ತಿರುಪತಿ ಲಡ್ಡು ವಿವಾದ: ವಿವಿಧ ಮಾಧ್ಯಮ ಸಂಸ್ಥೆಗಳಿಗೆ ಸಮನ್ಸ್ ನೀಡಿದ ದೆಹಲಿ ಹೈಕೋರ್ಟ್

ಮಾನಹಾನಿ ಮೊಕದ್ದಮೆ ಹೂಡಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕನಿಗೆ ದೆಹಲಿ ಹೈಕೋರ್ಟ್ 'ರಾಜಕಾರಣಿಗಳು ಉನ್ನತ ಸಾರ್ವಜನಿಕ ಹುದ್ದೆಗಳಲ್ಲಿ ಇರುವುದರಿಂದ ಸ್ವಲ್ಪ ದಪ್ಪ ಚರ್ಮದವರಾಗಿರಬೇಕುʼ ಎಂದು ತಿಳಿ ಹೇಳಿತು.
YV Subba Reddy and Delhi High Court
YV Subba Reddy and Delhi High Court
Published on

ತಿರುಪತಿ ಲಡ್ಡುಪ್ರಸಾದಕ್ಕೆ ಸಂಬಂಧಿಸಿ ಕೆಲ ಮಾಧ್ಯಮ ಸಂಸ್ಥೆಗಳು ತಮ್ಮ ವಿರುದ್ಧ ಅವಹೇಳನಕರ ವರದಿ ಪ್ರಕಟಿಸಿವೆ ಎಂದು ದೂರಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಾಜಿ ಅಧ್ಯಕ್ಷ ವೈ ವಿ ಸುಬ್ಬಾ ರೆಡ್ಡಿ ಮತ್ತು ಅವರ ಪತ್ನಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಂಗಳವಾರ ವಿವಿಧ ಮಾಧ್ಯಮ ಸಂಸ್ಥೆಗಳಿಗೆ ಸಮನ್ಸ್ ಜಾರಿ ಮಾಡಿದೆ [ಯೆರ‍್ರಂ ವೆಂಕಟ ಸುಬ್ಬಾರೆಡ್ಡಿ ಮತ್ತಿತರರು ಹಾಗೂ ಉಷೋದಯ ಎಂಟರ್‌ಪ್ರೈಸಸ್‌ ಪ್ರೈವೇಟ್‌ ಲಿಮಿಟೆಡ್‌ ಇನ್ನಿತರರ ನಡುವಣ ಪ್ರಕರಣ]

ಪ್ರಸಾದಕ್ಕೆ ಬಳಸುವ ತುಪ್ಪ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳಿಗೂ ತಮಗೂ ನಂಟು ಕಲ್ಪಿಸಿ ಪ್ರಕಟಿಸಿರುವ ಮಾನಹಾನಿಕರ ಲೇಖನಗಳನ್ನು ತೆಗೆದುಹಾಕಬೇಕು, ಜೊತೆಗೆ ₹10 ಕೋಟಿ ಪರಿಹಾರ ಸಹ ಕೊಡಿಸಬೇಕು ಎಂದು ಕೋರಿದ್ದರು.

Also Read
[ತಿರುಪತಿ ಲಡ್ಡು ವಿವಾದ] ಸಿಬಿಐ ನಿರ್ದೇಶಕರು ಮಾಡಿದ ನೇಮಕಾತಿ ಸುಪ್ರೀಂ ತೀರ್ಪಿನ ಉಲ್ಲಂಘನೆ: ಆಂಧ್ರಪ್ರದೇಶ ಹೈಕೋರ್ಟ್

ಮುಂದೆ ಪ್ರಕಟವಾಗಲಿರುವ ವರದಿಗಳು ನ್ಯಾಯಾಲಯದ ವಿಚಾರಣೆಯ ಅಧೀನದಲ್ಲಿರುತ್ತವೆ ಜೊತೆಗೆ ಅವುಗಳಿಗೆ ಅವುಗಳದೇ ಆದ ಪರಿಣಾಮಗಳು ಇರುತ್ತವೆ ಎಂದು ನ್ಯಾ. ಅಮಿತ್‌ ಬನ್ಸಾಲ್‌ ಹೇಳಿದರು.

ಅಲ್ಲದೆ ಅವರು “ರಾಜಕಾರಣಿಗಳು ಉನ್ನತ ಸಾರ್ವಜನಿಕ ಹುದ್ದೆಗಳಲ್ಲಿ ಇರುವುದರಿಂದ ಸ್ವಲ್ಪ ದಪ್ಪ ಚರ್ಮದವರಾಗಿರಬೇಕು" ಎಂದು ಕಿವಿಮಾತು ಹೇಳಿದರು.

ಮಾಧ್ಯಮ ವರದಿಗಳಿಗೆ ಸಂಬಂಧಿಸಿದಂತೆ ಏಕಪಕ್ಷೀಯವಾಗಿ ತಡೆಯಾಜ್ಞೆ ನೀಡಬಾರದು ಎಂದು ಈಗಾಗಲೇ ಪ್ರಕಟವಾದ ತೀರ್ಪುಗಳಿಂದ ಇತ್ಯರ್ಥವಾಗಿದೆ ಎಂದು ಕೂಡ ನ್ಯಾಯಾಲಯ ಇದೇ ವೇಳೆ ತಿಳಿಸಿತು.

ಸುಬ್ಬಾರೆಡ್ಡಿ ಅವರ ಪರವಾಗಿ ಹಿರಿಯ ವಕೀಲ ದಯಾನ್‌ ಕೃಷ್ಣನ್‌ ವಾದ ಮಂಡಿಸಿದರು. ತನಿಖೆ ಮುಂದುವರಿದಿರುವಾಗಲೇ ಮಾಧ್ಯಮಗಳು ತಮ್ಮನ್ನು ಅಪರಾಧಿಯಂತೆ ಚಿತ್ರಿಸುತ್ತಿದ್ದು, ಇದು ತನ್ನ ಗೌರವ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ ಎಂದು ಅವರು ಹೇಳಿದರು.

ಪತ್ರಿಕೋದ್ಯಮಿ, ದಿವಂಗತ ರಾಮೋಜಿರಾವ್‌ ಒಡೆತನದ ಉಷೋದಯ ಎಂಟರ್‌ಪ್ರೈಸಸ್, ಈನಾಡು ಪಬ್ಲಿಕೇಷನ್ಸ್, ಎಕ್ಸ್‌ಪ್ರೆಸ್ ನೆಟ್‌ವರ್ಕ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳು ಹಾಗೂ ಗೂಗಲ್ ಸಂಸ್ಥೆಯನ್ನು ಕೂಡ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

Also Read
ಕಾಂಗ್ರೆಸ್‌ಗೆ ತಿರುಪತಿ ಲಡ್ಡು ವಿವಾದ ತಳಕು: ವಿಡಿಯೋ ತೆಗೆದುಹಾಕಲು ನ್ಯೂಸ್ 18 ರಾಜಸ್ಥಾನಕ್ಕೆ ಎನ್‌ಬಿಡಿಎಸ್‌ಎ ಸೂಚನೆ

ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪರ ವಕೀಲರು ವಾದ ಮಂಡಿಸಿ ತಮ್ಮ ಪತ್ರಿಕೆ ಮಾನಹಾನಿಕರ ವರದಿಗಳನ್ನು ಪ್ರಕಟಿಸಿಲ್ಲ. ವರದಿ ಎಸ್‌ಐಟಿ ಮಾಹಿತಿ ಆಧರಿಸಿದೆ ಎಂದರು.

ಪ್ರಾಣಿಗಳ ಕೊಬ್ಬು ಬಳಸಿ ತಿರುಪತಿ ಲಡ್ಡು ತಯಾರಾಗುತ್ತಿದೆ ಎಂಬ ಆರೋಪ ವಿವಾದಕ್ಕೆ ತಿದಿಯೊತ್ತಿತ್ತು. ಮೊದಲು ರಾಜ್ಯ ಸರ್ಕಾರ ರಚಿಸಿದ್ದ ಎಸ್‌ಐಟಿಯನ್ನು ಸುಪ್ರೀಂಕೋರ್ಟ್‌ ಪುನಾರಚಿಸಿತು. ಸಿಬಿಐ, ರಾಜ್ಯ ಸರ್ಕಾರ ಹಾಗೂ ಎಫ್‌ಎಸ್‌ಎಸ್‌ಎಐ ಅಧಿಕಾರಿಗಳನ್ನೂ ಒಳಗೊಂಡ ಹೊಸ ಎಸ್‌ಐಟಿಯನ್ನು ಅದು ನೇಮಕ ಮಾಡಿತ್ತು. ವಿಧಿವಿಜ್ಞಾನ ವರದಿಯಲ್ಲಿ ಲಡ್ಡು ತಯಾರಿಕೆಗೆ ಬಳಸಿದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನಂಶ ಪತ್ತೆಯಾಗಿದೆ ಎಂಬ ವರದಿ ಬಂದಿತ್ತು.

Kannada Bar & Bench
kannada.barandbench.com