ನಕಾರ

ಪ್ರಕರಣದ ಹಿನ್ನೆಲೆ: ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್‌ 15ರಂದು ಯೋಗೀಶ್‌ಗೌಡ ಅವರ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ವಿಶೇಷ ನ್ಯಾಯಾಲಯ ಒಟ್ಟು 21 ಆರೋಪಿಗಳ ವಿರುದ್ಧ ದೋಷಾರೋಪ ನಿಗದಿಪಡಿಸಿ 2024ರ ಜನವರಿ 29ರಿಂದ ಫೆಬ್ರವರಿ 1ರವರೆಗೆ ನಿಯಮಿತವಾಗಿ ವಿಚಾರಣೆ  ಕೈಗೆತ್ತಿಕೊಳ್ಳುವುದಾಗಿ ಆದೇಶಿಸಿತ್ತು.

ಈಗ ಪ್ರಕರಣದ ಆರೋಪಿಯೂ ಆದ ವಿನಯ್‌ ಕುಲಕರ್ಣಿ ಅವರು ದೋಷಾರೋಪ ನಿಗದಿ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಅಂತೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ನವೆಂಬರ್‌ನಲ್ಲಿ ವಿನಯ್‌ ಕುಲಕರ್ಣಿ ಅವರನ್ನು ಬಂಧಿಸಿ, ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಒಂಭತ್ತು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.

Kannada Bar & Bench
kannada.barandbench.com