ಪ್ರೊ. ಅಲಿ ಹೇಳಿಕೆ: ಎಸ್‌ಐಟಿ ತನಿಖೆ ವಿಸ್ತರಣೆಗೆ ಸುಪ್ರೀಂ ಕಿಡಿ, "ನಿಮಗೆ ಬೇಕಿರುವುದು ನಿಘಂಟು!" ಎಂದು ತರಾಟೆ

"ಎಸ್ಐಟಿ ಮೇಲ್ನೋಟಕ್ಕೆ ತಪ್ಪು ದಿಕ್ಕಿನಲ್ಲಿ ಸಾಗುತ್ತಿರುವಂತಿದೆಯಲ್ಲಾ?" ಎಂದು ನ್ಯಾಯಾಲಯ ಪ್ರಶ್ನಿಸಿತು.
ಪ್ರೊ. ಅಲಿ ಹೇಳಿಕೆ: ಎಸ್‌ಐಟಿ ತನಿಖೆ ವಿಸ್ತರಣೆಗೆ ಸುಪ್ರೀಂ ಕಿಡಿ, "ನಿಮಗೆ ಬೇಕಿರುವುದು ನಿಘಂಟು!" ಎಂದು ತರಾಟೆ
Published on

ಆಪರೇಷನ್ ಸಿಂಧೂರ್ ಕುರಿತು ಅಶೋಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ಅವರು ಪ್ರಕಟಿಸಿದ ಫೇಸ್‌ಬುಕ್ ಪೋಸ್ಟ್‌ಗಳನ್ನು ಪರಿಶೀಲಿಸಲು ರಚಿಸಲಾದ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಸುಪ್ರೀಂ ಕೋರ್ಟ್ ಬುಧವಾರ ಮತ್ತೊಮ್ಮೆ ಟೀಕಿಸಿದೆ.

ಎಸ್‌ಐಟಿ ತನ್ನ ತನಿಖೆಯ ವ್ಯಾಪ್ತಿಯನ್ನು ಅನಗತ್ಯವಾಗಿ ವಿಸ್ತರಿಸುತ್ತಿದೆ ಎಂದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ, ತನಿಖಾ ಸಂಸ್ಥೆ ತನ್ನ ತನಿಖೆಯನ್ನು ಅಲಿ ಅವರ ಫೇಸ್ ಬುಕ್ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ದಾಖಲಾಗಿರುವ ಎರಡು ಎಫ್‌ಐಆರ್‌ಗಳಿಗಷ್ಟೇ ಸೀಮಿತಗೊಳಿಸಬೇಕು ಎಂದು ತಾಕೀತು ಮಾಡಿತು.

Also Read
ಆಪರೇಷನ್ ಸಿಂಧೂರ್ ಕುರಿತ ಹೇಳಿಕೆ: ಪ್ರೊ. ಅಲಿ ವಿರುದ್ಧದ ತನಿಖಾ ವ್ಯಾಪ್ತಿ ವಿಸ್ತರಿಸದಂತೆ ಎಸ್ಐಟಿಗೆ ಸುಪ್ರೀಂ ತಾಕೀತು

ಮೇಲ್ನೋಟಕ್ಕೆ, ಎಸ್‌ಐಟಿ ತನ್ನನ್ನು ತಾನೇ ದಿಕ್ಕುತಪ್ಪಿಸಿಕೊಳ್ಳುತ್ತಿರುವುದು ಏಕೆ? (ಮಹಮೂದಾಬಾದ್ ಬರೆದ) ಆ ಲೇಖನ ಒಂದು ಅಭಿಪ್ರಾಯವಾಗಿದ್ದು, ಅದು ಅಪರಾಧವೋ ಮತ್ತೇನೋ ಅಲ್ಲ ಎಂದು ಎಸ್‌ಐಟಿ ಹೇಳಬಹುದು!" ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು.

ಎಸ್‌ಐಟಿ ತನಿಖೆ ಪೂರ್ಣಗೊಳಿಸಲು ಎರಡು ತಿಂಗಳ ಕಾಲಾವಕಾಶ ನೀಡುವಂತೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ವಿ ರಾಜು ಮಾಡಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು .

"ಈ ಎಫ್‌ಐಆರ್‌ನಲ್ಲಿ ಏನೂ ಇಲ್ಲ ಎಂದು ಎಸ್‌ಐಟಿ ಯಾವಾಗ ಬೇಕಾದರೂ ಹೇಳಬಹುದು. ನಾವು ಇಲ್ಲಿ ಇನ್ನಾವುದೋ ವಿಷಯಗಳನ್ನು ಪರಿಶೀಲಿಸುತ್ತಿದ್ದೇವೆ. ಆದರೆ ನಾವು ಬೇರೆ ಪ್ರಕರಣಗಳ ವಿಚಾರಣೆ ನಡೆಸುತ್ತಿರುತ್ತೇವೆ. ಇದಕ್ಕಾಗಿ ಎರಡು ತಿಂಗಳು ಏಕೆ ತೆಗೆದುಕೊಳ್ಳಬೇಕು? ಈ ಪ್ರಕರಣವನ್ನು ಮುಕ್ತಾಯಗೊಳಿಸಬಹುದು” ಎಂದು ನ್ಯಾಯಾಲಯ ಹೇಳಿತು.

Also Read
ಆಪರೇಷನ್ ಸಿಂಧೂರ್ ಕುರಿತ ಹೇಳಿಕೆ: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಬಂಧಿತ ಪ್ರಾಧ್ಯಾಪಕ ಅಲಿ ಖಾನ್‌

ಭವಿಷ್ಯದಲ್ಲಿ ಅಗತ್ಯವಿದ್ದರೆ ಮಹ್ಮದಾಬಾದ್ ಅವರು ಎಸ್‌ಐಟಿ ತನಿಖೆಗೆ ಹಾಜರಾಗಬೇಕು ಎಂದು ನಿರ್ದೇಶನ ನೀಡುವಂತೆ ಎಎಸ್‌ಜಿ ರಾಜು ನ್ಯಾಯಾಲಯವನ್ನು ಮನವಿ ಮಾಡಿದಾಗ ಅಸಮಾಧಾನಗೊಂಡ ನ್ಯಾ. ಕಾಂತ್‌, “ನಿಮಗೆ ಮಹ್ಮದಾಬಾದ್‌ ಅವರ ಅವಶ್ಯಕತೆ ಇಲ್ಲ. ನಿಮಗೆ ಬೇಕಿರುವುದು ಒಂದು ನಿಘಂಟು” ಎಂದು ತರಾಟೆಗೆ ತೆಗೆದುಕೊಂಡರು.

ವಾಸ್ತವದಲ್ಲಿ ಆಪರೇಷನ್ ಸಿಂಧೂರ್ ಮತ್ತು ಭಾರತದ ಭಯೋತ್ಪಾದನೆಯ ವಿರುದ್ಧದ ಸಮರವನ್ನು ಶ್ಲಾಘಿಸಿದ್ದ ಮಹ್ಮದಾಬಾದ್‌ ಅವರ ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್‌, ಅದೇ ವೇಳೆ ಯುದ್ಧ ಪಿಪಾಸುಗಳು ಮತ್ತು ಬಲಪಂಥೀಯ ಬೆಂಬಲಿಗರನ್ನು ಟೀಕಿಸಿತ್ತು. ಮಹ್ಮದಾಬಾದ್‌ ಅವರ ಪರವಾಗಿ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ವಾದ ಮಂಡಿಸಿದರು.

Kannada Bar & Bench
kannada.barandbench.com