ಬೆಂಗಳೂರು ಸ್ಫೋಟದ ಆರೋಪಿ ಮದನಿಗೆ 'ನೀವೊಬ್ಬ ಅಪಾಯಕಾರಿ ವ್ಯಕ್ತಿ' ಎಂದ ಸುಪ್ರೀಂಕೋರ್ಟ್

ಆರು ವರ್ಷಗಳಿಂದಲೂ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿರುವುದರಿಂದ ತಮ್ಮನ್ನು ಕೇರಳದ ಸ್ವಂತ ಊರಿಗೆ ತೆರಳಲು ಅನುಮತಿ ನೀಡಬೇಕೆಂದು ಎಂದು ಅಬ್ದುಲ್ ನಾಸಿರ್ ಮದನಿ ಅರ್ಜಿ ಸಲ್ಲಿಸಿದ್ದರು.
ಬೆಂಗಳೂರು ಸ್ಫೋಟದ ಆರೋಪಿ ಮದನಿಗೆ 'ನೀವೊಬ್ಬ ಅಪಾಯಕಾರಿ ವ್ಯಕ್ತಿ' ಎಂದ ಸುಪ್ರೀಂಕೋರ್ಟ್

2008ರ ಬೆಂಗಳೂರು ಸ್ಫೋಟ ಆರೋಪಿ ಅಬ್ದುಲ್‌ ನಾಸಿರ್‌ ಮದನಿ ಒಬ್ಬ ಅಪಾಯಕಾರಿ ವ್ಯಕ್ತಿ ಎಂದು ಸುಪ್ರೀಂಕೋರ್ಟ್‌ ಸೋಮವಾರ ಹೇಳಿದೆ.

ಆರು ವರ್ಷಗಳಿಂದಲೂ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿರುವುದರಿಂದ ಕೇರಳದ ತಮ್ಮ ಊರಿಗೆ ತೆರಳಲು ಅನುಮತಿ ನೀಡಬೇಕೆಂದು ಕೋರಿ ಮದನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ, ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

Also Read
ವಿಚಾರಣೆ ವಿಳಂಬ: ಕೇರಳಕ್ಕೆ ತೆರಳಲು ಅನುಮತಿಸುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ ಬೆಂಗಳೂರು ಸ್ಫೋಟ ಆರೋಪಿ ಮದನಿ

“ನೀವು ಅಪಾಯಕಾರಿ ವ್ಯಕ್ತಿ. (ಈ ಹಿಂದೆ) ನಾನಿದ್ದ ಪೀಠದಿಂದ ಜಾಮೀನು ನೀಡಲಾಗಿತ್ತು” ಎಂದು ನ್ಯಾ. ಬೊಬ್ಡೆ ಹೇಳಿದರು.

ಆದರೆ, ಹಿರಿಯ ನ್ಯಾಯವಾದಿ ಜಯಂತ್ ಭೂಷಣ್ ಅವರು, ನ್ಯಾ. ಚಲಮೇಶ್ವರ್‌ ಅವರಿದ್ದ ಮತ್ತೊಂದು ಪೀಠ ಜಾಮೀನು ನೀಡಿತ್ತು. ವೈಯಕ್ತಿಕ ಕಾರಣಗಳಿಗಾಗಿ ಸ್ವಲ್ಪ ಸಮಯದವರೆಗೆ ಕೇರಳಕ್ಕೆ ಪ್ರಯಾಣಿಸಲು ನ್ಯಾ. ಬೊಬ್ಡೆ ಅವರು ಮದನಿಗೆ ಅವಕಾಶ ನೀಡಿದ್ದರು” ಎಂಬುದಾಗಿ ಈ ವೇಳೆ ತಿಳಿಸಿದರು.

ಮತ್ತೊಂದೆಡೆ ತಾವು ಈ ಹಿಂದೆ ಮದನಿ ಪರವಾಗಿ ವಕಾಲತ್ತು ವಹಿಸಿರುವ ಸಾಧ್ಯತೆ ಇರುವುದರಿಂದ ಪ್ರಕರಣದ ವಿಚಾರಣೆ ನಡೆಸಲು ಆಗದು ಎಂದು ನ್ಯಾ. ರಾಮಸುಬ್ರಮಣಿಯನ್ ತಿಳಿಸಿದರು. ಈ ಕುರಿತು ಪರಿಶೀಲನೆ ನಡೆಸಲು ಮದನಿ ಪರ ವಕೀಲರು ಸಮಯಾವಕಾಶ ಕೋರಿದ್ದರಿಂದ ಪೀಠ ಪ್ರಕರಣವನ್ನು ಮುಂದಿನ ವಾರಕ್ಕೆ ಮುಂದೂಡಿತು.

ಅನಾರೋಗ್ಯದ ಕಾರಣಕ್ಕೆ ಸುಪ್ರೀಂಕೋರ್ಟ್‌ ಮದನಿಗೆ 2014 ರಲ್ಲಿ ಜಾಮೀನು ನೀಡಿತ್ತು. ಆದರೆ ಬೆಂಗಳೂರನ್ನು ತೊರೆಯದಂತೆ ಆದೇಶಿಸಿತ್ತು. ಪರಿಣಾಮವಾಗಿ ಮದನಿ ಅಂದಿನಿಂದಲೂ ನಗರದಲ್ಲಿ ನೆಲೆಸಿದ್ದಾರೆ. ಜಾಮೀನು ಷರತ್ತಿನ ಅವಧಿ ಮುಗಿದಿರುವುದರಿಂದ ಜಾಮೀನು ಷರತ್ತನ್ನು ಸಡಿಲಗೊಳಿಸುವಂತೆ ಅವರು ಮನವಿಯಲ್ಲಿ ಕೋರಿದ್ದರು.

ನಾಲ್ಕು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳ್ಳಲಿದೆ ಎಂದು ಪ್ರತಿವಾದಿಗಳು 2014 ರಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. ಆದರೆ, ಆರಕ್ಕಿಂತ ಹೆಚ್ಚು ವರ್ಷವೇ ಕಳೆದರೂ ವಿಚಾರಣೆ ಪ್ರಕ್ರಿಯೆ ಅಂತ್ಯಗೊಂಡಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿತ್ತು. ವಕೀಲ ಹ್ಯಾರಿಸ್‌ ಬೀರನ್‌ ಅವರು ವಕೀಲ ಆರ್‌ ಎಸ್‌ ಜೆನಾ ಅವರ ಮೂಲಕ ಪ್ರಕರಣದ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ.

No stories found.
Kannada Bar & Bench
kannada.barandbench.com