[ಯೋಗೀಶ್‌ ಗೌಡ ಹತ್ಯೆ ಪ್ರಕರಣ] ಕಾಂಗ್ರೆಸ್‌ ಶಾಸಕ ವಿನಯ ಕುಲಕರ್ಣಿಯಿಂದ ಬೆದರಿಕೆ: ಗುರುನಾಥ್‌ ಪರ ವಕೀಲರ ಆರೋಪ

ಮಲ್ಲವ್ವ ಮೊದಲಿನಿಂದಲೂ ಕಾನೂನು ಹೋರಾಟದಲ್ಲಿ ವಿನಯ ಕುಲಕರ್ಣಿ ಪರವಾಗಿಯೇ ಸಹಕರಿಸುತ್ತಿದ್ದಾರೆ. ವಾಸ್ತವದಲ್ಲಿ ಪ್ರಾಸಿಕ್ಯೂಷನ್‌ಗೆ ಸಹಕರಿಸುತ್ತೇನೆ ಎಂದು ಅರ್ಜಿ ಹಾಕಿಸಿರುವುದೇ ವಿನಯ ಕುಲಕರ್ಣಿ ಎಂದು ಆಕ್ಷೇಪಿಸಿರುವ ಗುರುನಾಥ್‌ ಗೌಡರ್.‌
Vinay Kulkarni and Karnataka HC
Vinay Kulkarni and Karnataka HC
Published on

“ಕಾಂಗ್ರೆಸ್‌ನ ಧಾರವಾಡ ಶಾಸಕ ವಿನಯ ಕುಲಕರ್ಣಿ ತಮ್ಮ ಅಧಿಕಾರ ಬಳಸಿಕೊಂಡು ಪೊಲೀಸರ ಮೂಲಕ ಬೆದರಿಕೆ ಹಾಕುತಿದ್ದಾರೆ” ಎಂದು ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಕೊಲೆಯಾಗಿರುವ ಯೋಗೀಶ್‌ಗೌಡ ಗೌಡರ್ ಅವರ ಅಣ್ಣ ಗುರುನಾಥ ಗೌಡರ್‌ ಪರ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ಶುಕ್ರವಾರ ವಿವರಿಸಿದರು.

ಯೋಗೀಶ್‌ಗೌಡ ಗೌಡರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮೊದಲ ಆರೋಪಿ ಬಸವರಾಜ ಶಿವಪ್ಪ ಮುತ್ತಗಿಯನ್ನು ಮೂರನೇ ಬಾರಿಗೆ ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಮಾನಿಸಿದ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಗುರುನಾಥಗೌಡ ಗೌಡರ್‌ ಪರ ವಕೀಲರು ಮಧ್ಯಂತರ ಅರ್ಜಿ ಸಲ್ಲಿಸಿ “ಈ ಪ್ರಕರಣದಲ್ಲಿ ಯೋಗಿಶ್‌ಗೌಡ ಗೌಡರ್ ಪತ್ನಿ ಮಲ್ಲವ್ವ ಪ್ರಾಸಿಕ್ಯೂಷನ್‌ಗೆ ಸಹಕರಿಸುತ್ತೇನೆ ಎಂದು ಹಾಕಿರುವ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಬಾರದು. ಮಲ್ಲವ್ವ ಮೊದಲಿನಿಂದಲೂ ಕಾನೂನು ಹೋರಾಟದಲ್ಲಿ ವಿನಯ ಕುಲಕರ್ಣಿ ಪರವಾಗಿಯೇ ಸಹಕರಿಸುತ್ತಿದ್ದಾರೆ. ವಾಸ್ತವದಲ್ಲಿ ಪ್ರಾಸಿಕ್ಯೂಷನ್‌ಗೆ ಸಹಕರಿಸುತ್ತೇನೆ ಎಂದು ಅರ್ಜಿ ಹಾಕಿಸಿರುವುದೇ ವಿನಯ ಕುಲಕರ್ಣಿ” ಎಂದು ಆರೋಪಿಸಿದರು.

“ವಿನಯ ಕುಲಕರ್ಣಿ ಸಾಕ್ಷಿಗಳನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಉದಾಹರಣೆಯಾಗಿ ನ್ಯಾಯಾಲಯದಲ್ಲಿ ಸ್ವಪ್ರೇರಣೆಯಿಂದ ಹೇಳಿಕೆ ಕೊಟ್ಟಿದ್ದ ಎಸಿಪಿ ಶಿವಾನಂದ ಛಲವಾದಿ ಈಗ ಪ್ರತಿಕೂಲ ಸಾಕ್ಷಿಯಾಗಿದ್ದಾರೆ” ಎಂದು ವಿವರಿಸಿದರು.

ಸಿಬಿಐ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು “ಈ ಪ್ರಕರಣದಲ್ಲಿ ಆರೋಪಿ ಮುತ್ತಗಿ ಸ್ವಯಂ ಸ್ಫೂರ್ತಿಯಿಂದ‌ ಮಾಫಿ ಸಾಕ್ಷಿಯಾಗಲು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ, ನ್ಯಾಯಾಲಯ ಅವರ ಮಾಫಿಯನ್ನು ಒಪ್ಪಿಕೊಳ್ಳುವ ಮುನ್ನ ಷರತ್ತುಗಳನ್ನು ಒಡ್ಡಿಲ್ಲ ಮತ್ತು ಅವುಗಳಿಗೆ ಆರೋಪಿ ಬದ್ಧವಾಗಿಲ್ಲ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹೀಗಾಗಿ, ಈ ಪ್ರಕರಣದಲ್ಲಿ ಯಾವುದೇ ಕಾನೂನಾತ್ಮಕ ಲೋಪ ಇಲ್ಲ” ಎಂದರು ಸಮರ್ಥಿಸಿದರು.

ವಾದ ಆಲಿಸಿದ ಪೀಠವು ಹೆಚ್ಚಿನ ವಾದಾಂಶಗಳನ್ನು ಲಿಖಿತವಾಗಿ ಸಲ್ಲಿಸುವಂತೆ ಸಿಬಿಐ ಪರ ವಕೀಲ ಪಿ ಪ್ರಸನ್ನ ಕುಮಾರ್ ಅವರಿಗೆ ಸೂಚಿಸಿ ವಿಚಾರಣೆಯನ್ನು ಮಾರ್ಚ್‌ 17ಕ್ಕೆ ಮುಂದೂಡಿತು.

Also Read
ಶಾಸಕ ವಿನಯ್‌ ಜೊತೆ ಜಿ.ಪಂ ಸಭೆಯಲ್ಲಿ ಗಲಾಟೆ ಬಳಿಕ ಸಹೋದರ ಯೋಗೀಶ್‌ ಹತ್ಯೆ: ಅಣ್ಣ ಗುರುನಾಥ ಗೌಡರಿಂದ ಸಾಕ್ಷಿ ದಾಖಲು

ಪ್ರಕರಣದ ಹಿನ್ನೆಲೆ: ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್‌ 15ರಂದು ಯೋಗೀಶ್‌ಗೌಡ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ಈ ಪ್ರಕರಣದಲ್ಲಿ ಒಟ್ಟು 21 ಆರೋಪಿಗಳಿದ್ದಾರೆ. ವಿನಯ ಕುಲಕರ್ಣಿ 15ನೇ ಆರೋಪಿಯಾಗಿದ್ದಾರೆ. ಬಸವರಾಜ ಮುತ್ತಗಿಯೇ ಹತ್ಯೆಯ ಪ್ರಮುಖ ಆರೋಪಿ. ಹತ್ಯೆ ನಡೆಸಲು ಬೆಂಗಳೂರಿನಿಂದ ಹುಡುಗರನ್ನು ಧಾರವಾಡಕ್ಕೆ ಕರೆಸಿಕೊಂಡಿದ್ದೇ ಬಸವರಾಜ ಮುತ್ತಗಿ ಎಂಬುದು ಸಿಬಿಐ ಪ್ರತಿಪಾದನೆಯಾಗಿದೆ.

Kannada Bar & Bench
kannada.barandbench.com