[ಯೋಗೀಶ್‌ ಗೌಡ ಕೊಲೆ ಪ್ರಕರಣ] ಏಳು ಮಂದಿಗೆ ಹೈಕೋರ್ಟ್‌ನಿಂದ ಜಾಮೀನು; ಶಿಕ್ಷೆ ಅಮಾನತು

ಜುಲೈ 31ರಂದು ವಿನಯ ಕುಲಕರ್ಣಿ, ಚಂದ್ರಶೇಖರ ಇಂಡಿ ಸೇರಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 9 ಮಂದಿಯ ಶಿಕ್ಷೆ ಅಮಾನತಿನಲ್ಲಿಟ್ಟು, ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್‌.
Yogesh Gowda
Yogesh GowdaFacebook
Published on

ಧಾರವಾಡದ ಬಿಜೆಪಿ‌ ಮುಖಂಡ ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಏಳು ಅಪರಾಧಿಗಳಿಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದು ಕೋರಿ ವಿಕ್ರಂ ಬಳ್ಳಾರಿ (ಎ2), ಕೀರ್ತಿಕುಮಾರ ಬಸವರಾಜ ಕುರಹಟ್ಟಿ (ಎ3) ಸೇರಿ ಏಳು ಮಂದಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯಲ್ಲಿನ ಮಧ್ಯಂತರ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮೊಹಮದ್‌ ನವಾಜ್‌ ಮತ್ತು ಜಿ ಬಸವರಾಜ ಅವರ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

Justice Mohammed Nawaz and Justice G Basavaraja
Justice Mohammed Nawaz and Justice G Basavaraja

ವಿಚಾರಣಾಧೀನ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದು ಕೋರಿ ಮೇಲ್ಮನವಿದಾರ ಅಪರಾಧಿಗಳು ಸಲ್ಲಿಸಿರುವ ಮೇಲ್ಮನವಿಗಳು ಇತ್ಯರ್ಥವಾಗುವವರೆಗೆ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಅಮಾನತಿನಲ್ಲಿರಿಸಲಾಗಿದೆ ಹಾಗೂ ಷರತ್ತುಗಳಿಗೆ ಒಳಪಟ್ಟಂತೆ ಮೇಲ್ಮನವಿದಾರಿಗೆ ಜಾಮೀನು ಮಂಜೂರು ಮಾಡಲಾಗಿದೆ ಎಂದು ಪೀಠ ಆದೇಶಿಸಿದೆ. 

ಮೇಲ್ಮನವಿದಾರರು ತಲಾ 5 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ಒದಗಿಸಬೇಕು. ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೇಶ ಬಿಟ್ಟು ಹೋಗಬಾರದು. ಹೈಕೋರ್ಟ್ ಹಾಗೂ ವಿಶೇಷ ನ್ಯಾಯಾಲಯ ನಿರ್ದೇಶಿಸಿದಾಗ ಖುದ್ದು ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ.

ವಿಕ್ರಂ ಬಳ್ಳಾರಿ (ಎ2), ಕೀರ್ತಿಕುಮಾರ ಬಸವರಾಜ ಕುರುಹಟ್ಟಿ (ಎ3), ಸಂದೀಪ್‌ ಸೌದತ್ತಿ ಅಲಿಯಾಸ್‌ ಸ್ಯಾಂಡಿ (ಎ4), ವಿನಾಯಕ ಕಟಗಿ (ಎ5), ಮಹಾಬಲೇಶ್ವರ ಹೊಂಗಲ್‌ ಅಲಿಯಾಸ್ ಮುದುಕ (ಎ6), ಸಂತೋಷ ಸವದತ್ತಿ (ಎ7) ಹಾಗೂ ವಿಕಾಸ ಕಲಬುರಗಿ (ಎ18) ಅವರಿಗೆ ಜಾಮೀನು ಮಂಜೂರಾಗಿದೆ.

2016ರಲ್ಲಿ ನಡೆದಿದ್ದ ಯೋಗೀಶ್‌ ಗೌಡ‌ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಸೇರಿ ಒಟ್ಟು 17 ಮಂದಿಯನ್ನು ಅಪರಾಧಿಗಳು ಎಂದು ತೀರ್ಮಾನಿಸಿ 2026ರ ಏಪ್ರಿಲ್ 15ರಂದು ತೀರ್ಪು‌ ನೀಡಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಏಪ್ರಿಲ್ 17ರಂದು ವಿನಯ ಕುಲಕರ್ಣಿ, ಚಂದ್ರಶೇಖರ ಇಂಡಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಹೈಕೋರ್ಟ್ 2026ರ ಜುಲೈ 31ರಂದು ವಿನಯ ಕುಲಕರ್ಣಿ (ಎ15), ಚಂದ್ರಶೇಖರ ಇಂಡಿ (ಎ16) ಸೇರಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 9 ಮಂದಿಯ ಶಿಕ್ಷೆ ಅಮಾನತಿನಲ್ಲಿಟ್ಟು, ಜಾಮೀನು ಮಂಜೂರು ಮಾಡಿತ್ತು. ಜತೆಗೆ, ಇದೇ ಪ್ರಕರಣದಲ್ಲಿ ತನಿಖಾ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದ, ಅಸಲಿ ಸಾಕ್ಷಿಗಳನ್ನು ಮರೆಮಾಚಿ ನಕಲಿ ಸಾಕ್ಷಿಗಳನ್ನು ಸೃಷ್ಟಿಸಿದ ಆರೋಪದಲ್ಲಿ 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್ ಚನ್ನಕೇಶವ ಬಿ. ಟಿಂಗರೀಕರ (ಎ19) ಅವರ ಶಿಕ್ಷೆಯನ್ನೂ ಅಮಾನತಿನಲ್ಲಿಟ್ಟು ಜಾಮೀನು ಮಂಜೂರು ಮಾಡಿತ್ತು.

Attachment
PDF
Santosh Savadatti and others Vs CBI
Preview
Kannada Bar & Bench
kannada.barandbench.com