
ಕೃಷಿ ಕಾಯಿದೆಗಳನ್ನು ವಿರೋಧಿಸಿ 2021ರಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಮಹಿಳೆಯೊಬ್ಬರು ಭಾಗವಹಿಸಿದ್ದರ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಬಾಕಿ ಇರುವ ಮಾನಹಾನಿ ಮೊಕದ್ದಮೆ ರದ್ದುಗೊಳಿಸುವಂತೆ ಕೋರಿ ನಟಿ ಮತ್ತು ಸಂಸದೆ ಕಂಗನಾ ರನೌತ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
“ನಿಮ್ಮ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯ ಏನು? ನೀವು ಮಸಾಲೆ ಸೇರಿಸಿದಿರಿ. ಇದು ಸರಳವಾದ ಮರುಟ್ವೀಟ್ ಆಗಿರಲಿಲ್ಲ” ಎಂದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಇಂತಹ ವಿಚಾರಗಳ ಕುರಿತು ವಿಚಾರಣಾ ನ್ಯಾಯಾಲಯವೇ ತೀರ್ಮಾನ ತೆಗೆದುಕೊಳ್ಳಬೇಕು ತಾನಲ್ಲ" ಎಂದಿತು.
ಭಟಿಂಡಾ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ಬಾಕಿ ಇರುವ ಮಾನಹಾನಿ ಮೊಕದ್ದಮೆ ಪ್ರಶ್ನಿಸಿ ರನೌತ್ ಅರ್ಜಿ ಸಲ್ಲಿಸಿದ್ದರು. ಪ್ರತಿಭಟನೆ ನಡೆಸುತ್ತಿದ್ದ ವೃದ್ಧೆ ಮಹಿಂದರ್ ಕೌರ್ ಅವರಿಗೆ ಆಂದೋಲನದಲ್ಲಿ ಭಾಗವಹಿಸಲು ಹಣ ನೀಡಲಾಗಿದೆ ಎಂದು ರನೌತ್ ಆರೋಪಿಸಿದ್ದರು.
“ಪ್ರಭಾವಿ ಅಜ್ಜಿ ಎಂದು ಟೈಮ್ ಮ್ಯಾಗಜೀನ್‌ನಲ್ಲಿ ಪ್ರಸಿದ್ಧರಾಗಿದ್ದವರು ಈಗ ₹100 ಕ್ಕೆ ಸಿಗುತ್ತಿದ್ದಾರೆ. ಭಾರತದ ಅಂತಾರಾಷ್ಟ್ರೀಯ ಸಾರ್ವಜನಿಕ ರಾಯಭಾರಿಯನ್ನು (ಅಜ್ಜಿ) ಪಾಕಿಸ್ತಾನದ ಪತ್ರಕರ್ತರು ಮುಜಗರ ಉಂಟುಮಾಡುವ ರೀತಿಯಲ್ಲಿ ಅಪಹರಿಸಿದ್ದಾರೆ. ಅಂತಾರಾಷ್ಟ್ರೀಯವಾಗಿ ನಮ್ಮ ಪರ ಮಾತನಾಡಲು ನಮ್ಮದೇ ಜನರು ಬೇಕು” ಎಂದು ಅವರು ಟ್ವೀಟ್ ಮಾಡಿದ್ದರು.
ಆದರೆ ರನೌತ್ ಅವರು ಮಾತನಾಡಿದ್ದು ಕೌರ್ ಅವರ ಬಗ್ಗೆ ಅಲ್ಲ ಬದಲಿಗೆ ಶಾಹೀನ್ ಬಾಗ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಿಲ್ಕಿಸ್ ಬಾನೊ ಎನ್ನುವವರ ಬಗ್ಗೆ. ನಟಿ ಕೂಡ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು ಅದನ್ನು ಪರಿಗಣಿಸಿಲ್ಲ ಎಂದು ಅವರ ಪರ ವಕೀಲರು ವಾದಿಸಿದರು.
ಆದರೆ ಇದರಿಂದ ತೃಪ್ತವಾಗದ ನ್ಯಾಯಾಲಯ ರನೌತ್ ಅವರ ಟ್ವೀಟ್‌ಗಳ ಬಗ್ಗೆ ಪ್ರತಿಕ್ರಿಯಿಸಲು ಇಚ್ಛಿಸಲಿಲ್ಲ.
"ಸಾಕ್ಷ್ಯ ಸ್ವೀಕಾರಾರ್ಹವಲ್ಲದ ಕಾರಣ ದೂರನ್ನು (ವಿಚಾರಣಾ ನ್ಯಾಯಾಲಯ) ವಜಾಗೊಳಿಸಬಹುದು. ನಿಮ್ಮ ಟ್ವೀಟ್ ಬಗ್ಗೆ ಹೇಳಿಕೆ ನೀಡುವಂತೆ ನಮ್ಮನ್ನು ಕೇಳಬೇಡಿ. ಇದು ನಿಮ್ಮ ವಿಚಾರಣೆಗೆ ಅಡ್ಡಿಪಡಿಸಬಹುದು. ನೀವು ಅರ್ಜಿ ಹಿಂತೆಗೆದುಕೊಳ್ಳಿ. ಹಿಂತೆಗೆದುಕೊಳ್ಳಲು ಬಯಸುತ್ತೀರಾ? " ಎಂದು ನ್ಯಾಯಾಲಯ ಕೇಳಿತು. ನಂತರ ವಕೀಲರು ಅರ್ಜಿ ಹಿಂಪಡೆಯಲು ನಿರ್ಧರಿಸಿದರು.