[ಯೋಗೀಶ್‌ ಗೌಡ ಕೊಲೆ] ತನಿಖಾಧಿಕಾರಿಯಾಗಿದ್ದ ಟೆಂಗರಿಕರ್‌ನಿಂದ ಗಂಭೀರ ಲೋಪ: ಹೈಕೋರ್ಟ್‌

“ಪೊಲೀಸ್‌ ಅಧಿಕಾರಿಯಾಗಿದ್ದ ಟೆಂಗರಿಕರ್‌ ಕೆಲಸ ಸಂತ್ರಸ್ತರಿಗೆ ನೆರವಾಗುವುದಾಗಿತ್ತೇ ವಿನಾ ಆರೋಪಿಗಳ ಜೊತೆ ಕೈಜೋಡಿಸುವುದಾಗಿರಲಿಲ್ಲ” ಎಂದು ಪೀಠ ಹೇಳಿದೆ.
Yogesh Gowda
Yogesh GowdaFacebook
Published on

ಬಿಜೆಪಿ ನಾಯಕ ಯೋಗೀಶ್‌ ಗೌಡ ಕೊಲೆ ಪ್ರಕರಣದ ಆರಂಭಿಕ ತನಿಖೆ ನಡೆಸಿದ್ದ ಅಂದಿನ ತನಿಖಾಧಿಕಾರಿ ಚನ್ನಕೇಶವ ಟೆಂಗರಿಕರ್‌ ಕಡೆಯಿಂದ ಗಂಭೀರ ಲೋಪಗಳಾಗಿವೆ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.

ಕೊಲೆ ಪ್ರಕರಣದಲ್ಲಿ ಏಳು ವರ್ಷ ಶಿಕ್ಷೆ ವಿಧಿಸಿರುವುದನ್ನು ಬದಿಗೆ ಸರಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಕೋರಿ ಮಾಜಿ ಪೊಲೀಸ್‌ ಅಧಿಕಾರಿಯಾದ ಟೆಂಗರಿಕರ್‌ ಸಲ್ಲಿಸಿರುವ ಕ್ರಿಮಿನಲ್‌ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಚ್‌ ಪಿ ಸಂದೇಶ್‌ ಮತ್ತು ಪಿ ಶ್ರೀಸುಧಾ ಅವರ ರಜಾಕಾಲೀನ ವಿಭಾಗೀಯ ಪೀಠ ನಡೆಸಿತು.

ಸಾಕ್ಷ್ಯ ನಾಶ ಮಾಡಿ ನೈಜ ಆರೋಪಿಗಳನ್ನು ರಕ್ಷಿಸಿದ ಆರೋಪಕ್ಕೆ ಸಂಬಂಧಿಸಿದಂತೆ 19ನೇ ಆರೋಪಿಯಾಗಿರುವ ಟೆಂಗರಿಕರ್‌ಗೆ ವಿಚಾರಣಾಧೀನ ನ್ಯಾಯಾಲಯವು ಏಳು ವರ್ಷ ಶಿಕ್ಷೆ ವಿಧಿಸಿದೆ.

“ಪೊಲೀಸ್‌ ಅಧಿಕಾರಿಯಾಗಿದ್ದ ಟೆಂಗರಿಕರ್‌ ಕೆಲಸ ಸಂತ್ರಸ್ತರಿಗೆ ನೆರವಾಗುವುದಾಗಿತ್ತೇ ವಿನಾ ಆರೋಪಿಗಳ ಜೊತೆ ಕೈಜೋಡಿಸುವುದಾಗಿರಲಿಲ್ಲ” ಎಂದು ಪೀಠ ಹೇಳಿದೆ.

“ಕೊಲೆಯಾದ ತಕ್ಷಣ ಸಿಸಿಟಿವಿ ತುಣುಕುಗಳನ್ನು ವಶಕ್ಕೆ ಪಡೆದು ಅವುಗಳನ್ನು ಪರಿಶೀಲಿಸಿದ್ದರೆ ಆರಂಭಿಕ ಹಂತದಲ್ಲೇ ನೈಜ ಆರೋಪಿಗಳನ್ನು ಪತ್ತೆ ಮಾಡಬಹುದಿತ್ತು” ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೇ, ಕೊಲೆ ಪ್ರಕರಣದಲ್ಲಿ ಆರೋಪಿ ಅಪರಾಧಿ ಎಂದು ಸಾಬೀತಾದ ನಂತರ ಪ್ರಕರಣ ನೋಡುವುದಕ್ಕೂ ಆತನಿಗೆ ಶಿಕ್ಷೆಯಾಗುವುದಕ್ಕೂ ಮುಂಚೆ ನೋಡುವುದಕ್ಕೂ ಬೇರೆ ಮಾನದಂಡಗಳಿವೆ. ಪೊಲೀಸರು ಸಂಗ್ರಹಿಸಿರುವ ದಾಖಲೆ ಮತ್ತು ವಿಚಾರಣಾಧೀನ ಪರಿಗಣಿಸಿರುವ ದಾಖಲೆಗಳನ್ನು ನೋಡಬೇಕಾಗುತ್ತದೆ. ಶಿಕ್ಷೆಯದ ಮೇಲಿನ ಪ್ರಕರಣವೇ ಬೇರೆ. ಇದರಲ್ಲಿ ಪೂರ್ವಾಗ್ರಹದ ಪ್ರಶ್ನೆ ಇರುವುದಿಲ್ಲ. ಹೀಗಾಗಿ, ವಿಸ್ತೃತವಾಗಿ ವಿಚಾರಣೆ ನಡೆಸಬೇಕಿದೆ ಎಂದು ನ್ಯಾಯಾಲಯ ಹೇಳಿತು.

ಟೆಂಗರಿಕರ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಪಿ ಪಿ ಹೆಗ್ಡೆ ಅವರು “ಕೊಲೆಯಾದ ಎರಡು ದಿನಗಳಲ್ಲಿ ಟೆಂಗರಿಕರ್‌ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿದ್ದಾರೆ. ಆದರೂ ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪ ಮಾಡಲಾಗಿದೆ” ಎಂದರು.

ಇದಕ್ಕೆ ಆಕ್ಷೇಪಿಸಿದ ಸಿಬಿಐ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು “ಮುಗ್ಧರನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಿ ನೈಜ ಆರೋಪಿಗಳನ್ನು ರಕ್ಷಿಸುವ ಕೆಲಸವನ್ನು ಟೆಂಗರಿಕರ್ ಮಾಡಿದ್ದಾರೆ. ಕೊಲೆಗೆ ಬಳಸಿದ್ದ ಶಸ್ತ್ರಾಸ್ತ್ರಗಳನ್ನು ಮರೆಮಾಚಿ, ನಕಲಿ ಅಸ್ತ್ರಗಳಿಗೆ ಮರಣೋತ್ತರ ಪರೀಕ್ಷೆಯ ಬಳಿಕ ಶವದ ರಕ್ತವನ್ನು ಹಾಕಲಾಗಿದೆ. ಸತ್ಯ ನುಡಿಯದಂತೆ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದಾರೆ. ಏಳು ವರ್ಷ ಶಿಕ್ಷೆಯಲ್ಲಿ 72 ದಿನ ಮಾತ್ರ ಟೆಂಗರಿಕರ್‌ ಶಿಕ್ಷೆ ಅನುಭವಿಸಿದ್ದಾರೆ. ಈ ಹಂತದಲ್ಲಿ ಅವರಿಗೆ ನೆರವಾಗಬಾರದು” ಎಂದರು.

Also Read
ಜೀವಾವಧಿ ಶಿಕ್ಷೆ ಅಮಾನತುಗೊಳಿಸಿ, ಜಾಮೀನು ಕೋರಿದ ವಿನಯ್‌ ಕುಲಕರ್ಣಿ, ಇಂಡಿ: ಸಿಬಿಐಗೆ ಹೈಕೋರ್ಟ್‌ ನೋಟಿಸ್‌

ಎಲ್ಲರ ವಾದ ಆಲಿಸಿದ ಪೀಠವು ಸಿಬಿಐ ಸಲ್ಲಿಸಿರುವ ಆಕ್ಷೇಪಣೆಯನ್ನು ಸ್ವೀಕರಿಸಿ, ವಿಚಾರಣೆಯನ್ನು ಮೇ 26ಕ್ಕೆ ಮುಂದೂಡಿತು.

2016ರ ಜೂನ್‌ 15ರಂದು ಧಾರವಾಡದಲ್ಲಿ ಯೋಗೀಶ್‌ ಗೌಡ ಹತ್ಯೆಯಾಗಿತ್ತು. ಆ ಸಂದರ್ಭದಲ್ಲಿ ಧಾರವಾಡ ಸಬ್‌ಅರ್ಬನ್‌ ಠಾಣೆಯ ಇನ್‌ಸ್ಪೆಕ್ಟರ್‌ ಆಗಿ ಟೆಂಗರಿಕರ್‌ ಕರ್ತವ್ಯನಿರ್ವಹಿಸುತ್ತಿದ್ದರು. ಕಾಂಗ್ರೆಸ್‌ ನಾಯಕ ವಿನಯ್‌ ಕುಲಕರ್ಣಿಯನ್ನು ರಕ್ಷಿಸಲು ಟೆಂಗರಿಕರ್‌ ಸಾಕ್ಷ್ಯ ನಾಶ ಮಾಡಿದ್ದರು. ಈ ಪ್ರಕರಣದಲ್ಲಿ ವಿನಯ್‌ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆಯಾಗಿದೆ.

Kannada Bar & Bench
kannada.barandbench.com